ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಮಾಲಿನ್ಯ ತಡೆಗಟ್ಟಲು ಮಂಗಳವಾರವೇ ತುರ್ತು ಸಭೆ ಕರೆಯಿರಿ: 'ಸುಪ್ರೀಂ' ಸೂಚನೆ

Last Updated 15 ನವೆಂಬರ್ 2021, 8:40 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟುವುದಕ್ಕಾಗಿ ಅನಗತ್ಯ ನಿರ್ಮಾಣ ಕಾಮಗಾರಿ, ಸಾರಿಗೆ, ವಿದ್ಯುತ್ ಸ್ಥಾವರ ಸ್ಥಗಿತಗೊಳಿಸುವುದು ಹಾಗೂ ಮನೆಯಿಂದಲೇ ಕೆಲಸ ನಿರ್ವಹಿಸುವಂತಹ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮಂಗಳವಾರ ತುರ್ತು ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠ ಸೋಮವಾರ ಈ ಸೂಚನೆ ನೀಡಿದ್ದು, ತಾನು ರಚಿಸಿರುವ ಸಮಿತಿಯ ಎದುರು ಅಹವಾಲು ಸಲ್ಲಿಸುವುದಕ್ಕಾಗಿ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ ಮತ್ತು ದೆಹಲಿಗಳ ಕಾರ್ಯದರ್ಶಿಗಳು ಈ ತುರ್ತು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿತು.

’ನಿರ್ಮಾಣ ಚಟುವಟಿಕೆಗಳು, ಉದ್ಯಮ, ಸಾರಿಗೆ, ವಿದ್ಯುತ್‌, ವಾಹನ ದಟ್ಟಣೆ, ರೈತರು ಕೂಳೆಯನ್ನು ಸುಡುವುದೇ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂಬುದು ನ್ಯಾಯಾಲಯಕ್ಕೆ ಸಲ್ಲಿಕೆಯಾದ ಪ್ರಮಾಣಪತ್ರದಿಂದ ಸಾಬೀತಾಗಿದೆ. ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಮತ್ತು ಸುತ್ತಮುತ್ತಲಿನ ಪ್ರದೇಶಗಳ ಕಾಯ್ದೆಯಂತೆ ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಕೆಲವೊಂದು ನಿರ್ಧಾರಗಳನ್ನು ಕೈಗೊಂಡರೂ, ಮಾಲಿನ್ಯ ನಿಯಂತ್ರಣಕ್ಕೆ ರಾಜ್ಯಗಳು ಎಂತಹ ಕ್ರಮಗಳನ್ನು ಕೈಗೊಳ್ಳುತ್ತವೆ ಎಂಬ ನಿರ್ದಿಷ್ಟ ಅಂಶ ಕಾಣಿಸುತ್ತಿಲ್ಲ‘ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತು.

’ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮಂಗಳವಾರವೇ ತುರ್ತು ಸಭೆ ಕರೆದು, ಯಾವ ಯಾವ ಕ್ಷೇತ್ರಗಳಲ್ಲಿ ವಾಯು ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂಬುದರ ಬಗ್ಗೆ ಚರ್ಚಿಸಬೇಕು. ವರ್ಷಕ್ಕೆ ಎರಡು ತಿಂಗಳ ಅವಧಿಯಲ್ಲಿ ಮಾತ್ರ ಕೂಳೆಯನ್ನು ಸುಡುವ ಪ್ರಕ್ರಿಯೆ ಹರಿಯಾಣ ಮತ್ತು ಪಂಜಾಬ್ ಭಾಗದಲ್ಲಿ ನಡೆಯುತ್ತದೆ. ಹೀಗಾಗಿ ಮಾಲಿನ್ಯದಲ್ಲಿ ಅದರ ಪ್ರಭಾವ ಅಷ್ಟಾಗಿ ಇಲ್ಲ. ಆದರೆ ಈಗ ಕೂಳೆ ದಹಿಸುವ ಸಮಯವಾಗಿರುವುದರಿಂದ ಅದನ್ನೂ ಪ್ರಮುಖವಾಗಿ ಪರಿಗಣಿಸಬೇಕಾಗುತ್ತದೆ‘ ಎಂದು ಪೀಠ ಹೇಳಿತು. ಪೀಠದಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚುಡ್‌ ಮತ್ತು ಸೂರ್ಯಕಾಂತ್‌ ಅವರೂ ಇದ್ದರು.

ಎರಡು ವಾರ ಕಾಲ ಕೂಳೆ ಸುಡದಂತೆ ರೈತರ ಮನವೊಲಿಸಿ ಎಂದು ಸಹ ಪೀಠವು ಪಂಜಾಬ್‌ ಮತ್ತು ಹರಿಯಾರ ಸರ್ಕಾರಗಳಿಗೆ ಸೂಚಿಸಿತು.

’ಮನೆಯಿಂದಲೇ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಪರಿಶೀಲಿಸುವಂತೆ ನಾವು ಕೇಂದ್ರ ಸರ್ಕಾರ, ಎನ್‌ಸಿಆರ್ ರಾಜ್ಯಗಳಿಗೂ ಸೂಚಿಸುತ್ತಿದ್ದೇವೆ‘ ಎಂದು ಪೀಠ ತಿಳಿಸಿತು.

ಈ ಮಧ್ಯೆ, ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ಲಾಕ್‌ಡೌನ್‌ನಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧವಿದೆ, ನೆರೆಹೊರೆಯ ಇತರ ರಾಜ್ಯಗಳೂ ದೆಹಲಿ ಗಡಿ ಭಾಗದ ಪ್ರದೇಶಗಳಲ್ಲಿ ಇಂತಹ ಕ್ರಮ ಕೈಗೊಂಡರೆ ಮಾತ್ರ ದೆಹಲಿಯಲ್ಲಿ ಮಾಡುವ ಲಾಕ್‌ಡೌನ್‌ ಪರಿಣಾಮಕಾರಿಯಾಗಿರುತ್ತದೆ ಎಂದು ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT