ಶನಿವಾರ, ಮಾರ್ಚ್ 25, 2023
23 °C
ಜೀವಾವಧಿ ಶಿಕ್ಷೆಯಿಂದ ಖುಲಾಸೆಗೊಳಿಸಿದ್ದ ಹೈಕೋರ್ಟ್‌

ನಕ್ಸಲರ ನಂಟು: ಮಾಜಿ ಪ್ರಾಧ್ಯಾಪಕ ಸಾಯಿಬಾಬಾ ಬಿಡುಗಡೆ ಆದೇಶಕ್ಕೆ 'ಸುಪ್ರೀಂ' ತಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ಶುಕ್ರವಾರ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಶನಿವಾರ ರದ್ದುಗೊಳಿಸಿದೆ. ಎಲ್ಲ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡುವ ಆದೇಶವನ್ನು ತಡೆಹಿಡಿದಿದೆ. 

ನಕ್ಸಲರ ಜೊತೆ ನಂಟು ಹೊಂದಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಸಾಯಿಬಾಬಾ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ, ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ಶುಕ್ರವಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಇದನ್ನೂ ಓದಿ: 

ಹೈಕೋರ್ಟ್ ಆದೇಶ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ಕುರಿತು ತುರ್ತು ಕಲಾಪ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಹಾಗೂ ಬೇಲಾ ಎಂ. ತ್ರಿವೇದಿ ಅವರ ಪೀಠ, ಪ್ರತಿಕ್ರಿಯೆ ನೀಡುವಂತೆ ಸಾಯಿಬಾಬಾ ಹಾಗೂ ಇತರರಿಗೆ ಡಿಸೆಂಬರ್ 8ರವರೆಗೆ ಕಾಲಾವಕಾಶ ನೀಡಿತು. 

ಅನಾರೋಗ್ಯ ಹಾಗೂ ದೈಹಿಕ ಅಸಮರ್ಥತೆ‌ ಕಾರಣಕ್ಕೆ ತಮ್ಮನ್ನು ಗೃಹಬಂಧನದಲ್ಲಿ ಇರಿಸಬೇಕು ಎಂದು ಸಾಯಿಬಾಬಾ ಅವರು ಮಾಡಿದ್ದ ಮನವಿಯನ್ನೂ ಸುಪ್ರೀಂ ಕೋರ್ಟ್ ಇದೇ ವೇಳೆ ತಿರಸ್ಕರಿಸಿತು. ಸಾಯಿಬಾಬಾ ಅವರು ಗೃಹಬಂಧನ ಕುರಿತು ಮಾಡಿದ ಮನವಿಗೆ ವಿರೋಧ ವ್ಯಕ್ತಪಡಿಸಿದ ಮಹಾರಾಷ್ಟ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಗೃಹಬಂಧನಲ್ಲಿ ಇರಿಸುವಂತೆ ನಗರ ನಕ್ಸಲರು ಕೇಳಿಕೊಳ್ಳುವ ಹೊಸ ಪ್ರವೃತ್ತಿ ಶುರುವಾಗಿದೆ’ ಎಂದು ಹೇಳಿತು. 

ತಪ್ಪಿತಸ್ಥರ ವಿರುದ್ಧ ಇರುವ ಆರೋಪಗಳ ಗಂಭೀರತೆಯನ್ನು ಪರಿಗಣಿಸದೇ ಹೈಕೋರ್ಟ್ ನೀಡಿರುವ ಆದೇಶದ ಬಗ್ಗೆ ವಿಸ್ತೃತ ಪರಿಶೀಲನೆ ಅಗತ್ಯ ಎಂದು ಪೀಠ ಅಭಿಪ್ರಾಯಪಟ್ಟಿತು. ‘ಸಾಕ್ಷ್ಯಾಧಾರಗಳ ಆಧಾರದಲ್ಲಿಯೇ ಆರೋಪಿಗಳನ್ನು ದೋಷಿ ಎಂದು ಪರಿಗಣಿಸಲಾಗಿದೆ. ಭಾರತದ ಸಾರ್ವಭೌಮತೆ, ಅಖಂಡತೆ ಹಾಗೂ ಸಮಾಜದ ಹಿತಾಸಕ್ತಿಗೆ ವಿರುದ್ಧವಾದ ಚುಟುವಟಿಕೆಗಳು ಗಂಭೀರ ಸ್ವರೂಪದ ಅಪರಾಧಗಳಾಗಿವೆ. ಆದರೆ ಹೈಕೋರ್ಟ್ ಈ ಎಲ್ಲ ಆಯಾಮಗಳಲ್ಲಿ ಪರಿಶೀಲನೆ ನಡೆಸದೇ, ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯನ್ನಷ್ಟೇ (ಯುಎಪಿಎ) ಪರಿಗಣಿಸಿ ಆದೇಶ ಹೊರಡಿಸಿದೆ’ ಎಂದು ಪೀಠ ಹೇಳಿತು. 

‘ನನ್ನ ಕಕ್ಷಿದಾರರು ಶೇ 90–95ರಷ್ಟು ದೈಹಿಕ ನ್ಯೂನತೆ ಹೊಂದಿದ್ದು, ಗಾಲಿಕುರ್ಚಿಯನ್ನು ಆಶ್ರಯಿಸಿದ್ದಾರೆ. ಅವರಿಗೆ ಓಡಾಡಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಅವರನ್ನು ಮತ್ತೆ ಜೈಲಿಗೆ ಕಳುಹಿಸಬೇಡಿ. ಬೇಕಾದರೆ, ಗೃಹಬಂಧನಲ್ಲಿ ಇರಿಸಬಹುದು. ಅವರ ದೂರವಾಣಿ ಸಂಪರ್ಕವನ್ನು ಕಡಿತಗೊಳಿಸಬಹುದು. ಕೋರ್ಟ್ ನಿರ್ದೇಶನಗಳನ್ನು ಅವರು ಪಾಲಿಸುತ್ತಾರೆ’ ಎಂದು ಸಾಯಿಬಾಬಾ ಪರ ವಕೀಲ ಆರ್. ಬಸಂತ್ ಅವರು ವಾದ ಮಂಡಿಸಿದರು. ಆದರೆ, ಈ ವಾದವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಒಪ್ಪಲಿಲ್ಲ. 

ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ವಶಕ್ಕೆ (ದೆಹಲಿ ವರದಿ): ಸಾಯಿಬಾಬಾ ಅವರ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಬಳಿಕ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐಎಸ್ಎ) ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಆದರೆ ಶಾಂತಿಯುತ ಪ್ರತಿಭಟನೆ ನಡೆಸಿದ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದರು ಎಂದು ಸಂಘಟನೆ ಹೇಳಿದೆ. ವಿಶ್ವವಿದ್ಯಾಲಯದ ಕಲಾ ವಿಭಾಗದಿಂದ ವಿದ್ಯಾರ್ಥಿಗಳನ್ನು ಪೊಲೀಸರು ಕ್ರೂರವಾಗಿ ಕರೆದೊಯ್ದರು ಎಂದು ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.

‘ಮಿದುಳು ಅಪಾಯಕಾರಿ’

ಸಾಯಿಬಾಬಾ ಅವರು ಮಾವೋವಾದಿಗಳ ಜತೆ ನಂಟು ಹೊಂದಿದ್ದರು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ‘ಸಾಯಿಬಾಬಾ ಅವರು ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ಸಶಸ್ತ್ರ ಚಳವಳಿಯ ಭಾಗವಾಗಿದ್ದರು. ಮಾವೋವಾದಿ ನಾಯಕರಿಗೆ ಸಭೆಗಳನ್ನು ನಡೆಸಲು ನೆರವಾಗಿದ್ದರು. ಅಷ್ಟೇ ಅಲ್ಲ, ಮಾವೋವಾದಿಗಳ ಮಿದುಳಾಗಿ ಅವರು ಕೆಲಸ ಮಾಡುತ್ತಿದ್ದರು’ ಎಂದು ಆರೋಪಿಸಿದರು.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಸಾಯಿಬಾಬಾ ಪರ ವಕೀಲ ಬಸಂತ್, ‘ಸಾಯಿಬಾಬಾ ಅವರು ಮಾವೋವಾದಿ ಸಿದ್ಧಾಂತದ ಬಗ್ಗೆ ಸ್ವಲ್ಪ ಒಲವು ಹೊಂದಿದ್ದಿರಬಹುದು. ಆದರೆ, ಅವರು ಮಾವೋವಾದಿಗಳ ಮೆದುಳಾಗಿ ಕೆಲಸ ಮಾಡಿರಲಿಲ್ಲ’ ಎಂದರು. ಈ ವೇಳೆ ಮಧ್ಯಪ್ರವೇಶಿದ ಕೋರ್ಟ್, ‘ಭಯೋತ್ಪಾದಕರು ಹಾಗೂ ಮಾವೋವಾದಿಗಳ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಮಿದುಳು ಅತಿ ಅಪಾಯಕಾರಿ. ಅವರು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಬೇಕು ಎಂದೇನಿಲ್ಲ’ ಎಂದು ಅಭಿಪ್ರಾಯಪಟ್ಟಿತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು