ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿಗಳ ದುಷ್ಪರಿಣಾಮ ತಿಳಿಯಲು ಐಐಟಿ ಬೇಕೆ? –ಸುಪ್ರೀಂ ಕೋರ್ಟ್‌ ಪ್ರಶ್ನೆ

Last Updated 23 ಜುಲೈ 2021, 11:27 IST
ಅಕ್ಷರ ಗಾತ್ರ

ನವದೆಹಲಿ: ‘ಪಟಾಕಿಗಳ ಬಳಕೆಯಿಂದ ಆರೋಗ್ಯದ ಮೇಲಾಗುವ ಪ್ರತಿಕೂಲ ಪರಿಣಾಮಗಳನ್ನು ತಿಳಿಯಲು ನಿಮಗೆ ಐಐಟಿಯ ಅಧ್ಯಯನ ಅಗತ್ಯವಿದೆಯೇ? ದೀಪಾವಳಿ ಹಬ್ಬದ ಸಂದರ್ಭದಲ್ಲಿ ಏನಾಗುತ್ತದೆ ಎಂದು ದೆಹಲಿಯಲ್ಲಿ ವಾಸವಿರುವ ಯಾರಿಗಾದರೂ ಕೇಳಿ’ ಎಂದು ಸುಪ್ರೀಂ ಕೋರ್ಟ್‌ ಕಟುವಾಗಿ ಹೇಳಿದೆ.

ವಾಯುಮಾಲಿನ್ಯ ಹಿನ್ನೆಲೆಯಲ್ಲಿ ಪಟಾಕಿಗಳ ಮಾರಾಟ, ಬಳಕೆಯನ್ನು ನಿಷೇಧಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶವನ್ನು ನ್ಯಾಯಮೂರ್ತಿಗಳಾದ ಎ.ಎಂ.ಖಾನ್‌ವಿಲ್ಕರ್‌ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠ ಸಮರ್ಥಿಸಿದೆ. ‘ಈ ಆದೇಶ ಸ್ಪಷ್ಟವಾಗಿದೆ. ವಿಚಾರಣೆ ಅಗತ್ಯವಿಲ್ಲ’ ಎಂದೂ ಹೇಳಿದೆ.

ಪಟಾಕಿ ಮಾರಾಟಗಾರರನ್ನು ಪ್ರತಿನಿಧಿಸಿದ್ದ ವಕೀಲ ಸಾಜ್‌ ದೀಪಕ್‌ ಅವರು, ’ಐಐಟಿ ಕಾನ್ಪುರದ ವರದಿಯ ಪ್ರಕಾರ, ವಾಯುಮಾಲಿನ್ಯಕ್ಕೆ ಕಾರಣವಾಗುವ 15 ಅಂಶಗಳಲ್ಲಿ ಪಟಾಕಿಗಳು ಸೇರಿಲ್ಲ’ ಎಂದು ಗಮನಸೆಳೆದರು.

ಇದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದ ಪೀಠವು, ‘ವಾಯುಮಾಲಿನ್ಯ ಪ್ರಮಾಣವು ಹೆಚ್ಚಿರುವ ನಗರಗಳಲ್ಲಿ ಕೇವಲ ಮಾರಾಟ ಮತ್ತು ಬಳಕೆಯನ್ನು ಮಾತ್ರ ನಿಷೇಧಿಸಲಾಗಿದೆ. ಉತ್ಪಾದನೆಯನ್ನು ಅಲ್ಲ. ವಾಯುಮಾಲಿನ್ಯ ಪ್ರಮಾಣವನ್ನು ಆಧರಿಸಿ ಸ್ಥಳೀಯ ಸಂಸ್ಥೆಗಳು ತೀರ್ಮಾನ ಮಾಡಬಹುದಾಗಿದೆ’ ಎಂಬುದನ್ನು ಉಲ್ಲೇಖಿಸಿತು.

ದೆಹಲಿ–ಎನ್‌ಸಿಆರ್‌ ಮತ್ತು ಇತರೆ ನಗರಗಳಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದ್ದ ಎನ್‌ಜಿಟಿ) ಆದೇಶವನ್ನು ಪ್ರಶ್ನಿಸಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು.

ವಾಯುಮಾಲಿನ್ಯ ಪ್ರಮಾಣ ಗಂಭೀರವಾಗಿದ್ದರೆ ಪಟಾಕಿಗಳ ಮಾರಾಟ, ಬಳಕೆಗೆ ಅವಕಾಶವಿಲ್ಲ. ಕಡಿಮೆ ಇದ್ದರೆ ಹಸಿರು ಪಟಾಕಿಗಳ ಮಾರಾಟಕ್ಕೆ ಅವಕಾಶವನ್ನು ನೀಡಬಹುದಾಗಿದೆ ಎಂದು ಪೀಠವು ಉಲ್ಲೇಖಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT