ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಪ್ರತಿಭಟನೆಗೆ ವಿದ್ಯಾರ್ಥಿಗಳ ಸೇರ್ಪಡೆ

Last Updated 17 ಜೂನ್ 2022, 20:15 IST
ಅಕ್ಷರ ಗಾತ್ರ

ನವದೆಹಲಿ:ಕೇಂದ್ರ ಸರ್ಕಾರದ ನೂತನ ‘ಅಗ್ನಿಪಥ’ ಯೋಜನೆಯನ್ನು ವಿರೋಧಿಸಿ ದೆಹಲಿಯಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ಇದರಿಂದ ದೆಹಲಿಯ ಹಲವೆಡೆ ಮೆಟ್ರೊ ರೈಲುನಿಲ್ದಾಣಗಳ ಬಾಗಿಲುಗಳನ್ನು ಬಂದ್‌ ಮಾಡಬೇಕಾದ ಸ್ಥಿತಿ ಎದುರಾಗಿತ್ತು. ಹಲವು ವಿದ್ಯಾರ್ಥಿ ಸಂಘಟನೆಗಳು ಈ ಯೋಜನೆಯನ್ನು ವಿರೋಧಿಸಿ ಸೋಮವಾರ ಭಾರಿ ಪ್ರತಿಭಟನೆಗೆ ಕರೆ ನೀಡಿವೆ.

ಈ ಯೋಜನೆ ವಿರುದ್ಧ ದೇಶದ ಎಲ್ಲೆಡೆ ಪ್ರತಿಭಟನೆ ಹಿಂಸೆಗೆ ತಿರುಗಿದ್ದರೂ ದೆಹಲಿಯಲ್ಲಿ ಮಾತ್ರ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ. ‘ಪ್ರತಿಭಟನೆ ನಡೆಸಲು ವಿದ್ಯಾರ್ಥಿ ಸಂಘಟನೆಗಳು ಅನುಮತಿ ಪಡೆದಿರಲಿಲ್ಲ. ಆದರೂ ಪ್ರತಿಭಟನೆಗೆ ಅವಕಾಶ ನೀಡಿದೆವು’ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಪ್ರತಿಭಟನೆ ನಡೆದ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಪೊಲೀಸರು ಬಂದ್ ಮಾಡಿದ್ದರು ಮತ್ತು ಬೇರೆಡೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಯುವ ಕಾಂಗ್ರೆಸ್‌ ಸದಸ್ಯರು ದೆಹಲಿಯಲ್ಲಿನ ತಮ್ಮ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಆದರೆ ಅವರು ಅನುಮತಿ ಪಡೆಯದೇ ಇದ್ದ ಕಾರಣ, ಮೆರವಣಿಗೆ ನಡೆಸಲು ಪೊಲೀಸರು ಅವಕಾಶ ನೀಡಲಿಲ್ಲ.

ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ಸದಸ್ಯರು ದೆಹಲಿಯ ಹಲವೆಡೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಭಾರತೀಯ ಸ್ಟೂಡೆಂಟ್ಸ್‌ ಫೆಡರೇಷನ್ (ಎಸ್‌ಎಫ್‌ಐ), ಸಂಯುಕ್ತ ರೋಜಗಾರ್ ಆಂದೋಲನ ಸಮಿತಿ, ದೇಶ್ ಕಿ ಬಾತ್ ಫೌಂಡೇಷನ್‌ನ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾದರು.ಪ್ರತಿಭಟನೆ ವೇಳೆ, ‘ಸರ್ವಾಧಿಕಾರ ನಡೆಯುವುದಿಲ್ಲ, ನಿಮ್ಮ ಅಗ್ನಿಪಥ ವಾಪಸ್‌ ತೆಗೆದುಕೊಳ್ಳಿ’, ‘ಸೇನೆಯ ಖಾಲಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿ’ ಎಂದು ಘೋಷಣೆ ಕೂಗಲಾಯಿತು.

‘ಭಾರತ ಸೂಪರ್‌ ಪವರ್‌ ಆಗಲಿದೆ’

‘ಸೇನೆಯ ವಿವಿಧ ವಿಭಾಗಗಳ ಸಹಯೋಗದಲ್ಲಿ ಕೌಶಲ ಅಭಿವೃದ್ಧಿ ಸಚಿವಾಲಯವುಅಗ್ನಿವೀರರಿಗೆ ಅಗತ್ಯ ತರಬೇತಿಯನ್ನು ನೀಡಲಿದೆ. ಇದರಿಂದ ದೇಶದ ಸೇನೆಯಲ್ಲೂ ಕೌಶಲವಿರುವ ಸೈನಿಕರು ಇರಲಿ
ದ್ದಾರೆ. ಜತೆಗೆ ದೇಶದ ಉದ್ಯೋಗ ಮಾರುಕಟ್ಟೆಯಲ್ಲಿ ಕೌಶಲಯುಕ್ತ ನೌಕರರು ದೊರೆಯಲಿದ್ದಾರೆ’ ಎಂದು ಕೌಶಲ ಅಭಿವೃದ್ಧಿ ಸಚಿವಾಲಯವು ಹೇಳಿದೆ.

‘ಈ ತರಬೇತಿಯಲ್ಲಿ ದೊರೆಯುವ ಕೌಶಲಗಳು, ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟಿನ ಪಠ್ಯಕ್ರಮಕ್ಕೆ ಪೂರಕವಾಗಿ ಇರುತ್ತವೆ. ನಾಲ್ಕು ವರ್ಷಗಳ ನಂತರ ಅಗ್ನಿವೀರರು ಔದ್ಯೋಗಿಕ ಅನುಭವವನ್ನೂ ಹೊಂದಿರುತ್ತಾರೆ. ಜತೆಗೆ ಕೌಶಲಗಳನ್ನೂ ಕಲಿತಿರುತ್ತಾರೆ. ಸಶಸ್ತ್ರ ಪಡೆಗಳಲ್ಲಿ ಇವರಿಗೆ ನೀಡಲಾಗುವ ತರಬೇತಿ, ಪ್ರಮಾಣಪತ್ರ ಪರೀಕ್ಷೆಗಳ ರೂಪುರೇಷೆಗಳನ್ನು ಅಂತಿಮಗೊಳಿಸಲಾಗುತ್ತಿದೆ. ಅಗ್ನಿಪಥ ಯೋಜನೆಯಿಂದ ದೇಶದ ಗಡಿಯು ಸುರಕ್ಷಿತವಾಗಿ ಇರಲಿದೆ ಮತ್ತು ದೇಶದೊಳಗೆ ಅತ್ಯಾಧುನಿಕ ಕೌಶಲ ಹೊಂದಿದ ಅಭ್ಯರ್ಥಿಗಳ ದಂಡೂ ಹೆಚ್ಚಲಿದೆ. ಇದರಿಂದ ಭಾರತವು ಸೂಪರ್ ಪವರ್ ಆಗಲಿದೆ’ ಎಂದು ಸಚಿವಾಲಯವು ಹೇಳಿದೆ.

‘ಯುವಕರ ಹಾದಿ ತಪ್ಪಿಸಲಾಗುತ್ತಿದೆ’: ‘ಅಗ್ನಿಪಥ ಯೋಜನೆಯು
ಒಂದು ಅತ್ಯುತ್ತಮವಾದ ಕ್ರಮವಾಗಿದೆ. ಆದರೆ, ಕೆಲವು ರಾಜಕೀಯ ಪಕ್ಷಗಳು ಈ ಯೋಜನೆಯ ಬಗ್ಗೆ ಯುವಕರನ್ನು ಹಾದಿ ತಪ್ಪಿಸುತ್ತಿವೆ’ ಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಆರೋಪಿಸಿದ್ದಾರೆ.

ರಕ್ಷಣಾ ಸಮಿತಿಗೆ ಪತ್ರ‌

‘ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲು ಮತ್ತು ಅಗತ್ಯ ಶಿಫಾರಸುಗಳನ್ನು ಮಾಡಲು ತಕ್ಷಣವೇ ಸಭೆ ಕರೆಯಿರಿ’ ಎಂದುರಕ್ಷಣಾ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ, ಸಮಿತಿಯ ಸದಸ್ಯ ಮತ್ತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಪತ್ರ ಬರೆದಿದ್ದಾರೆ.

‘ಅಗ್ನಿಪಥ ಯೋಜನೆಯು ತಾತ್ಕಾಲಿಕವಾದ ಉದ್ಯೋಗವನ್ನಷ್ಟೇ ನೀಡುತ್ತದೆ. ಹೀಗಾಗಿ ಅದರ ವಿರುದ್ಧ ದೇಶದ ಯುವಜನರು ಸಿಡಿದೆದ್ದಿದ್ದಾರೆ. ಕೇವಲ ಆರು ತಿಂಗಳ ತರಬೇತಿ ನೀಡುವುದರಿಂದ ಸೇನೆಗೆ ನಿಯೋಜನೆ ಆಗುವವರು ಅಪಾಯ ಎದುರಿಸಬೇಕಾಗುತ್ತದೆ. ಈ ಯೋಜನೆಯನ್ನು ಸರಿಯಾಗಿ ರೂಪಿಸಿಲ್ಲ. ಹೀಗಾಗಿ ಸಂಬಂಧಿಸಿದ ಎಲ್ಲರ ಜತೆಗೆ ಸಮಾಲೋಚನೆ ನಡೆಸಬೇಕಿದೆ. ಇದಕ್ಕಾಗಿ ತುರ್ತಾಗಿ ಸಭೆ ಕರೆಯಿರಿ’ ಎಂದು ವೇಣುಗೋ‍ಪಾಲ್ ಆಗ್ರಹಿಸಿದ್ದಾರೆ.

****

'ನಿಮ್ಮ ಹಕ್ಕುಗಳಿಗಾಗಿ ಹೋರಾಡುವ ಹಕ್ಕು ನಿಮಗೆ ಇದೆ. ಆದರೆ ನಿಮ್ಮ ಹೋರಾಟವು ಅಹಿಂಸಾರೂಪದ್ದಾಗಿರಬೇಕು ಮತ್ತು ಶಾಂತಿಯುತವಾಗಿರಬೇಕು'

-ವರುಣ್ ಗಾಂಧಿ, ಬಿಜೆಪಿ ಸಂಸದ

****

'ಮೋದಿ ಯುವಕರಿಗೆ 16 ಕೋಟಿ ಉದ್ಯೋಗಗಳ ಭರವಸೆ ನೀಡಿದ್ದರು. ಈಗ ಅಗ್ನಿಪಥದ ಮೂಲಕ ಯುವಕರ ಭವಿಷ್ಯದ ಜತೆಗೆ ಆಟವಾಡುತ್ತಿದ್ದಾರೆ'

-ಗೋವಿಂದ್‌ ಸಿಂಗ್ ಡೋಟಾಸ್ರ, ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ

****

'ಅಗ್ನಿಪಥವನ್ನು ದೇಶದ ಯುವಜನರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಯೇ ಸಾಬೀತು ಮಾಡಿದೆ'

-ಮನೀಷ್‌ ಸಿಸೋಡಿಯಾ, ದೆಹಲಿ ಉಪಮುಖ್ಯಮಂತ್ರಿ

****

'ಇದು ಸೇನೆಗೆ ಕೇಂದ್ರ ಸರ್ಕಾರವು ಮಾಡುತ್ತಿರುವ ಅವಮಾನ ಮತ್ತು ದೇಶದ ಯುವಜನರಿಗೆ ಸರ್ಕಾರವು ಮಾಡುತ್ತಿರುವ ಮೋಸ. ಇದನ್ನು ತಕ್ಷಣವೇ ಹಿಂಪಡೆಯಬೇಕು'

-ಭಗವಂತ್ ಮಾನ್‌, ಪಂಜಾಬ್‌ ಮುಖ್ಯಮಂತ್ರಿ

****

'ಮೋದಿ ಸರ್ಕಾರವು ದೇಶದ ಭದ್ರತೆಯೊಂದಿಗೆ ಮತ್ತು ದೇಶದ ಯುವಕರ ಭದ್ರತೆಯೊಂದಿಗೆ ಚೆಲ್ಲಾಟವಾಡುತ್ತಿದೆ. ಪೂರ್ಣಾವಧಿಯ ನೇಮಕಾತಿ ಕೈಬಿಟ್ಟಿದ್ದೇಕೆ?'

-ಭೂಪೇಶ್ ಬಘೆಲ್, ಛತ್ತೀಸಗಡ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT