ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ನಾಗರತ್ನ ‘ಸುಪ್ರೀಂ’ ನ್ಯಾಯಮೂರ್ತಿ

9 ಮಂದಿಯ ನೇಮಕಕ್ಕೆ ರಾಷ್ಟ್ರಪತಿ ಅಂಕಿತ
Last Updated 26 ಆಗಸ್ಟ್ 2021, 20:39 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್‌ಗೆ ಒಂಬತ್ತು ಹೊಸ ನ್ಯಾಯಮೂರ್ತಿಗಳನ್ನು ಗುರುವಾರ ನೇಮಕ ಮಾಡಲಾಗಿದೆ. ಕರ್ನಾಟಕದವರಾದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಸೇರಿ ಮೂವರು ಮಹಿಳೆಯರು ಈ ಪಟ್ಟಿಯಲ್ಲಿ ಇದ್ದಾರೆ. ಈ ತಂಡದಲ್ಲಿ ನೇಮಕವಾದವರಲ್ಲಿ ಮೂವರು ಮುಖ್ಯ ನ್ಯಾಯಮೂರ್ತಿ ಹುದ್ದೆಗೇರುವ ಸಾಧ್ಯತೆ ಹೊಂದಿದ್ದಾರೆ. ನಾಗರತ್ನಾ ಅವರಿಗೂ ಈ ಅವಕಾಶ ಇದೆ. ಅವರು ಈ ಹುದ್ದೆಗೆ ಏರಿದರೆ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ನೇಮಕಾತಿ ಆದೇಶಕ್ಕೆ ರಾಷ್ಟ್ರಪತಿಯವರು ಸಹಿ ಹಾಕಿದ್ದಾರೆ. ಕೇಂದ್ರ ಕಾನೂನು ಸಚಿವಾಲಯವು ಅಧಿಸೂಚನೆಯನ್ನೂ ಹೊರಡಿಸಿದೆ.

ಈವರೆಗೆ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ನಾಗರತ್ನ ಅವರು 2027ರಲ್ಲಿ ನಿವೃತ್ತಿಯಾಗುವ ಮುನ್ನ ಒಂದು ತಿಂಗಳ ಅವಧಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯಲ್ಲಿ ಇರಲಿದ್ದಾರೆ. ನಾಗರತ್ನ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಇ.ಎಸ್‌. ವೆಂಕಟರಾಮಯ್ಯ ಅವರ ಮಗಳು. ವೆಂಕಟರಾಮಯ್ಯ ಅವರು 1989ರಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಎರಡನೇ ತಲೆಮಾರಿನವರು ಕೂಡ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆ ವಹಿಸಿಕೊಳ್ಳುವ ಎರಡನೇ ನಿದರ್ಶನ ಇದು ಎನಿಸಿಕೊಳ್ಳಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈಗ ನ್ಯಾಯಮೂರ್ತಿ ಆಗಿರುವ ಡಿ.ವೈ. ಚಂದ್ರಚೂಡ ಅವರು 2022ರ ನವೆಂಬರ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರಲಿದ್ಧಾರೆ. ಅವರ ತಂದೆ ವೈ.ವಿ. ಚಂದ್ರಚೂಡ ಅವರು 1978ರಿಂದ 1985ರ ಅವಧಿಯಲ್ಲಿ ಮುಖ್ಯ ನ್ಯಾಯಮೂರ್ತಿ ಆಗಿದ್ದರು.

ಹಿರಿಯ ವಕೀಲ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪಿ.ಎಸ್‌. ನರಸಿಂಹ ಅವರನ್ನು ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ವಕೀಲ ವೃಂದದಿಂದ ನೇರವಾಗಿ ನೇಮಕವಾದ ಒಂಬತ್ತನೇ ವ್ಯಕ್ತಿ ಇವರು ಎನಿಸಿಕೊಂಡಿದ್ಧಾರೆ.

ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಗುಜರಾತ್‌ ಹೈಕೋರ್ಟ್‌ ನ್ಯಾಯಮೂರ್ತಿ ಬೆಲಾ ತ್ರಿವೇದಿ ಈ ಬಾರಿ ನೇಮಕ ಆಗಿರುವ ಇನ್ನಿಬ್ಬರು ಮಹಿಳೆಯರು. ಸುಪ್ರೀಂ ಕೋರ್ಟ್‌ಗೆ ನೇಮಕವಾಗಿರುವ ಇತರರೆಂದರೆ, ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಕುಮಾರ್‌ ಓಕಾ, ಸಿಕ್ಕಿಂ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ, ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್‌, ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್‌.

21 ತಿಂಗಳ ಬಳಿಕ ಸಹಮತ:

ಇದೇ ಮೊದಲ ಬಾರಿ ಒಂಬತ್ತು ಮಂದಿಯನ್ನು ಒಮ್ಮೆಗೇ ನೇಮಕ ಮಾಡಲಾಗಿದೆ. ಆದರೆ, 21 ತಿಂಗಳ ಸುದೀರ್ಘ ಅವಧಿಯ ಬಳಿಕ ಈ ನೇಮಕ ನಡೆದಿದೆ. ಸುಪ್ರೀಂ ಕೋರ್ಟ್‌ನ ಕೊಲಿಜಿಯಂ (ನ್ಯಾಯಮೂರ್ತಿ ನೇಮಕಕ್ಕೆ ಶಿಫಾರಸು ಮಾಡುವ ಸಮಿತಿ) ಸದಸ್ಯರಾದ ಐವರು ಹಿರಿಯ ನ್ಯಾಯಮೂರ್ತಿಗಳಲ್ಲಿ ಸಹಮತ ಸಾಧ್ಯವಾಗದ ಕಾರಣ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡುವುದೇ ಸಾಧ್ಯವಾಗಿರಲಿಲ್ಲ.ತ್ರಿಪುರಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಕಿಲ್‌ ಖುರೇಷಿ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ನೀಡಬೇಕು ಎಂದು ಕೊಲಿಜಿಯಂ ಸದಸ್ಯರಾಗಿದ್ದ ನ್ಯಾಯಮೂರ್ತಿ ಆರ್.ಎಫ್‌. ನರೀಮನ್‌ ಅವರು (ಇದೇ 12ರಂದು ನಿವೃತ್ತರಾದರು) ಒತ್ತಾಯಿಸಿದ್ದರು. ಗುಜರಾತ್‌ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಖುರೇಷಿ ಅವರು ಈಗಿನ ಗೃಹ ಸಚಿವ ಅಮಿತ್‌ ಶಾ ಅವರನ್ನು 2010ರಲ್ಲಿ ಸಿಬಿಐ ಕಸ್ಟಡಿಗೆ ನೀಡಿದ್ದರು.

ಒಂದು ಹುದ್ದೆ ಖಾಲಿ

ಸುಪ್ರೀಂ ಕೋರ್ಟ್‌ಗೆ ಮಂಜೂರಾಗಿರುವ ನ್ಯಾಯಮೂರ್ತಿ ಹುದ್ದೆಗಳು 34. ಈಗ ಇರುವ ಮಹಿಳಾ ನ್ಯಾಯಮೂರ್ತಿಯೆಂದರೆ ಇಂದಿರಾ ಬ್ಯಾನರ್ಜಿ ಮಾತ್ರ. ಅವರು 2022ರ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಲಿದ್ದಾರೆ. ಒಂಬತ್ತು ನ್ಯಾಯಮೂರ್ತಿಗಳ ನೇಮಕದೊಂದಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆಯು 33ಕ್ಕೆ ಏರುತ್ತದೆ. ಒಂದು ಹುದ್ದೆ ಮಾತ್ರ ಖಾಲಿ ಉಳಿಯುತ್ತದೆ.

ಒಮ್ಮೆಗೆ ಮೂವರು ಮಹಿಳಾ ನ್ಯಾಯಮೂರ್ತಿಗಳ ನೇಮಕವೂ ವಿಶೇಷವಾಗಿದೆ. 71 ವರ್ಷಗಳಲ್ಲಿ ಎಂಟು ಮಹಿಳೆಯರು ಮಾತ್ರ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆಯ ಕೊರತೆಯನ್ನು ನೀಗಿಸುವಲ್ಲಿ, ಲಿಂಗಸಮಾನತೆಯತ್ತ ಸಾಗುವಲ್ಲಿ ಇದೊಂದು ಮಹತ್ವದ ಹೆಜ್ಜೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT