ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ್ ಕುಮಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ: ಜಯಾ ಬಚ್ಚನ್

Last Updated 17 ಡಿಸೆಂಬರ್ 2021, 11:25 IST
ಅಕ್ಷರ ಗಾತ್ರ

ನವದೆಹಲಿ: ಅತ್ಯಾಚಾರದ ಕುರಿತಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಬಗ್ಗೆ ದೇಶದಾದ್ಯಂತ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ರಮೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಪಕ್ಷವು ಕಠಿಣ ಕ್ರಮ ಜರುಗಿಸಬೇಕು ಎಂದು ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಒತ್ತಾಯಿಸಿದ್ದಾರೆ.

ಈ ರೀತಿ ಮನಸ್ಥಿತಿ ಇರುವ ನಾಯಕರು ವಿಧಾನಸಭೆ ಅಥವಾ ಸಂಸತ್ತಿನಲ್ಲಿದ್ದರೆ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದಿದ್ದಾರೆ.

‘ಇದು ಅತ್ಯಂತ ನಾಚಿಕೆಗೇಡಿನ ನಡವಳಿಕೆ ಮತ್ತು ನಾಚಿಕೆಗೇಡಿನ ಹೇಳಿಕೆ. ಕಾಂಗ್ರೆಸ್ ಪಕ್ಷವು ಇದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಬೇರೊಬ್ಬರು ಈ ರೀತಿ ಯೋಚಿಸುವುದಕ್ಕೂ ಭಯಪಡುವಂತಾಗಬೇಕು’ಎಂದು ಅವರು ಹೇಳಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.

ಏನಿದು ವಿವಾದ?: ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ನಿನ್ನೆ ಅತಿವೃಷ್ಟಿಯ ಕುರಿತು ಚರ್ಚೆ ನಡೆಯುವ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಮಾತನಾಡಬೇಕು ಎಂದು ಸಭಾಧ್ಯಕ್ಷರಿಗೆ ದುಂಬಾಲು ಬಿದ್ದರು. ವಿರೋಧಪಕ್ಷ ಮತ್ತು ಆಡಳಿತ ಪಕ್ಷದವರು ಮಾತನಾಡುವ ಸದಸ್ಯರ ಸಂಖ್ಯೆಯನ್ನು ಮಿತಿಗೊಳಿಸದೇ ಸುಮ್ಮನಾದರು. ಆಗ ಸಭ್ಯಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ನಾಲ್ಕು ದಿನಗಳಿಂದ ಚರ್ಚೆ ನಡೆಯುತ್ತಿದೆ. ಸರ್ಕಾರ ಉತ್ತರ ಕೊಡಬೇಕು. ಈ ರೀತಿ ಆದರೆ ಯಾವುದೇ ಕಾರ್ಯಕಲಾಪ ನಡೆಸಲು ಆಗುವುದಿಲ್ಲ. ಈಗಾಗಲೇ 25 ಶಾಸಕರು ಮಾತನಾಡಿದ್ದಾರೆ’ ಎಂದರು.

ಆಗಲೂ ಶಾಸಕರು ಮಾತನಾಡುವುದಕ್ಕಾಗಿ ಕೈ ಎತ್ತುವುದನ್ನು ಮುಂದುವರಿಸಿದರು. ಇದರಿಂದ ಬೇಸತ್ತ ಸಭಾಧ್ಯಕ್ಷರು, ಎಷ್ಟು ಶಾಸಕರು ಬೇಕಾದರೂ ಮಾತನಾಡಲಿ, ನಾನು ಕೇಳುತ್ತಾ ಆನಂದಿಸುವುದನ್ನು ಬಿಟ್ಟರೆ ಇನ್ನೇನು ಮಾಡಲಿ. ಅಜೆಂಡಾದಲ್ಲಿರುವ ಬೇರೆ ಯಾವುದೇ ವಿಷಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ.’ ಎಂದರು.

ಅದೊಂದು ಮಾತಿದೆಯಲ್ಲ ರಮೇಶ್‌ ಕುಮಾರ್ ಅವರೇ ಎಂದು ಕಾಗೇರಿ ಹೇಳಿದರು. ಆಗ ಸಾಂದರ್ಭಿಕವಾಗಿ ಮಾತನಾಡಿದ ರಮೇಶ್‌ಕುಮಾರ್‌ ಅವರು, ‘ದೆರ್‌ ಈಸ್‌ ಎ ಸೇಯಿಂಗ್‌, ವೆನ್‌ ರೇಪ್‌ ಈಸ್‌ ಇನೆವಿಟೆಬಲ್‌ ಲೆಟ್‌ ಲೇಡೌನ್‌ ಅಂಡ್‌ ಎಂಜಾಯ್‌ (ಅಂದರೆ, ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ) ಎಂದು ಹೇಳಿದರು.

ತಮ್ಮ ಹೇಳಿಕೆ ಕುರಿತಂತೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ರಮೇಶ್ ಕುಮಾರ್ ಕ್ಷಮೆ ಯಾಚಿಸಿದ್ದಾರೆ.

ಈ ಕುರಿತು ಗುರುವಾರ ರಾತ್ರಿ ಟ್ವೀಟ್ ಮಾಡಿರುವ ಅವರು, 'ಅತ್ಯಾಚಾರದ' ಕುರಿತು ಅಧಿವೇಶನದಲ್ಲಿ ನೀಡಿದ ಅಸಡ್ಡೆ ಮತ್ತು ನಿರ್ಲಕ್ಷ್ಯದ ಹೇಳಿಕೆಗೆ ಎಲ್ಲರಲ್ಲಿಯೂ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT