ಭಾನುವಾರ, ಮಾರ್ಚ್ 26, 2023
21 °C

MBBS ಪ್ರವೇಶ; ರಾಜ್ಯಗಳಿಂದ ಶೈಕ್ಷಣಿಕ ಅರ್ಹತೆ ನಿಗದಿ: ‘ಸುಪ್ರೀಂ’ನಿಂದ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ಪಡೆಯಲು ಭಾರತೀಯ ವೈದ್ಯಕೀಯ ಮಂಡಳಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ವಿದ್ಯಾರ್ಹತೆಯನ್ನು ರಾಜ್ಯ ಸರ್ಕಾರವೊಂದು ನಿಗದಿಪಡಿಸಬಹುದೇ ಎಂಬುದನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ.

ಅಸ್ಸಾಂ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಎಂ.ಆರ್‌.ಶಾ ಅವರಿರುವ ನ್ಯಾಯಪೀಠ, ಈ ನಿರ್ಧಾರ ಪ್ರಕಟಿಸಿದೆ.

ಎಂಬಿಬಿಎಸ್‌ ಪ್ರವೇಶಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ನಡೆಸುವ ನೀಟ್‌ ಪರೀಕ್ಷೆಗೆ ಹಾಜರಾಗ ಬಯಸುವ ಅಭ್ಯರ್ಥಿಗಳು 12ನೇ ತರಗತಿ ಪರೀಕ್ಷೆಯಲ್ಲಿ ಭೌತವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಜೀವ ವಿಜ್ಞಾನ ವಿಷಯಗಳಲ್ಲಿ ಕನಿಷ್ಠ ಶೇ 60 ಅಂಕ ಗಳಿಸಿರಬೇಕು ಎಂದು ಅಸ್ಸಾಂ ಸರ್ಕಾರ ನಿಗದಿಪಡಿಸಿದೆ.

‘12ನೇ ತರಗತಿ ಪರೀಕ್ಷೆಯಲ್ಲಿ ಸರಾಸರಿ ಶೇ 50ರಷ್ಟು ಅಂಕಗಳನ್ನು ಪಡೆದ ಅಭ್ಯರ್ಥಿ ನೀಟ್‌ಗೆ ಹಾಜರಾಗಬಹುದು. ಆದರೆ, ಇದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೂ, ಆ ಅಭ್ಯರ್ಥಿಗಳಿಗೆ ಎಂಬಿಬಿಎಸ್‌ ಪ್ರವೇಶ ನಿರಾಕರಿಸಲಾಗುತ್ತದೆಯೇ’ ಎಂದು ಅಸ್ಸಾಂ ಸರ್ಕಾರ ಪರ ವಕೀಲ ಮನಿಂದರ್‌ ಸಿಂಗ್‌ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.

12ನೇ ತರಗತಿಯಲ್ಲಿ ಮೊದಲ ಪ್ರಯತ್ನದಲ್ಲೇ ಅಭ್ಯರ್ಥಿ ತೇರ್ಗಡೆಯಾಗಿರಬೇಕು ಎಂಬ ಮಾನದಂಡವನ್ನು ರೂಪಿಸಲಾಗಿದ್ದು, ಈ ಬಗ್ಗೆಯೂ ನ್ಯಾಯಪೀಠ ವಿವರಣೆ ಕೇಳಿತು. 

ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ, ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ನ್ಯಾಯಪೀಠ ನೋಟಿಸ್ ಜಾರಿ ಮಾಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು