ಮಂಗಳವಾರ, ಮಾರ್ಚ್ 2, 2021
23 °C

#SuspendKanganaRanaut: ಟ್ರೆಂಡ್‌ ಮಾಡಿದವರು ದೇಶದ್ರೋಹಿಗಳು ಎಂದ ಕಂಗನಾ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ವಿವಾದಿತ 'ತಾಂಡವ್' ವೆಬ್‌ ಸರಣಿಯ ಬಗ್ಗೆ ಪ್ರತಿಕ್ರಿಯಿಸಿದ ನಂತರ ತಮ್ಮ ಟ್ವಿಟರ್‌ ಖಾತೆಯ ಮೇಲೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿತ್ತು ಎಂದು ಕಂಗನಾ ರನೌತ್ ಬುಧವಾರ ತಿಳಿಸಿದ್ದಾರೆ.

ಅಮೆಜಾನ್ ಪ್ರೈಮ್ ವಿಡಿಯೊ ವೆಬ್‌ ಸರಣಿ 'ತಾಂಡವ್‌' ಬಗ್ಗೆ ಪ್ರತಿಕ್ರಿಯಿಸಿದ್ದ ಕಂಗನಾ ಹಿಂಸಾಚಾರಕ್ಕೆ ಪ್ರಚೋದಿಸುವಂತಹ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದರು. ಇದು ವಿವಾದಕ್ಕೆ ಗ್ರಾಸವಾಗುತ್ತಿದ್ದಂತೆ ಟ್ವೀಟ್‌ ಅನ್ನು ಅಳಿಸಿಹಾಕಿದ್ದರು.

ಕಂಗಾನಾರ ಆಕ್ಷೇಪಾರ್ಹ ಟ್ವೀಟ್‌ ವಿರುದ್ಧ ಟ್ವಿಟರ್‌ನಲ್ಲೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. #SuspendKanganaRanaut (ಕಂಗನಾರನ್ನು ವಜಾಗೊಳಿಸಿ) ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗುತ್ತಿದ್ದು, ಕಂಗನಾ ಅವರು ದ್ವೇಷವೊಂದನ್ನು ಬಿಟ್ಟು ಬೇರೇನೂ ಹರಡುತ್ತಿಲ್ಲವೆಂದು ಟ್ವೀಟಿಗರು ಹೇಳಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಕಂಗನಾ, 'ದೇಶದ್ರೋಹಿಗಳು #SuspendKanganaRanaut ಅನ್ನು ಟ್ರೆಂಡ್‌ ಮಾಡುತ್ತಿದ್ದಾರೆ. ರಂಗೋಲಿ(ಕಂಗನಾ ಸಹೋದರಿ) ಅವರನ್ನು ವಜಾಗೊಳಿಸಿದ ಸಮಯದಲ್ಲಿ ಅದಕ್ಕೆ ಕಾರಣರಾದವರ ಬದುಕನ್ನು ಶೋಚನೀಯಗೊಳಿಸಿದ್ದೆ. ಈಗ ಅವರು ನನ್ನನ್ನು ವಜಾಗೊಳಿಸಿದರೆ, ನಾನು ವರ್ಚುವಲ್‌ ಜಗತ್ತಿನಿಂದ ಹೊರಬರುತ್ತೇನೆ. ಆ ನಂತರ ವಾಸ್ತವ ಜಗತ್ತಿನಲ್ಲಿ ನಿಜವಾದ ಕಂಗನಾ ಯಾರೆಂಬುದನ್ನು ತೋರಿಸುತ್ತೇನೆ' ಎಂದು ಹೇಳಿದ್ದಾರೆ.

ಕೋಮು ದ್ವೇಷ ಹರಡುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ನಟಿ ಕಂಗನಾ ರನೌತ್ ಮತ್ತು ಅವರ ಸಹೋದರಿ ರಂಗೋಲಿ ಚಾಂದೇಲ್‌ ವಿಚಾರಣೆಯು ಮುಂಬೈನ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಈ ಹಿಂದೆ ನಡೆದಿತ್ತು.

'ಎರಡು ಸಮುದಾಯಗಳ ನಡುವೆ ಕೋಮುದ್ವೇಷವನ್ನು ಪ್ರಚೋದಿಸುವ ಕೆಲಸದಲ್ಲಿ ಕಂಗನಾ ಮತ್ತು ಅವರ ಸಹೋದರಿ ರಂಗೋಲಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮತ್ತು ಪೋಸ್ಟ್‌ಗಳನ್ನು ಹಾಕುವ ಮೂಲಕ ಬಾಲಿವುಡ್‌ ಬಗ್ಗೆ ಜನರ ಮನಸ್ಸಿನಲ್ಲಿ ಕೆಟ್ಟ ಭಾವನೆ ಮೂಡಿಸಿದ್ದಾರೆ' ಎಂದು ಮುನ್ನಾವರ್‌ ಅಲಿ ಎಂಬುವವರು ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು