ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಭಾಷಣ ವಿಚಾರದಲ್ಲಿ ಕೇಂದ್ರ ಏಕೆ ಮೂಕ ಪ್ರೇಕ್ಷಕನಂತಿದೆ?: ಸುಪ್ರೀಂ ಕೋರ್ಟ್‌

ಸುದ್ದಿ ವಾಹಿನಿಗಳ ನಿರೂಪಕರ ವಿರುದ್ಧವೂ ಕಿಡಿ
Last Updated 21 ಸೆಪ್ಟೆಂಬರ್ 2022, 15:54 IST
ಅಕ್ಷರ ಗಾತ್ರ

ನವದೆಹಲಿ: ‘ದ್ವೇಷ ಭಾಷಣದ ವಿಚಾರದಲ್ಲಿ ಮೂಕ ಪ್ರೇಕ್ಷಕನಂತೆ ಏಕೆ ವರ್ತಿಸುತ್ತಿದ್ದೀರಿ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ದ್ವೇಷ ಭಾಷಣ ಹಾಗೂ ವದಂತಿ ಹರಡುವಿಕೆ ನಿಯಂತ್ರಿಸಲು ನಿರ್ದಿಷ್ಟ ಕಾನೂನು ರೂಪಿಸುವಂತೆ ಕೋರಿ ಬಿಜೆಪಿ ಮುಖಂಡ ಹಾಗೂ ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಸೇರಿದಂತೆ ಇತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌)ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌ ಹಾಗೂ ಹೃಷಿಕೇಶ್‌ ರಾಯ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಇವುಗಳ ವಿಚಾರಣೆ ನಡೆಸಿತು.

ಮುಖ್ಯವಾಹಿನಿಯ ಸುದ್ದಿವಾಹಿನಿಗಳೇ ದ್ವೇಷ ಭಾಷಣ ಹರಡುವಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದನ್ನು ಪ್ರಸ್ತಾಪಿಸಿದ ನ್ಯಾಯಪೀಠ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ‘ದೇಶವು ಎತ್ತ ಸಾಗುತ್ತಿದೆ. ಈ ವಿಚಾರವನ್ನು ಕ್ಷುಲ್ಲಕವೆಂದು ನೀವೇಕೆ ಪರಿಗಣಿಸಿದ್ದೀರಿ’ ಎಂದು ಕೇಂದ್ರದ ವಿರುದ್ಧ ಕಿಡಿಕಾರಿತು.

‘ದ್ವೇಷ ಭಾಷಣ ಇಡೀ ದೇಶವನ್ನೇ ವಿಷಪೂರಿತಗೊಳಿಸುತ್ತದೆ. ಅದಕ್ಕೆ ಆಸ್ಪದ ನೀಡಲಾಗದು. ರಾಜಕೀಯ ಪಕ್ಷಗಳು ಬರುತ್ತವೆ ಹೋಗುತ್ತವೆ. ಆದರೆ ರಾಷ್ಟ್ರ ಮತ್ತು ಮುಕ್ತ ಪತ್ರಿಕಾ ಸಂಸ್ಥೆಗಳು ಶಾಶ್ವತವಾಗಿ ಉಳಿಯುತ್ತವೆ. ನಮಗೆ ನಿಜವಾದ ಸ್ವಾತಂತ್ರ್ಯ ಬೇಕು. ಆ ನಿಟ್ಟಿನಲ್ಲಿ ಸರ್ಕಾರವು ನಿರ್ದಿಷ್ಟ ನಿಲುವು ತಳೆಯಲು ಮುಂದಾಗಬೇಕು’ ಎಂದು ನ್ಯಾಯಪೀಠ ಹೇಳಿತು.

‘ಪತ್ರಿಕಾ ಸ್ವಾತಂತ್ರ್ಯ ಬಹುಮುಖ್ಯವಾದುದು. ಹೀಗಿದ್ದರೂ ನಿರ್ಬಂಧದ ಗೆರೆಯನ್ನು ಎಲ್ಲಿ ಎಳೆಯಬೇಕು ಎಂಬುದು ನಮಗೆ ಗೊತ್ತಿರಬೇಕು. ಈಗಂತೂ ನಿರೂಪಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳಿಗೆ ಮಾತನಾಡುವುದಕ್ಕೇ ಅವಕಾಶ ಕೊಡುವುದಿಲ್ಲ. ಅವರ ಮಾತನ್ನು ‘ಮ್ಯೂಟ್‌’ ಮಾಡಿಬಿಡುತ್ತಾರೆ’ ಎಂದು ಟಿ.ವಿ. ವಾಹಿನಿಗಳ ಹೆಸರು ಪ್ರಸ್ತಾಪಿಸದೆಯೇ ಚಾಟಿ ಬೀಸಿತು.

‘ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇದೆಲ್ಲಾ ನಡೆಯುತ್ತಿದೆ. ಯಾರೂ ಅವರನ್ನು ಹೊಣೆಗಾರರನ್ನಾಗಿ ಮಾಡದಿರುವುದು ಬೇಸರದ ಸಂಗತಿ. ಅಭಿವ್ಯಕ್ತಿ ಸ್ವಾತಂತ್ರ್ಯವು ವೀಕ್ಷಕರ ಹಕ್ಕನ್ನೂ ಒಳಗೊಂಡಿದೆ. ಸಾಂಸ್ಥಿಕ ಕಾರ್ಯವಿಧಾನ ಜಾರಿಯಲ್ಲಿರುವವರೆಗೂ ಜನ ಇದೇ ರೀತಿ ಮುಂದುವರಿಯುತ್ತಾರೆ. ಇದಕ್ಕೆ ನಿರ್ದಿಷ್ಟ ಕಾನೂನಿನ ಚೌಕಟ್ಟು ರೂಪಿಸಬೇಕು’ ಎಂದು ನ್ಯಾಯಪೀಠ ತಿಳಿಸಿತು.

‘ನಿರ್ದಿಷ್ಟ ಸಮುದಾಯದ ವಿರುದ್ಧ ಸದ್ದಿಲ್ಲದೆ ಅಭಿಯಾನ ಕೈಗೊಳ್ಳುವುದೂ ದ್ವೇಷ ಭಾಷಣ ಎನಿಸಿಕೊಳ್ಳುತ್ತದೆ. ಮಾಧ್ಯಮಗಳು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ನಾವೆಲ್ಲರೂ ಈ ರಾಷ್ಟ್ರಕ್ಕೆ ಸೇರಿದವರು. ಎಲ್ಲರೂ ಗಣರಾಜ್ಯದ ಭಾಗವಾಗಿದ್ದೇವೆ’ ಎಂದು ಹೇಳಿತು.

‘ದ್ವೇಷ ಭಾಷಣದ ವಿಚಾರವಾಗಿ ನ್ಯಾಯಾಲಯವು ಜುಲೈ 21ರಂದು ಆದೇಶ ನೀಡಿತ್ತು. ಈ ಸಂಬಂಧ ಈವರೆಗೆ 14 ರಾಜ್ಯಗಳಷ್ಟೇ ಪ್ರತಿಕ್ರಿಯೆ ಸಲ್ಲಿಸಿವೆ’ ಎಂದು ಕೇಂದ್ರವು ನ್ಯಾಯಪೀಠಕ್ಕೆ ತಿಳಿಸಿತು.

ಈ ಕುರಿತು ಎರಡು ವಾರಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಪೀಠವು ವಿಚಾರಣೆಯನ್ನು ನವೆಂಬರ್‌ 23ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT