ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರಿಯ ಜೊತೆ ಸಂತ್ರಸ್ತೆ, ಮಕ್ಕಳ 'ಸುಖ ಜೀವನ'; ಶಿಕ್ಷೆ ರದ್ದುಮಾಡಿದ ಸುಪ್ರೀಂ

Last Updated 14 ಜೂನ್ 2022, 9:03 IST
ಅಕ್ಷರ ಗಾತ್ರ

ನವದೆಹಲಿ: ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ವ್ಯಕ್ತಿಯೇ, ಸಂತ್ರಸ್ತೆಯನ್ನು ವಿವಾಹವಾಗಿ ಸುಖ ಜೀವನ ನಡೆಸುತ್ತಿರುವುದನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ವಿಶೇಷ ಅಧಿಕಾರವನ್ನು ಬಳಸಿ ಆತನ ಶಿಕ್ಷೆ ರದ್ದುಪಡಿಸಿದೆ.

ಎಲ್‌.ನಾಗೇಶ್ವರ ರಾವ್‌ ಹಾಗೂ ಬಿ.ಆರ್‌.ಗವಾಯ್‌ ನೇತೃತ್ವದ ಪೀಠವು, ಪ್ರಕರಣದ ವಿಚಿತ್ರ ಸಂಗತಿಗಳನ್ನು ಪರಿಗಣಿಸಿಅರ್ಜಿದಾರ(ಅತ್ಯಾಚಾರಿ) ಕೆ.ದಂಡಪಾಣಿಯ ಶಿಕ್ಷೆಯನ್ನು ಕೈಬಿಡಲಾಗಿದೆ. ಈ ತೀರ್ಮಾನವನ್ನು ಬೇರೆ ಪ್ರಕರಣಗಳ ವಿಚಾರಣೆಯಪೂರ್ವ ನಿದರ್ಶನವಾಗಿ ಪರಿಗಣಿಸಲಾಗದು ಎಂದು ಸ್ಪಷ್ಟಪಡಿಸಿದೆ.

ತಮಿಳುನಾಡಿನ ಅತ್ಯಂತ ಹಿಂದುಳಿದ 'ವಲಯರ್‌' ಸಮುದಾಯಕ್ಕೆ ಸೇರಿರುವ ಅರ್ಜಿದಾರನಿಗೆ ವಿಚಾರಣಾ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಮದ್ರಾಸ್‌ ಹೈಕೋರ್ಟ್‌ ಸಹ ಈ ಆದೇಶವನ್ನು ಎತ್ತಿಹಿಡಿದಿತ್ತು.

ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಅರ್ಜಿದಾರರ ಪರ ವಕೀಲರು, ಸಂತ್ರಸ್ತ ಬಾಲಕಿಯ ಸೋದರ ಮಾವನಾಗಿರುವ ಆತ (ಅರ್ಜಿದಾರ) ಮದುವೆಯ ಭರವಸೆ ನೀಡಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ವಾಸ್ತವದಲ್ಲಿ ಅವರಿಬ್ಬರೂ ಮದುವೆಯಾಗಿದ್ದು, ಎರಡು ಮಕ್ಕಳಿವೆ ಎಂದು ಪೀಠಕ್ಕೆ ತಿಳಿಸಿದ್ದರು.

'ನ್ಯಾಯಾಲಯವು ಸಂವಿಧಾನದ 142ನೇ ವಿಧಿಅಡಿಯಲ್ಲಿ ವಿಶೇಷ ಅಧಿಕಾರವನ್ನು ಚಲಾಯಿಸಬೇಕು. ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಒದಗಿಸಬೇಕು. ಅರ್ಜಿದಾರ ಮತ್ತು ಸಂತ್ರಸ್ತೆಯ ಕೌಂಟುಂಬಿಕ ಜೀವನಕ್ಕೆ ತೊಂದರೆಯಾಗಬಾರದು' ಎಂದೂ ವಿನಂತಿಸಿದ್ದರು.

ವಿಚಾರಣೆ ನಡೆಸಿದ್ದ ಪೀಠವು, ಸದ್ಯದ ಸ್ಥಿತಿಯ ಕುರಿತು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಜಿಲ್ಲಾ ನ್ಯಾಯಾದೀಶರಿಗೆ ನಿರ್ದೇಶನ ನೀಡಿತ್ತು. ಹಾಗೆಯೇ, ಸಂತ್ರಸ್ತೆಯ ಎರಡು ಮಕ್ಕಳ ಬಗ್ಗೆ ಅರ್ಜಿದಾರ ಕಾಳಜಿ ಹೊಂದಿದ್ದಾನೆಯೇ ಮತ್ತು ಆಕೆಯ ವೈವಾಹಿಕ ಜೀವನ ಸುಖಕರವಾಗಿದೆಯೇ ಎಂಬುದೂ ಆಕೆಯ ಹೇಳಿಕೆಯಲ್ಲಿ ದಾಖಲಾಗಬೇಕು ಎಂದೂ ಸೂಚಿಸಿತ್ತು.

ಅತ್ಯಾಚಾರಿಯಮೇಲ್ಮನವಿಗೆ ವಿರೋಧ ವ್ಯಕ್ತಪಡಿಸಿದ್ದ ತಮಿಳುನಾಡು ಸರ್ಕಾರದಪರ ವಕೀಲ ಜೋಸೆಫ್‌ ಅರಿಸ್ಟಾಟಲ್‌, ಅತ್ಯಾಚಾರವಾದಾಗ ಬಾಲಕಿಗೆ 14 ವರ್ಷ ವಯಸ್ಸಾಗಿತ್ತು. 15 ವರ್ಷದಲ್ಲಿದ್ದಾಗ ಮೊದಲ ಮಗುವಿಗೆ ಮತ್ತು 17ನೇ ವಯಸ್ಸಿನಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದ್ದರು ಎಂದು ತಿಳಿಸಿದ್ದರು.

ಬಾಲಕಿ ಮತ್ತು ಅರ್ಜಿದಾರನ ವಿವಾಹವು ಕಾನೂನುಬದ್ಧವಲ್ಲ ಎಂದಿದ್ದ ಜೋಸೆಫ್‌, ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮದುವೆಯ ವಿಚಾರ ತರಲಾಗಿದೆ. ನ್ಯಾಯಾಲಯವು ಆತನನ್ನು ಬಿಡುಗಡೆ ಮಾಡಿದರೆ ಸಂತ್ರಸ್ತೆ ಮತ್ತು ಆಕೆಯ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ ಎನ್ನುವುದಕ್ಕೆ ಯಾವುದೇ ಖಾತರಿಯಿಲ್ಲ ಎಂದು ವಾದಿಸಿದ್ದರು.

ಆದಾಗ್ಯೂ ಪೀಠವು, 'ಈ ಪ್ರಕರಣದ ವಿಚಿತ್ರ ಸಂಗತಿಗಳು ಮತ್ತು ಸನ್ನಿವೇಶಗಳಲ್ಲಿ ಗಮನಕ್ಕೆ ತರಲಾಗಿರುವ ವಿಚಾರಗಳು, ಸಂತ್ರಸ್ತೆಯ ಸೋದರ ಮಾವನಾಗಿರುವ ಅರ್ಜಿದಾರನ ಅಪರಾಧ ಮತ್ತು ಶಿಕ್ಷೆಯನ್ನು ಕೈಬಿಡಲು ಅರ್ಹವಾಗಿವೆ ಎಂದು ಪರಿಗಣಿಸಿದ್ದೇವೆ' ಎಂದು ಹೇಳಿದೆ.

'ಈ ನ್ಯಾಯಾಲಯವು ವಾಸ್ತವ ಸಂಗತಿಗಳ ವಿಚಾರದಲ್ಲಿ ಕಣ್ಣುಮುಚ್ಚಿ ಕೂರುವುದಿಲ್ಲ. ಸಂತ್ರಸ್ತೆ ಮತ್ತು ಅರ್ಜಿದಾರನ ಸಂತಸದ ಸಾಂಸಾರಿಕ ಜೀವನಕ್ಕೆ ತೊಂದರೆ ಮಾಡುವುದಿಲ್ಲ. ಸೋದರ ಮಾವನೊಂದಿಗಿನ ವಿವಾಹವು ತಮಿಳುನಾಡಿನ ಸಂಪ್ರದಾಯ ಎಂಬುದನ್ನು ನಮಗೆ ತಿಳಿಸಲಾಗಿದೆ' ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT