ಶನಿವಾರ, ಮೇ 28, 2022
21 °C

ಜೋಧಪುರದಲ್ಲಿ ಗಲಭೆ: ಕಲ್ಲು ತೂರಾಟ, ಕರ್ಫ್ಯೂ ಜಾರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೋಧಪುರ: ಈದ್‌–ಉಲ್‌–ಫಿತ್ರ್‌ ಆಚರಣೆಗೂ ಮುನ್ನ, ರಾಜಸ್ಥಾನದ ಜೋಧಪುರದಲ್ಲಿ ಮಂಗಳವಾರ ಕೋಮು ಗಲಭೆ ಸಂಭವಿಸಿದೆ. ನಗರದ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ಮಧ್ಯರಾತ್ರಿ ವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಗಲಭೆ ಬೆನ್ನಲ್ಲೇ, ನಗರದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವದಂತಿಗಳು ಹಬ್ಬುವುದನ್ನು ತಡೆಯುವ ಸಲುವಾಗಿ ನಗರದ ಕೆಲ ಭಾಗಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿ ಜೋಧಪುರ ಡಿಸಿಪಿ ಆದೇಶಿಸಿದ್ದಾರೆ.

ಜೋಧಪುರ, ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಅವರ ಸ್ವಂತ ಊರು. ಶಾಂತಿ ಕಾಪಾಡುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.

ಘಟನೆ ವಿವರ: ನಗರದ ಜಾಲೋರಿ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲಮುಕುಂದ ಬಿಸ್ಸಾ ಅವರ ಪ್ರತಿಮೆ ಇದ್ದು, ಈದ್‌ ಅಂಗವಾಗಿ ಮುಸ್ಲಿಮರು ಸೋಮವಾರ ರಾತ್ರಿ ಪ್ರತಿಮೆ ಪಕ್ಕ ಈದ್‌ ಧ್ವಜಗಳನ್ನು ಅಳವಡಿಸಿದ್ದು ಘರ್ಷಣೆ ಹಾಗೂ ಕಲ್ಲು ತೂರಾಟಕ್ಕೆ ಕಾರಣವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪರಶುರಾಮ ಜಯಂತಿ ಅಂಗವಾಗಿ ಬಿಸ್ಸಾ ಪ್ರತಿಮೆ ಬಳಿ ಕೇಸರಿ ಧ್ವಜಗಳನ್ನು ಅಳವಡಿಸಲಾಗಿತ್ತು. ಅವುಗಳನ್ನು ತೆಗೆದುಹಾಕಲಾಗಿದೆ’ ಎಂದು ಹಿಂದೂಗಳು ಆರೋಪಿಸಿದ್ದಾರೆ.

‘ಇದೇ ವಿಷಯವಾಗಿ ಸೋಮವಾರ ರಾತ್ರಿ ಕಲ್ಲು ತೂರಾಟ ಹಾಗೂ ಘರ್ಷಣೆ ಸಂಭವಿಸಿತು. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ನಿಯಂತ್ರಲು ಕ್ರಮ ಕೈಗೊಂಡರು. ಅಶ್ರುವಾಯು ಸಿಡಿಸಿ ಗುಂಪನ್ನು ಚದುರಿಸಿದ್ದರು. ಈ ಸಂದರ್ಭದಲ್ಲಿ ಐವರು ಪೊಲೀಸರಿಗೆ ಗಾಯಗಳಾಗಿವೆ’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಮಂಗಳವಾರ ಈದ್‌ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನೆರವೇರಿದ ಬಳಿಕ ಮತ್ತೆ ಗಲಭೆ ಶುರುವಾಗಿ, ಕೆಲವರು ಜಾಲೋರಿ ಗೇಟ್‌ ಸಮೀಪ ಕಲ್ಲು ತೂರಾಟ ನಡೆಸಿದರು. ಈ ವೇಳೆ ಅಂಗಡಿಗಳು, ವಾಹನಗಳು ಹಾಗೂ ಮನೆಗಳ ಮೇಲೂ ಕಲ್ಲುಗಳನ್ನು ತೂರಲಾಗಿದೆ.

ಲಾಠಿ ಪ್ರಹಾರ ನಡೆಸಿ ಪೊಲೀಸರು ಉದ್ರಿಕ್ತರನ್ನು ಚದುರಿಸಿ, ಕೆಲವರನ್ನು ವಶಕ್ಕೆ ತೆಗೆದುಕೊಂಡರು.

ಟೀಕೆ: ಜೋಧಪುರದ ಬಿಜೆಪಿ ಶಾಸಕಿ ಸೂರ್ಯಕಾಂತಾ ವ್ಯಾಸ್‌ ಅವರು ಘಟನೆಯನ್ನು ಖಂಡಿಸಿದ್ದು, ಸ್ವಾತಂತ್ರ್ಯ ಹೋರಾಟಗಾರ ಬಿಸ್ಸಾ ಅವರ ಪ್ರತಿಮೆ ಪಕ್ಕ ಈದ್‌ ಧ್ವಜಗಳನ್ನು ಅಳವಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಬಿಸ್ಸಾ ಅವರ ಪ್ರತಿಮೆ ಪಕ್ಕದಲ್ಲಿಯೇ ಅವರು (ಮುಸ್ಲಿಮರು) ಧ್ವಜ ಅಳವಡಿಸಿರುವುದಕ್ಕೆ ನಮ್ಮ ಆಕ್ಷೇಪ ಇದೆ. ಇದನ್ನು ನಾವು ಮರೆಯುವುದಿಲ್ಲ’ ಎಂದು ಹೇಳಿದ್ದಾರೆ. ಅವರು ಘಟನಾ ಸ್ಥಳಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿದ್ದರು.

‘ಸ್ವಾತಂತ್ರ್ಯ ಸೇನಾನಿ ಬಾಲಮುಕುಂದ ಬಿಸ್ಸಾ ಅವರ ಪ್ರತಿಮೆ ಮೇಲೆ ಸಮಾಜವಿರೋಧಿ ಶಕ್ತಿಗಳು ಇಸ್ಲಾಮಿಕ್‌ ಧ್ವಜವನ್ನು ಅಳವಡಿಸಿದ್ದು ಹಾಗೂ ಪರಶುರಾಮ ಜಯಂತಿ ಅಂಗವಾಗಿ ಆ ಸ್ಥಳದಲ್ಲಿ ಹಾಕಿದ್ದ ಕೇಸರಿ ಧ್ವಜವನ್ನು ತೆಗೆದಿರುವುದು ಖಂಡನೀಯ’ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಸತೀಶ್‌ ಪೂನಿಯಾ ಹೇಳಿದ್ದಾರೆ.

ಈ ಬಗ್ಗೆ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಕೇಸರಿ ಧ್ವಜವನ್ನು ತೆಗೆದುಹಾಕಿ,  ಆ ಸ್ಥಳದಲ್ಲಿ ಇಸ್ಲಾಮಿಕ್‌ ಧ್ವಜ ಅಳವಡಿಸಲಾಗಿದೆ. ಕರೌಲಿಯಲ್ಲಿಯೂ ಕೋಮು ಗಲಭೆ ನಡೆಯಿತು. ಹೀಗಾಗಿ, ಇಂಥ ಘಟನಗಳು ರಾಜ್ಯ ಸರ್ಕಾರದ ಬೆಂಬಲದಿಂದಲೇ ನಡೆಯುತ್ತಿವೆ ಎಂಬುದು ಸಾಬೀತಾದಂತಾಗಿದೆ’ ಎಂದು ಪೂನಿಯಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು