ಬುಧವಾರ, ಡಿಸೆಂಬರ್ 2, 2020
26 °C

‘ಅಳಗಿರಿ ಅವರನ್ನೂ ಕರೆತರುವೆ’: ಬಿಜೆಪಿ ಸೇರಿದ ಡಿಎಂಕೆಯ ಉಚ್ಚಾಟಿತ ನಾಯಕ ರಾಮಲಿಂಗಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳುನಾಡು ಡಿಎಂಕೆ ಪಕ್ಷದಿಂದ ಉಚ್ಚಾಟನೆಯಾಗಿರುವ ಮಾಜಿ ಸಂಸದ ಕೆ.ಪಿ. ರಾಮಲಿಂಗಂ ಅವರು ಇಂದು ಬಿಜೆಪಿಗೆ ಸೇರ್ಪಡೆಯಾದರು. ಇದೇ ವೇಳೆ ಅವರು ತಮ್ಮ ಆಪ್ತರಾಗಿರುವ ಡಿಎಂಕೆ ನಾಯಕ ಎಂ.ಕೆ. ಅಳಗಿರಿ ಅವರನ್ನೂ ಕರೆತರುವುದಾಗಿ ಹೇಳಿಕೊಂಡಿದ್ದಾರೆ.

ಕರ್ನಾಟಕ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್‌.ಮುರುಗನ್ ಅವರ ನೇತೃತ್ವದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಮಲಿಂಗಂ ಬಿಜೆಪಿ ಸೇರಿದರು. ಪಕ್ಷದ ವಿರುದ್ಧ ಟೀಕೆ ಮಾಡಿದ ಆರೋಪದ ಮೇಲೆ ಅವರನ್ನು ಡಿಎಂಕೆ ನಾಯಕ ಎಂಕೆ ಸ್ಟಾಲಿನ್‌ ಮಾರ್ಚ್‌ನಲ್ಲಿ ಪಕ್ಷದಿಂದ ಹೊರಹಾಕಿದ್ದರು.

ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿರುವ ರಾಮಲಿಂಗಂ, ‘ನಾನು ಎಂಕೆ ಅಳಗಿರಿ ಅವರೊಂದಿಗೆ ತುಂಬಾ ಹತ್ತಿರದ ಸಂಬಂಧ ಹೊಂದಿದ್ದೇನೆ. ಅವರನ್ನು ಬಿಜೆಪಿಗೆ ಕರೆತರಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದ್ದಾರೆ. ಅಳಗಿರಿಯವರು ಸ್ಟಾಲಿನ್‌ ಸಹೋದರ ಎಂಬುದು ವಿಶೇಷ.

ಅಳಗಿರಿ ನನಗೆ ಸಹೋದರನಿದ್ದಂತೆ ಎಂದಿರುವ ರಾಮಲಿಂಗಂ, ಡಿಎಂಕೆ ನಾಯಕರು ಬಿಜೆಪಿಗೆ ಸೇರಬೇಕು ಎಂದು ಆಗ್ರಹಿಸಿದ್ದಾರೆ. ಮುಂದುವರಿದು, ತಾವು 30 ವರ್ಷಗಳ ಹಿಂದೆ ಡಿಎಂಕೆ ಸೇರಿದ್ದಾಗ ಪಕ್ಷವು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿತ್ತು. ಸಾಕಷ್ಟು ಶ್ರಮಿಸಿ ಪಕ್ಷ ಕಟ್ಟಿದ್ದೆವು ಎಂದೂ ಹೇಳಿಕೊಂಡಿದ್ದಾರೆ.

ಸರ್ಕಾರಿ ಕಾರ್ಯಕ್ರಮವೊಂದರ ಸಲುವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇಂದು ಚೆನ್ನೈಗೆ ಆಗಮಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಪಕ್ಷದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು