ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೆರಲೈಟ್‌ನಲ್ಲಿ ಆಮ್ಲಜನಕ ಉತ್ಪಾದನೆ ಆರಂಭ

ಮಹಾರಾಷ್ಟ್ರದ ಧಾರಾಶಿವ್ ಸಕ್ಕರೆ ಕಾರ್ಖಾನೆಯಲ್ಲೂ ಪ್ರಾಣವಾಯು ಉತ್ಪಾದನೆ ಶುರು
Last Updated 13 ಮೇ 2021, 6:41 IST
ಅಕ್ಷರ ಗಾತ್ರ

ಚೆನ್ನೈ: ತೂತುಕುಡಿಯಲ್ಲಿರುವ ವೇದಾಂತ ಕಂಪನಿಯ ಸ್ಟೆರಲೈಟ್‌ ತಾಮ್ರದ ಕಾರ್ಖಾನೆಯಲ್ಲಿ ಆಮ್ಲಜನಕ ಉತ್ಪಾದನೆ ಆರಂಭವಾಗಿದ್ದು, ಉತ್ಪಾದನೆಗೊಂಡ ಆಮ್ಲಜನಕ ಹೊತ್ತ ಮೊದಲ ಟ್ಯಾಂಕರ್‌ ಅನ್ನು ಗುರುವಾರ ಕಳುಹಿಸಿಕೊಡಲಾಯಿತು.

ದೇಶದಲ್ಲಿ ಆಮ್ಲಜನಕ್ಕೆ ತೀವ್ರ ಅಭಾವ ಉಂಟಾದ ಕಾರಣ ಏಪ್ರಿಲ್‌ 26ರಂದು ಎಐಎಡಿಎಂಕೆ ಸರ್ಕಾರ ನಾಲ್ಕು ತಿಂಗಳ ಅವಧಿಗೆ ಆಮ್ಲಜನಕ ಉತ್ಪಾದನೆಗೆ ಅನುಮತಿ ನೀಡಿತ್ತು. ಹೀಗಾಗಿ 2018ರಿಂದ ಮುಚ್ಚಲಾಗಿದ್ದ ಕಾರ್ಖಾನೆಯನ್ನು ಪುನರಾರಂಭಿಸಲಾಗಿತ್ತು.

ಗುರುವಾರ 4.8 ಟನ್‌ ಹೊತ್ತ ಟ್ಯಾಂಕರ್‌ ಕಾರ್ಖಾನೆಯಿಂದ ನಿರ್ಗಮಿಸಿತು. ಆರಂಭದಲ್ಲಿ ಪ್ರತಿ ದಿನ ಇಂತಹ ಎರಡು ಟ್ಯಾಂಕರ್‌ಗಳು ಆಮ್ಲಜನಕ ಹೊತ್ತು ಇಲ್ಲಿಂದ ಸಾಗಲಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ ಪಿಡುಗು ಒಮ್ಮಿಂದೊಮ್ಮೆಗೆ ದೇಶದಲ್ಲಿ ಹೆಚ್ಚಳವಾಗಿದ್ದರಿಂಧ ಆಮ್ಲಜನಕಕ್ಕೆ ಹಾಹಾಕಾರ ಎದ್ದಾಗ ಮೊದಲಿಗೆ ಸ್ಟೆರಲೈಟ್‌ ಕಾರ್ಖಾನೆಯ ಬಗ್ಗೆ ಸುಪ್ರೀಂ ಕೋರ್ಟ್‌ ಪ್ರಸ್ತಾಪ ಮಾಡಿತ್ತು. ಆಮ್ಲಜನಕ ಇಲ್ಲದೆ ಜನರು ಸಾಯುತ್ತಿರುವಾಗ ತಮಿಳುನಾಡು ಸರ್ಕಾರ ಏಕೆ ಸ್ಟೆರಲೈಟ್‌ ಕಾರ್ಖಾನೆಯನ್ನು ಆಮ್ಲಜನಕ ಉತ್ಪಾದನೆಗೆ ಬಳಸಬಾರದು ಎಂದು ಅದು ಕೇಳಿತ್ತು. ಆ ಬಳಿಕವಷ್ಟೇ ತಮಿಳುನಾಡು ಸರ್ಕಾರ ಸರ್ವ ಪಕ್ಷ ಸಭೆ ಕರೆದು ಅಲ್ಲಿ ಆಮ್ಲಜನಕ ಉತ್ಪಾದನೆಗೆ ಅವಕಾಶ ಕಲ್ಪಿಸಿದೆ.‌‌

ತಮಿಳುನಾಡು ರಾಜ್ಯದ ಬೇಡಿಕೆ ಈಡೇರುವ ತನಕ ಸ್ಟೆರಲೈಟ್‌ನಲ್ಲಿ ಉತ್ಪಾದಿಸಲಾದ ಆಮ್ಲಜನಕವನ್ನು ರಾಜ್ಯದಲ್ಲೇ ಬಳಸಬೇಕು, ಬಳಿಕಷ್ಟೇ ಹೊರ ರಾಜ್ಯಗಳಿಗೆ ಕಳುಹಿಸಬಹುದು ಎಂದು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ಹೀಗಾಗಿ ಸದ್ಯ ಉತ್ಪಾದನೆಯಾಗುವ ಸ್ಟೆರಲೈಟ್‌ ಆಮ್ಲಜನಕ ತಮಿಳುನಾಡಿಗಷ್ಟೇ ಪೂರೈಕೆಯಾಗಲಿದೆ.‌

ಒಸ್ಮಾನಾಬಾದ್‌ ವರದಿ: ಮಹಾರಾಷ್ಟ್ರದ ಓಸ್ಮಾನಾಬಾದ್‌ನಲ್ಲಿರುವ ಧಾರಾಶಿವ ಸಕ್ಕರೆ ಕಾರ್ಖಾನೆಯಲ್ಲಿ ಆಮ್ಲಜನಕ ಉತ್ಪಾದನೆಯನ್ನು ಗುರುವಾರದಿಂದ ಆರಂಭಿಸಲಾಗಿದೆ.

ಈ ಕಾರ್ಖಾನೆಯಲ್ಲಿರುವ ಎಥನಾಲ್‌ ಉತ್ಪಾದನಾ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಹಾಗೂ ಕೆಲವು ಹೊಸ ಯಂತ್ರಗಳನ್ನು ಅಳವಡಿಸಿಕೊಂಡು ಇಲ್ಲಿ ಆಮ್ಲಜನಕ ಉತ್ಪಾದಿಸಲಾಗುತ್ತಿದೆ.‌

ಗುರುವಾರ ಇಲ್ಲಿ ಸುಮಾರು 90 ಸಿಲಿಂಡರ್‌ಗಳನ್ನು ತುಂಬಿಸಲಾಯಿತು. ಪ್ರತಿ ವಾರ 900 ಸಿಲಿಂಡರ್‌ಗಳನ್ನು ತುಂಬಿಸುವ ಮತ್ತು ಕ್ರಮೇಣ ಈ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವು ಗುರಿ ಇಟ್ಟುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT