ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತ ಸಿದ್ದಿಕಿಯನ್ನು ದೆಹಲಿ ಆಸ್ಪತ್ರೆಗೆ ವರ್ಗಾಯಿಸಲು ‘ಸುಪ್ರೀಂ’ ಸಲಹೆ

ಉತ್ತರ ಪ್ರದೇಶ ಸರ್ಕಾರಕ್ಕೆ ರಮಣನ್‌ ನೇತೃತ್ವದ ನ್ಯಾಯಪೀಠ ಸೂಚನೆ
Last Updated 28 ಏಪ್ರಿಲ್ 2021, 10:12 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಹಾಥ್‌ರಸ್‌ಗೆ ತೆರಳುತ್ತಿದ್ದಾಗ ಬಂಧಿಸಲ್ಪಟ್ಟಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕ್‌ ಕಪ್ಪನ್ ಅವರನ್ನು ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿಯ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣನ್ ನೇತೃತ್ವದ ಪೀಠ, ‘ಚಿಕಿತ್ಸೆ ಪಡೆದು ಸಿದ್ದಿಕ್‌ ಕಪ್ಪನ್ ಅವರು ಚೇತರಿಸಿಕೊಂಡ ನಂತರ ಅವರನ್ನು ಮಥುರಾ ಜೈಲಿಗೆ ಕಳುಹಿಸಬೇಕೆಂದು‘ ಸ್ಪಷ್ಟಪಡಿಸಿತು.

ಇದೇ ವೇಳೆ, ತನ್ನನ್ನು ಬಂಧಿಸಿರುವ ವಿಚಾರ ಹಾಗೂ ಮತ್ತ್ಯಾವುದೇ ವಿಚಾರಕ್ಕೆ ಸಂಬಂಧಿಸಿದ ಪರಿಹಾರಕ್ಕಾಗಿ ಸೂಕ್ತ ವೇದಿಕೆಯನ್ನು ಸಂಪರ್ಕಿಸಲು ಅವರಿಗೆ ಸ್ವಾಂತಂತ್ರ್ಯ ನೀಡಿರುವುದಾಗಿ ಪೀಠ ಹೇಳಿತು. ಈ ಸಂಬಂಧ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) ಸಲ್ಲಿಸಿದ್ದ ಮನವಿಯನ್ನೂ ಇತ್ಯರ್ಥಗೊಳಿಸಿತು.

‘ನಾವು ಪ್ರಕರಣದ ಅಂಶಗಳನ್ನು ಪರಿಗಣಿಸಿ, ರಿಟ್‌ ಅರ್ಜಿಯನ್ನು ಇತ್ಯರ್ಥಗೊಳಿಸಿದ್ದೇವೆ. ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ಗಂಭೀರ ವಿರೋಧದ ನಡುವೆಯೂ, ಆರೋಪಿಯನ್ನು ದೆಹಲಿಯ ಆರ್‌ಎಂಎಲ್ ಅಥವಾ ಎಐಐಎಂಎಸ್‌ ಅಥವಾ ಬೇರೆ ಯಾವುದೇ ಉತ್ತಮ ಆಸ್ಪತ್ರೆಗೆ ವರ್ಗಾಯಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದೇವೆ‘ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎ.ಎಸ್. ಬೋಪಣ್ಣ ಅವರುಗಳನ್ನೂ ಒಳಗೊಂಡ ನ್ಯಾಯಪೀಠ ಹೇಳಿದೆ.

ಸಿದ್ದಿಕ್‌ ಕಪ್ಪನ್ ಅವರಿಗೆ ರಾಜ್ಯದ ಹೊರಗಡೆ ಚಿಕಿತ್ಸೆ ಕೊಡಿಸಬೇಕೆಂಬ ನ್ಯಾಯಪೀಠದ ಸಲಹೆಗೆ ವಿರೋಧ ವ್ಯಕ್ತಪಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಸಿದ್ದಿಕ್‌ ಅವರ ಕೋವಿಡ್‌ ವರದಿ ನೆಗೆಟಿವ್‌ ಆಗಿದೆ. ಹಾಗಾಗಿ ಅವರಿಗೆ ಮಥುರಾ ಜೈಲಿನಲ್ಲೇ ಚಿಕಿತ್ಸೆ ಕೊಡಿಸಬಹುದು‘ ಎಂದು ಹೇಳಿದ್ದರು.

ಇದೇ ವೇಳೆ, ದೆಹಲಿಯಲ್ಲಿ ಈಗಾಗಲೇ ಆಸ್ಪತ್ರೆಗಳ ರೋಗಿಗಳಿಂದ ತುಂಬಿಹೋಗಿದ್ದು, ದೆಹಲಿಯ ನಿಗದಿತ ಆಸ್ಪತ್ರೆಯಲ್ಲಿ ಹಾಸಿಗೆಯನ್ನು ಮೀಸಲಿಡುವಂತೆ ಆದೇಶದಲ್ಲಿ ಉಲ್ಲೇಖಿಸಲು ತುಷಾರ್ ಮೆಹ್ತಾ ಅವರು ನ್ಯಾಯಪೀಠವನ್ನು ಕೇಳಿದರು. ಆದರೆ ಸುಪ್ರೀಂ ಕೋರ್ಟ್ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿತು.

ಉತ್ತರ ಪ್ರದೇಶ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯದ ಸಲಹೆಯನ್ನು ವಿರೋಧಿಸಿದ್ದು, ‘ಮಥುರಾ ಜೈಲಿನಲ್ಲಿರುವ ಅನೇಕ ಕೈದಿಗಳು ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ರಕರ್ತ ಸಂಘದಲ್ಲಿದ್ದಾರೆ ಎಂಬ ಕಾರಣಕ್ಕೆ ಸಿದ್ದಿಕ್‌ಗೆವಿಶೇಷ ಚಿಕಿತ್ಸಗೆ ಸಲಹೆ ನೀಡಬಾರದು. ಏಕೆಂದರೆ,ಇಲ್ಲಿ ಪತ್ರಕರ್ತರ ಸಂಘ ಕೂಡ ಅರ್ಜಿದಾರರಾಗಿದ್ದಾರೆ'ಎಂದು ವಾದ ಮಂಡಿಸಿದ್ದರು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಮಥುರಾ ಜೈಲು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ‘ ಎಂದೂ ಮೆಹ್ತಾ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT