ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಫಾರ್ಮಸಿ ಕಾಲೇಜು: ಅರ್ಜಿಗಳ ಪ್ರಕ್ರಿಯೆಗೆ ‘ಸುಪ್ರೀಂ’ ಸೂಚನೆ

Last Updated 31 ಮೇ 2022, 19:56 IST
ಅಕ್ಷರ ಗಾತ್ರ

ನವದೆಹಲಿ: ಹೊಸದಾಗಿ ಫಾರ್ಮಸಿ ಕಾಲೇಜುಗಳನ್ನು ಆರಂಭಿಸುವ ಕುರಿತು ಬರುವ ಅರ್ಜಿಗಳನ್ನು ಸ್ವೀಕರಿಸಿ ಮತ್ತು ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸುಪ್ರೀಂಕೋರ್ಟ್‌ ‘ಫಾರ್ಮಸಿ ಕೌನ್ಸಿಲ್‌ ಆಫ್‌ ಇಂಡಿಯಾ’ಗೆ (ಪಿಸಿಐ) ಸೂಚಿಸಿದೆ.

ದೇಶದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ನಾಯಿಕೊಡೆಗಳಂತೆ ಬೆಳೆಯುತ್ತಿರುವ ಖಾಸಗಿ ಕಾಲೇಜುಗಳ ಕುರಿತು ಸುಪ್ರೀಂಕೋರ್ಟ್‌ ಇದೇ ವೇಳೆ ಕಳವಳ ವ್ಯಕ್ತಪಡಿಸಿದೆ.

‘ಶಿಕ್ಷಣವು ಉದ್ಯಮವಾಗಿರುವುದು ಎಲ್ಲರಿಗೂ ತಿಳಿದಿದೆ. ಈ ಕ್ಷೇತ್ರದಲ್ಲಿ ದೊಡ್ಡ ವ್ಯಾಪಾರ ಸಂಸ್ಥೆಗಳೇ ತೊಡಗಿಕೊಂಡಿವೆ’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಹಿಮಾ ಕೊಹ್ಲಿ ಅವರ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಪಿಸಿಐ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೊಸ ಕಾಲೇಜುಗಳನ್ನು ತೆರೆಯಲು ವಿಧಿಸಲಾಗಿರುವ ನಿಷೇಧವನ್ನು ಸಮರ್ಥಿಸಿಕೊಂಡರು. ‘ಫಾರ್ಮಸಿ ಕಾಲೇಜುಗಳು ನಾಯಿಕೊಡೆಗಳಂತೆ ಹೆಚ್ಚಾಗಿದ್ದು, ಶೈಕ್ಷಣಿಕ ಸಂಸ್ಥೆಗಳ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದಾರೆ’ ಎಂದು ದೂರಿದರು.ಕೆಲವು ಕಾಲೇಜುಗಳಂತೂ ಸಣ್ಣ ಅಂಗಡಿಗಳಂತೆ ನಡೆಯುತ್ತಿದ್ದವು. ಅವುಗಳನ್ನು ಮುಚ್ಚಿಸಲಾಗಿದೆ ಎಂದೂ ಅವರು ಹೇಳಿದರು.

ಫಾರ್ಮಸಿ ಕಾಲೇಜುಗಳ ಪರ ವಾದಿಸಿದ ವಕೀಲರು, ನಿಷೇಧದ ಕಾರಣ ಮೂರು ವರ್ಷಗಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹ್ತಾ ಅವರು, ‘ಇದನ್ನು ವಿದ್ಯಾರ್ಥಿಗಳು ಹೇಳಿದರೆ ಸರಿಯಿರುತ್ತದೆ, ಆದರೆ ಉದ್ಯಮಗಳಾಗಿರುವ ಕಾಲೇಜುಗಳು ಹೇಳುವುದು ಸರಿಯಲ್ಲ’ ಎಂದರು.

ವಾದ, ಪ್ರತಿವಾದ ಆಲಿಸಿದ ಬಳಿಕ ಪೀಠವು,‘ಹೈಕೋರ್ಟ್‌ನಲ್ಲಿ ಅರ್ಜಿದಾರರಾಗಿರುವವರ ಅರ್ಜಿಗಳನ್ನು ಸ್ವೀಕರಿಸಲು ಮತ್ತು ಪ್ರಕ್ರಿಯೆ ಆರಂಭಿಸಲು ನಾವು ಪಿಸಿಐಗೆ ನಿರ್ದೇಶಿಸುತ್ತೇವೆ’ ಎಂದಿತು. ವಿಚಾರಣೆಯನ್ನು ಜುಲೈ 26ಕ್ಕೆ ನಿಗದಿಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT