ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈರಸ್‌ ಮಿಸ್ತ್ರಿ ಪ್ರಕರಣ: ಟಾಟಾ ಸಮೂಹಕ್ಕೆ ಜಯ

Last Updated 26 ಮಾರ್ಚ್ 2021, 18:21 IST
ಅಕ್ಷರ ಗಾತ್ರ

ನವದೆಹಲಿ: ಟಾಟಾ ಸಮೂಹದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೆ ಸೈರಸ್ ಮಿಸ್ತ್ರಿ ಅವರನ್ನು ಮರುನೇಮಕ ಮಾಡಿದ್ದ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಆದೇಶವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ರದ್ದುಪಡಿಸಿದೆ. ಇದು ಕಾನೂನು ಸಮರದಲ್ಲಿ ಟಾಟಾ ಸಮೂಹಕ್ಕೆ ಸಿಕ್ಕಿರುವ ದೊಡ್ಡ ಜಯ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನು ಒಳಗೊಂಡ ನ್ಯಾಯಪೀಠವು, ಟಾಟಾ ಸಮೂಹ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿ ಈ ತೀರ್ಪು ನೀಡಿದೆ.

ಮಿಸ್ತ್ರಿ ಅವರನ್ನು ಟಾಟಾ ಸನ್ಸ್‌ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನದಿಂದ 2016ರ ಅಕ್ಟೋಬರ್‌ನಲ್ಲಿ ಕಿತ್ತುಹಾಕಿದ ಕ್ರಮವು ‘ಬೇಟೆ, ಹಠಾತ್ ದಾಳಿ’ಗೆ ಸಮ ಎಂದು ಶಾ‍ಪೂರ್ಜಿ ಪಲ್ಲೋಂಜಿ ಸಮೂಹವು (ಎಸ್‌ಪಿ ಸಮೂಹ) ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿತ್ತು. ಎಸ್‌ಪಿ ಸಮೂಹವು ಮಿಸ್ತ್ರಿ ಕುಟುಂಬದ ಒಡೆತನಕ್ಕೆ ಸೇರಿದೆ. ಈ ಸಮೂಹವು ಟಾಟಾ ಸನ್ಸ್‌ನಲ್ಲಿ ಶೇಕಡ 18.37ರಷ್ಟು ಷೇರುಪಾಲು ಹೊಂದಿದೆ.

ಆದರೆ, ಮಿಸ್ತ್ರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಅಧಿಕಾರವು ಆಡಳಿತ ಮಂಡಳಿಗೆ ಇದೆ ಎಂದು ಟಾಟಾ ಸಮೂಹ ಪ್ರತಿವಾದ ಮಂಡಿಸಿತ್ತು.

ಮಿಸ್ತ್ರಿ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಪುನಃ ನೇಮಿಸಬೇಕು ಎಂದು ಎನ್‌ಸಿಎಲ್‌ಎಟಿ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ 2020ರ ಜನವರಿ 10ರಂದು ತಡೆ ನೀಡಿತ್ತು. ಮಿಸ್ತ್ರಿ ಅವರು ರತನ್ ಟಾಟಾ ಅವರ ನಂತರ, 2012ರಲ್ಲಿ ಟಾಟಾ ಸನ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡಿದ್ದರು.

2016ರಲ್ಲಿ ಟಾಟಾ ಸನ್ಸ್‌ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿಗೊಳಿಸಿದ್ದನ್ನು ಪ್ರಶ್ನಿಸಿ, ಮಿಸ್ತ್ರಿ ಅವರು ಸಲ್ಲಿಸಿದ್ದ ಅಹವಾಲನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) 2018ರ ಜುಲೈನಲ್ಲಿ ತಳ್ಳಿ ಹಾಕಿತ್ತು. ಆ ಬಳಿಕ 2018ರ ಆಗಸ್ಟ್‌ನಲ್ಲಿ ಎನ್‌ಸಿಎಲ್‌ಎಟಿಗೆ ಮೇಲ್ಮನವಿ ಸಲ್ಲಿಸಿದ್ದರು.

‘ಗೆಲ್ಲುವ, ಸೋಲುವ ವಿಚಾರವಲ್ಲ...’

ಸುಪ್ರೀಂ ಕೋರ್ಟ್‌ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಟ್ರಸ್ಟ್ಸ್‌ನ ಅಧ್ಯಕ್ಷ ರತನ್ ಟಾಟಾ ಅವರು, ‘ಇದು ಸಮೂಹವು ಪಾಲಿಸಿಕೊಂಡು ಬಂದಿರುವ ಮೌಲ್ಯಗಳನ್ನು ಮಾನ್ಯ ಮಾಡಿದಂತೆ ಇದೆ’ ಎಂದು ಹೇಳಿದ್ದಾರೆ. ಈ ಮೌಲ್ಯಗಳೇ ಟಾಟಾ ಸಮೂಹದ ಪಾಲಿಗೆ ದಾರಿದೀಪದಂತೆ ಇವೆ ಎಂದು ಅವರು ಹೇಳಿದ್ದಾರೆ.

‘ಇದು ಗೆಲ್ಲುವುದಕ್ಕೆ ಅಥವಾ ಸೋಲುವುದಕ್ಕೆ ಸಂಬಂಧಿಸಿದ ವಿಚಾರ ಅಲ್ಲ. ನನ್ನ ಪ್ರಾಮಾಣಿಕತೆಯ ಮೇಲೆ, ಸಮೂಹದ ನೈತಿಕ ನಡವಳಿಕೆಗಳ ಮೇಲೆ ಎಡೆಬಿಡದೆ ದಾಳಿ ನಡೆಸಲಾಯಿತು. ಈಗ ಬಂದಿರುವ ತೀರ್ಪು ನಮ್ಮ ಮೌಲ್ಯಗಳನ್ನು ಮಾನ್ಯ ಮಾಡಿದೆ’ ಎಂದು ಟಾಟಾ ಅವರು ಟ್ವೀಟ್ ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೆ ತಾವು ಕೃತಜ್ಞರಾಗಿ ಇರುವುದಾಗಿ ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪು ಹೊರಬಂದ ನಂತರ ಟಾಟಾ ಸಮೂಹದ ಕೆಲವು ಕಂಪನಿಗಳ ಷೇರುಮೌಲ್ಯ ಹೆಚ್ಚಳ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT