ಶುಕ್ರವಾರ, ಮೇ 20, 2022
21 °C

ತಿರುಪತಿಯ ತಿರುಮಲದಲ್ಲಿ ಕಾಲ್ತುಳಿತದ ಪರಿಸ್ಥಿತಿ; ಮೂವರಿಗೆ ಗಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಆಂಧ್ರ ಪ್ರದೇಶದ ತಿರುಪತಿಯಲ್ಲಿರುವ ತಿರುಮಲ ದೇವಾಲಯದ ಸಮೀಪ ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ. 'ಸರ್ವದರ್ಶನ ಟಿಕೆಟ್‌' ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಟಿಕೆಟ್‌ ಕೌಂಟರ್‌ ಬಳಿ ಜಮಾಯಿಸಿದ್ದರಿಂದ ಈ ಘಟನೆ ಸಂಭವಿಸಿರುವುದಾಗಿ ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.

ನೂಕಾಟ, ತಳ್ಳಾಟ ನಡೆದಿರುವುದು ಕೆಲವು ವಿಡಿಯೊಗಳಲ್ಲಿ ದಾಖಲಾಗಿದೆ. ಪೊಲೀಸ್‌ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಮಕ್ಕಳು ಸೇರಿದಂತೆ ನೆರೆದಿದ್ದ ಭಕ್ತಾದಿಗಳ ಅಳು, ಚೀರಾಟ ಕೇಳಿತು. ಪೊಲೀಸರು ಗುಂಪು ನಿಯಂತ್ರಿಸಲು ಮುಂದಾಗುತ್ತಿದ್ದಂತೆ ಜನರು ಆತಂಕದಲ್ಲಿ ಚೆಲ್ಲಾಪಿಲ್ಲಿಯಾಗಿ ಓಡಿದರು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಪ್ರಸಿದ್ಧ ಯಾತ್ರಾಸ್ಥಳದಲ್ಲಿ ದುಡ್ಡು ಮಾಡುವ ಬಗೆಗೆ ಮಾತ್ರವೇ ರಾಜ್ಯ ಸರ್ಕಾರವು ಗಮನ ಕೇಂದ್ರೀಕರಿಸಿದೆ ಎಂದು ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

'ತಿರುಮಲವನ್ನು ಕೇವಲ ಆದಾಯದ ಮೂಲವಾಗಿ ಮಾತ್ರವೇ ಪರಿಗಣಿಸಲಾಗುತ್ತಿದ್ದು, ಭಕ್ತಾದಿಗಳಿಗೆ ದರ್ಶನ ಮತ್ತು ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸುವುದನ್ನು ಅಲಕ್ಷಿಸಲಾಗಿದೆ. ಟಿಟಿಡಿ ಕೂಡಲೇ ಎಚ್ಚೆತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ' ಎಂದು ಚಂದ್ರಬಾಬು ನಾಯ್ದು ಹೇಳಿದ್ದಾರೆ.

ಟಿಟಿಡಿಯ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಘಟನೆಯ ಸಂಬಂಧ ಪ್ರತಿಕ್ರಿಯಿಸಿದ್ದು, ಪೊಲೀಸರು ಪರಿಸ್ಥಿತಿಯನ್ನು ಕ್ಷಿಪ್ರಗತಿಯಲ್ಲಿ ನಿಯಂತ್ರಣಕ್ಕೆ ತಂದರು ಹಾಗೂ ಅಲ್ಲಿ ಕಾಲ್ತುಳಿತದಂತಹ ಸ್ಥಿತಿ ನಿರ್ಮಾಣವಾಗಿರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ–

'ನಿತ್ಯ ತಿರುಮಲ ದೇವಾಲಯದಲ್ಲಿ ಸುಮಾರು 80,000 ಭಕ್ತಾದಿಗಳು ದರ್ಶನ ಪಡೆಯಬಹುದಾಗಿದೆ. ಇಂದು ಅನಿರೀಕ್ಷಿತವಾಗಿ ಭಕ್ತಾದಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹೀಗಾಗಿ, ಜನರ ಗುಂಪು ದೊಡ್ಡದಾಗಿದೆ. ಈಗ ಎಲ್ಲರನ್ನೂ ತಿರುಮಲದ ಸಾಲಿಗೆ ಕಳುಹಿಸಲಾಗಿದೆ ಹಾಗೂ ಪರಿಸ್ಥಿತಿ ನಿಯಂತ್ರಣದಲ್ಲಿದೆ' ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.

'ಕೆಜಿಎಫ್ ಚಾಪ್ಟರ್‌ 2' ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಲು ಅನೇಕ ದೇಗುಲಗಳಿಗೆ ಭೇಟಿ ನೀಡುತ್ತಿರುವ ನಟ ಯಶ್‌, ಸೋಮವಾರ ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು