ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಣಸಿ: ಜ್ಞಾನವಾಪಿ ಮಸೀದಿಯಲ್ಲಿ ಎರಡನೇ ದಿನವೂ ಮುಂದುವರಿದ ಸಮೀಕ್ಷೆ

Last Updated 15 ಮೇ 2022, 9:16 IST
ಅಕ್ಷರ ಗಾತ್ರ

ವಾರಾಣಸಿ: ಬಿಗಿ ಭದ್ರತೆಯೊಂದಿಗೆ ಜ್ಞಾನವಾಪಿ ಮಸೀದಿಯಲ್ಲಿ ಎರಡನೇ ದಿನವೂ ವಿಡಿಯೊ ಚಿತ್ರೀಕರಣ, ಸಮೀಕ್ಷೆ ಮುಂದುವರಿದಿದೆ. ಇಂದೇ (ಭಾನುವಾರ) ಸಮೀಕ್ಷೆ ಪ್ರಕ್ರಿಯೆ ಪೂರ್ಣಗೊಳಿಸಲು ಗರಿಷ್ಠ ಪ್ರಯತ್ನ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಸೀದಿಯ ಆಡಳಿತ ಮಂಡಳಿಯಿಂದ ಆಕ್ಷೇಪ ವ್ಯಕ್ತವಾದ ಕಾರಣ ಕಳೆದ ವಾರ ಸಮೀಕ್ಷೆ ಸ್ಥಗಿತಗೊಂಡಿತ್ತು. ಸಮೀಕ್ಷೆಗಾಗಿ ನ್ಯಾಯಾಲಯವು ನೇಮಿಸಿರುವ ಆಯುಕ್ತರಿಗೆ ಮಸೀದಿ ಆವರಣದೊಳಗೆ ವಿಡಿಯೊ ಚಿತ್ರೀಕರಣ ಮಾಡುವ ಅವಕಾಶವಿಲ್ಲ ಎಂದು ಮಸೀದಿಯ ಆಡಳಿತ ಮಂಡಳಿ ಪ್ರತಿಪಾದಿಸಿತ್ತು.

ವಾರಾಣಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲಕ್ಕೆ ತಾಗಿಕೊಂಡೇ ಮಸೀದಿ ಇದೆ. ಮಸೀದಿಯ ಹೊರ ಗೋಡೆಗೆ ತಾಗಿಕೊಂಡೇ ಇರುವ ಶೃಂಗಾರ ಗೌರಿ, ಗಣೇಶ, ಹನುಮಾನ್‌ ಮತ್ತು ನಂದಿ ವಿಗ್ರಹಗಳಿಗೆ ಪೂಜೆ ನೆರವೇರಿಸುವುದಕ್ಕೆ ಅವಕಾಶ ನೀಡಬೇಕು ಎಂದು ಸ್ಥಳೀಯ ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಕೆಲ ಮಹಿಳೆಯರು, ದೇವತಾ ವಿಗ್ರಹಗಳಿಗೆ ಯಾವುದೇ ಹಾನಿ ಉಂಟುಮಾಡದಂತೆ ಸೂಚಿಸಬೇಕು ಎಂದು ಕೋರಿದ್ದರು.

ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ವಿಡಿಯೊ ಸಮೀಕ್ಷೆಗೆ ಆದೇಶಿಸಿತ್ತು.

‘ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಮೀಕ್ಷೆ ಆರಂಭವಾಗಿದೆ’ ಎಂದು ವಾರಾಣಸಿಯ ಪೊಲೀಸ್ ಆಯುಕ್ತ ಎ. ಸತೀಶ್ ಗಣೇಶ್ ಭಾನುವಾರ ಬೆಳಿಗ್ಗೆ ತಿಳಿಸಿದ್ದಾರೆ.

‘ಶನಿವಾರ ನಿಯೋಜಿಸಿದಷ್ಟೇ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನೆರೆಯ ದೇಗುಲಗಳಿಗೆ ಭೇಟಿ ನೀಡುವ ಭಕ್ತರಿಗೆ ತೊಂದರೆಯಾಗದಂತೆ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಶಾಂತಿಯುತ ವಾತಾವರಣ ಇರುವಂತೆ ನೋಡಿಕೊಳ್ಳುವುದರ ಜತೆಗೆ ನ್ಯಾಯಾಲಯದ ಆದೇಶ ಪಾಲಿಸುವುದು ನಮ್ಮ ಜವಾಬ್ದಾರಿ’ ಎಂದು ಅವರು ಹೇಳಿದ್ದಾರೆ.

ಮೊದಲ ದಿನದ ಸಮೀಕ್ಷೆ ಶನಿವಾರ ಶಾಂತಿಯುತವಾಗಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT