ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ನ್ಯಾಯಮಂಡಳಿಗೆ ನೇಮಕ ವಿಳಂಬಕ್ಕೆ ಆಕ್ರೋಶ
Last Updated 6 ಸೆಪ್ಟೆಂಬರ್ 2021, 20:31 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಜತೆಗೆಸಂಘರ್ಷಕ್ಕೆ ಇಳಿಯಲು ಬಯಸುವುದಿಲ್ಲ; ಆದರೆ, ನ್ಯಾಯಮಂಡಳಿಗಳ ನೇಮಕದಲ್ಲಿ ಸರ್ಕಾರ ಮಾಡುತ್ತಿರುವ ವಿಳಂಬವನ್ನು ಗಮನಿಸಿದರೆ ತಾಳ್ಮೆ ಕಳೆದುಕೊಳ್ಳುವಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

‘ಸುಪ್ರೀಂ ಕೋರ್ಟ್‌ನ ಈ ಹಿಂದಿನ ತೀರ್ಪುಗಳನ್ನು ನಿರ್ಲಕ್ಷಿಸಿ, ನ್ಯಾಯಮಂಡಳಿ ಸುಧಾರಣೆ ಕಾಯ್ದೆ 2021 ಅನ್ನು ಅಂಗೀಕರಿಸಲಾಗಿದೆ. ಇದು ನ್ಯಾಯಾಲಯಕ್ಕೆ ತೀವ್ರ ಅಸಮಾಧಾನ ಉಂಟು ಮಾಡಿದೆ. ಸುಪ್ರೀಂ ಕೋರ್ಟ್‌ನ ತೀರ್ಪುಗಳಿಗೆ ಗೌರವ ನೀಡಲೇಬಾರದು ಎಂದು ಕೇಂದ್ರವು ಟೊಂಕ ಕಟ್ಟಿ ನಿಂತ ಹಾಗೆ ಇದೆ’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ಹೇಳಿದೆ.

ನ್ಯಾಯಮಂಡಳಿಗಳಿಗೆ ವಾರ ದೊಳಗೆ ನೇಮಕ ಮಾಡದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನೂ ಪೀಠವು ಸರ್ಕಾರಕ್ಕೆ ನೀಡಿದೆ.

‘ನಮಗೆ ಸಂಘರ್ಷ ಬೇಕಾಗಿಲ್ಲ. ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ ಮಾಡಿದ ರೀತಿಯು ನಮಗೆ ಖುಷಿ ತಂದಿದೆ. ಆದರೆ, ಸದಸ್ಯರು ಮತ್ತು ಅಧ್ಯಕ್ಷರು ಇಲ್ಲದೆ ನ್ಯಾಯಮಂಡಳಿಗಳ ಗುಣಮಟ್ಟ ಕುಸಿಯುತ್ತಿದೆ. ನಿಮ್ಮಲ್ಲಿ ಇರುವ ಪರ್ಯಾಯ ಯೋಜನೆಗಳೇನು ಎಂಬುದನ್ನು ತಿಳಿಸಿ. ನಿಮಗೆ ಏನು ಬೇಕಿದೆ? ನ್ಯಾಯಮಂಡಳಿಗಳನ್ನು ಮುಚ್ಚಬೇಕೇ’ ಎಂದು ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ ರಾವ್ ಮತ್ತು ಡಿ.ವೈ. ಚಂದ್ರಚೂಡ್‌ ಅವರೂ ಇದ್ದ ಪೀಠವು ಸರ್ಕಾರವನ್ನು ಪ್ರಶ್ನಿಸಿದೆ.

‘ನಾವು ಶಿಫಾರಸು ಮಾಡಿದ ಹೆಸರುಗಳನ್ನು ಕೈಬಿಡಲಾಗುತ್ತಿದೆ. ಏಕೆ ಎಂಬುದೇ ಸ್ಪಷ್ಟವಿಲ್ಲ. ಅಧಿಕಾರಿಗಳ ಜತೆ ಕುಳಿತು ನಾವು ನಿರ್ಧಾರಗಳನ್ನು ಕೈಗೊಂಡಿದ್ದೆವು. ಎಲ್ಲ ಶ್ರಮವೂ ವ್ಯರ್ಥ’ ಎಂದು ಚಂದ್ರಚೂಡ್‌ ಹೇಳಿದರು.

‘ತೀರ್ಪು ಬಗ್ಗೆ ಗೌರವವಿಲ್ಲ’:

ಈ ನ್ಯಾಯಾಲಯದ ತೀರ್ಪುಗಳ ಬಗ್ಗೆ ಸರ್ಕಾರಕ್ಕೆ ಗೌರವ ಇಲ್ಲ. ಅದು ದುರದೃಷ್ಟಕರ. ನ್ಯಾಯಮಂಡಳಿಗೆ ನೇಮಕ ಮಾಡಲಾಗುವುದು ಎಂದು ಕಳೆದ ಬಾರಿ ಹೇಳಿದ್ದೀರಿ. ಎಷ್ಟು ಹುದ್ದೆಗಳಿಗೆ ನೇಮಕ ಮಾಡಿದ್ದೀರಿ’ ಎಂದು ಪೀಠವು ಸರ್ಕಾರವನ್ನು ಪ್ರಶ್ನಿಸಿದೆ. ನ್ಯಾಯಮಂಡಳಿಗಳನ್ನು ದುರ್ಬಲಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂದಿದೆ.

ಮದ್ರಾಸ್‌ ವಕೀಲರ ಸಂಘದ ಪ್ರಕರಣದಲ್ಲಿ ವಜಾ ಮಾಡಲಾದ ಕಾಯ್ದೆಯ ಪಡಿಯಚ್ಚಿನಂತೆ 2021ರ ಕಾಯ್ದೆ ಇದೆ ಎಂದು ಪೀಠವು ಅತೃಪ್ತಿ ವ್ಯಕ್ತಪಡಿಸಿತು.

‘ಮೂರು ವಿಚಾರಗಳನ್ನು ಈಗ ಗಮನಿಸಬಹುದು– ಮೊದಲನೆಯದಾಗಿ, ನ್ಯಾಯಮಂಡಳಿ ಕಾಯ್ದೆಯನ್ನು ತಡೆ ಹಿಡಿಯಿರಿ ಅಥವಾ ನ್ಯಾಯಮಂಡಳಿಗಳನ್ನು ಮುಚ್ಚಿಬಿಡಿ. ನ್ಯಾಯಮಂಡಳಿಗೆ ನಾವೇ ನೇಮಕ ಮಾಡುತ್ತೇವೆ ಅಥವಾ ಹೈಕೋರ್ಟ್‌ಗಳಿಗೆ ಈ ಅಧಿಕಾರ ಕೊಡುತ್ತೇವೆ. ಮೂರನೆಯದಾಗಿ, ನ್ಯಾಯಾಂಗ ನಿಂದನೆ ಪ್ರಕರಣ ಪ್ರಕ್ರಿಯೆ ಆರಂಭಿಸುತ್ತೇವೆ’ ಎಂದು ಪೀಠವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT