ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡೋಸಲ್ಫಾನ್‌ ಸಂತ್ರಸ್ತರ ದುರವಸ್ಥೆ ನಿರ್ಲಕ್ಷಿಸಬೇಡಿ: ಕೇರಳ ಹೈಕೋರ್ಟ್

Last Updated 17 ಡಿಸೆಂಬರ್ 2022, 11:25 IST
ಅಕ್ಷರ ಗಾತ್ರ

ಕೊಚ್ಚಿ: ಎಂಡೋಸಲ್ಫಾನ್‌ ಸಂತ್ರಸ್ತರು ಮತ್ತು ಅವರ ಕುಟುಂಬದ ದುರವಸ್ಥೆಯನ್ನು ಸರ್ಕಾರವಾಗಲಿ, ನ್ಯಾಯಾಲಯವಾಗಲಿ ನಿರ್ಲಕ್ಷಿಸಬಾರದು ಎಂದು ಕೇರಳ ಹೈಕೋರ್ಟ್‌ ಹೇಳಿದೆ.

ಎಂಡೋಸಲ್ಫಾನ್‌ ದುಷ್ಪರಿಣಾಮದಿಂದ 11ನೇ ವಯಸ್ಸಿಗೇ ಮೃತಪಟ್ಟಿರುವ ಕಾಸರಗೋಡಿನ ಅನ್ ಮರಿಯಾಳ ಕುಟುಂಬದವರು ಚಿಕಿತ್ಸೆಗಾಗಿ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು ಎಂದೂ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಸರ್ಕಾರವು ಬಾಲಕಿಯರು, ಅಸಮರ್ಥ ವ್ಯಕ್ತಿಗಳು ಮತ್ತು ಅಸಹಾಯಕರ ಪರವಾಗಿ ನಿಲ್ಲಬೇಕು ಎಂದು ನ್ಯಾಯಮೂರ್ತಿ ವಿ.ಜಿ. ಅರುಣ್‌ ಹೇಳಿದ್ದಾರೆ.

‘ಅನ್ ಮರಿಯಾಳಂತಹ ಸಂತ್ರಸ್ತರಿಗೆ ₹5ಲಕ್ಷ ಪರಿಹಾರ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಶಿಫಾರಸು ಮಾಡಿದೆ. ಹೀಗಿರುವಾಗ ರಾಜ್ಯ ಸರ್ಕಾರವು ತಾಂತ್ರಿಕ ಅಂಶಗಳಿಗೆ ಜೋತು ಬಿದ್ದು ಸಂತ್ರಸ್ತರಿಗೆ ಸೌಲಭ್ಯ ನೀಡುವುದನ್ನು ನಿರಾಕರಿಸಬಾರದು’ ಎಂದಿದ್ದಾರೆ.

2005ರಲ್ಲಿ ಜನಿಸಿದ್ದ ಅನ್ ಮರಿಯಾಳಲ್ಲಿ ಹುಟ್ಟಿನಿಂದಲೇ ಶೇ80ರಷ್ಟು ಮಾನಸಿಕ ಬೆಳವಣಿಗೆ ಕುಂಠಿತವಾಗಿತ್ತು ಮತ್ತು ಆಕೆ ಬಹು ಅಂಗವೈಕಲ್ಯಕ್ಕೂ ಒಳಗಾಗಿದ್ದಳು. ಕಾಸರಗೋಡು ಜಿಲ್ಲೆಯ 11 ಗ್ರಾಮಗಳಲ್ಲಿ 1978ರಿಂದ 2001ರ ನಡುವೆ ಬಳಕೆ ಮಾಡಿದ್ದ ಎಂಡೋಸಲ್ಫಾನ್‌ ಕೀಟನಾಶಕದ ದುಷ್ಪರಿಣಾಮದಿಂದಾಗಿ ಆರೋಗ್ಯ ಸಮಸ್ಯೆಗೆ ಒಳಗಾದ ಸಾವಿರಾರು ಮಂದಿಯಲ್ಲಿ ಈಕೆಯೂ ಒಬ್ಬಳಾಗಿದ್ದಾಳೆ.

2017ರಲ್ಲಿ ಆನ್ ಮರಿಯಾ ನಿಧನರಾಗುವವರೆಗೂ ತಾಯಿ ಮತ್ತು ಅಜ್ಜ ಆಕೆಗೆ ಚಿಕಿತ್ಸೆ ಒದಗಿಸಲು ಪರದಾಡಿದ್ದರು. ಅದಕ್ಕಾಗಿ ಕೆನರಾ ಬ್ಯಾಂಕ್‌ನಿಂದ ₹3ಲಕ್ಷ ಹಾಗೂ ಎಸ್‌ಬಿಐ ಬ್ಯಾಂಕ್‌ನಿಂದ ₹69ಸಾವಿರ ಸಾಲ ಪಡೆದಿದ್ದರು.

ಸಾಲದ ಬಾಕಿ ಮೊತ್ತ ₹2.3 ಲಕ್ಷವನ್ನು ಮುರುಪಾವತಿಸಬೇಕು ಎಂದು ಬ್ಯಾಂಕ್‌ ಅಧಿಕಾರಿಗಳು ಸೂಚಿಸಿದಾಗ ಬಾಲಕಿಯ ಕುಟುಂಬದವರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ, 2014ರಲ್ಲಿ ಎಂಡೋಸಲ್ಫಾನ್‌ ಸಂತ್ರಸ್ತರ ಸಾಲ ಮನ್ನಾ ಮಾಡಲು ಕೇರಳ ಸರ್ಕಾರ ಹೊರಡಿಸಿದ್ದ ಆದೇಶದಂತೆ ತಮ್ಮ ಸಾಲವನ್ನೂ ಮನ್ನಾ ಮಾಡುವಂತೆ ಕೋರಿದ್ದರು.

2016ರಲ್ಲಿ ಈ ಕುರಿತು ಜಿಲ್ಲಾಧಿಕಾರಿ ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ್ದರು. 2011 ಜೂನ್‌ 30ರ ಮೊದಲು ಪಡೆದ ಸಾಲವನ್ನು ಮಾತ್ರವೇ ಮನ್ನಾ ಮಾಡಲಾಗುವುದು ಎಂದು ಸರ್ಕಾರ ಅದಕ್ಕೆ ಪ್ರತಿಕ್ರಿಯೆ ನೀಡಿತ್ತು. ಕೇವಲ ₹88,400 ಮಾತ್ರ ಮನ್ನಾ ಮಾಡುವುದಾಗಿಯೂ ಹೇಳಿತ್ತು.

ಬಳಿಕ ಸಂತ್ರಸ್ತೆಯ ಕುಟುಂಬಕ್ಕೆ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್‌ ನೋಟಿಸ್‌ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT