ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ದೇಗುಲಗಳಿಗೆ ಭಕ್ತರು ನೀಡುವ ಚಿನ್ನಾಭರಣ ನಗದೀಕರಣ ಯೋಜನೆಗೆ ಚಾಲನೆ

Last Updated 13 ಅಕ್ಟೋಬರ್ 2021, 15:03 IST
ಅಕ್ಷರ ಗಾತ್ರ
ಚೆನ್ನೈ: ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ಭಕ್ತರು ನೀಡುವ ಚಿನ್ನದ ಸಣ್ಣ ಆಭರಣಗಳ ನಗದೀಕರಣ ಯೋಜನೆಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮರು ಚಾಲನೆ ನೀಡಿದರು.
ಸರ್ಕಾರದ ನಿಯಂತ್ರಣದಿಂದ ದೇವಸ್ಥಾನಗಳನ್ನು ಮುಕ್ತಗೊಳಿಸಲು ಹೋರಾಡುವುದಾಗಿ ಹಲವು ಸಂಘಟನೆಗಳು ಧ್ವನಿ ಎತ್ತಿರುವಾಗಲೇ, ಭಕ್ತರು ಹರಕೆಯ ಚಿನ್ನದ ಸಣ್ಣ ಆಭರಣಗಳನ್ನು ಗಟ್ಟಿಗಳಾಗಿ ಪರಿವರ್ತಿಸಿ, ನಂತರ ಚಿನ್ನದ ಗಟ್ಟಿಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟು, ದೇವಸ್ಥಾನಗಳಿಗೆ ಬಡ್ಡಿ ರೂಪದಲ್ಲಿ ಆದಾಯ ತಂದುಕೊಡುವ ಯೋಜನೆ ಇದಾಗಿದೆ.
ಚೆನ್ನೈನ ತಿರುವೇಕಾಡು, ತಿರುಚಿನಾಪಳ್ಳಿಯ ಸಮಯಪುರಂ, ವಿರುಧುನಗರ ಜಿಲ್ಲೆಯ ಇರುಕನಕುಡಿಗಳಲ್ಲಿನ ಮೂರು ದೇವಾಲಯಗಳಲ್ಲಿನ ಚಿನ್ನದ ಸಣ್ಣ ಆಭರಣಗಳ ನಗದೀಕರಣ ಯೋಜನೆಯನ್ನು ಸ್ಟಾಲಿನ್ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಸರ್ಕಾರವು ರಾಜ್ಯವನ್ನು ಚೆನ್ನೈ, ಮಧುರೈ ಮತ್ತು ತಿರುಚಿನಾಪಳ್ಳಿ ಹೀಗೆ ಮೂರು ವಲಯಗಳಾಗಿ ವಿಂಗಡಿಸಿದ್ದು, ದೇವಸ್ಥಾನದ ಚಿನ್ನಾಭರಣಗಳ ನಗದೀಕರಣ ಪ್ರಕ್ರಿಯೆಯ ಮೇಲ್ವಿಚಾರಣೆಗೆ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿದೆ. ಇಡೀ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ ಎಂದು ಮಾನವ ಸಂಪನ್ಮೂಲ ಮತ್ತು ದತ್ತಿ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಹತ್ತು ವರ್ಷಗಳಲ್ಲಿ ಭಕ್ತರು ದೇವಸ್ಥಾನಗಳಿಗೆ ದಾನ ಮಾಡಿದ ಚಿನ್ನದ ಆಭರಣಗಳು ನಿಷ್ಪ್ರಯೋಜಕವಾಗಿವೆ. ಸರ್ಕಾರ ಚಿನ್ನದ ಆಭರಣಗಳನ್ನು ಚಿನ್ನದ ಗಟ್ಟಿಗಳಾಗಿ ಪರಿವರ್ತಿಸುವ ಮೂಲಕ ಮತ್ತು ಬ್ಯಾಂಕುಗಳಲ್ಲಿ ಠೇವಣಿ ಇಟ್ಟು, ನಗದೀಕರಣ ಮಾಡುವ ಮೂಲಕ ದೇವಾಲಯಕ್ಕೆ ಆದಾಯ ತಂದುಕೊಡಲಿದೆ. ಈ ಹಣವನ್ನು ವಿವಿಧ ಅಭಿವೃದ್ಧಿ ಉದ್ದೇಶಗಳಿಗಾಗಿ ಬಳಸಬಹುದು ಎಂದು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಹೇಳಿದೆ.
ಸರ್ಕಾರದ ಈ ಕ್ರಮವು ಹೊಸತಲ್ಲದಿದ್ದರೂ, ಹಲವು ಗುಂಪುಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಚಿನ್ನದ ನಗದೀಕರಣ ಯೋಜನೆ ಸಂಬಂಧ ಮಾನವ ಸಂಪನ್ಮೂಲ ಮತ್ತು ದತ್ತಿ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿವೆ.
ನ್ಯಾಯಾಲಯದಲ್ಲಿ, ತಮಿಳುನಾಡು ಸರ್ಕಾರವು ಈ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಈ ಯೋಜನೆ 1977ರಿಂದ ಜಾರಿಯಲ್ಲಿದೆ. ಪಳನಿಯಲ್ಲಿರುವ ಮುರುಗನ್ ದೇವಸ್ಥಾನ, ಮಧುರೆಯ ಮೀನಾಕ್ಷಿ ಅಮ್ಮನ್ ದೇವಸ್ಥಾನ, ತಿರುಚೆಂಡೂರಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭಕ್ತರು ಉಡುಗೊರೆಯಾಗಿ ಚಿನ್ನವನ್ನು ನೀಡುತ್ತಿದ್ದರು. ಸಮಯಪುರದ ಮರಿಯಮ್ಮನ ದೇವಸ್ಥಾನದಲ್ಲಿನ ಸಣ್ಣ ಆಭರಣಗಳನ್ನು ಚಿನ್ನದ ಗಟ್ಟಿಗಳಾಗಿ ಪರಿವರ್ತಿಸಲಾಗಿದೆ. 500 ಕೆ.ಜಿಗಿಂತಲೂ ಹೆಚ್ಚು ಚಿನ್ನದ ಗಟ್ಟಿಗಳನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದೆ ಎಂದು ಸರ್ಕಾರ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT