ಭಾನುವಾರ, ಆಗಸ್ಟ್ 14, 2022
26 °C

ಸ್ವಾಮಿ ವಿವೇಕಾನಂದರ ಪುಣ್ಯತಿಥಿ; ಶ್ರೇಷ್ಠ ಆಧ್ಯಾತ್ಮಿಕ ನಾಯಕನಿಗೆ ಗೌರವ ಸಮರ್ಪಣೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಸ್ವಾಮಿ ವಿವೇಕಾನಂದರು ಭಾರತದ ಶ್ರೇಷ್ಠ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರು. ಅವರು ನಮ್ಮ ರಾಷ್ಟ್ರದ ಯುವಕರನ್ನು ಪ್ರೇರೇಪಿಸಿದರು, ಪರಿಶುದ್ಧ ಜೀವನವನ್ನು ನಡೆಸಿದರು ಮತ್ತು ಜಗತ್ತಿಗೆ ಮಾದರಿಯಾಗಿದ್ದರು. ಇಂದು ಸ್ವಾಮಿ ವಿವೇಕಾನಂದರ ಪುಣ್ಯತಿಥಿ. ಪ್ರತೀ ವರ್ಷ ಜುಲೈ 4ರಂದು ಸ್ವಾಮಿ ವಿವೇಕಾನಂದರ ಪುಣ್ಯತಿಥಿಯನ್ನು ಆಚರಿಸಲಾಗುತ್ತದೆ.

ಪುಣ್ಯತಿಥಿಯಂದು ಅವರ ಬುದ್ಧಿವಂತಿಕೆಗೆ ನಾವು ಗೌರವ ಸಲ್ಲಿಸುತ್ತೇವೆ. ಭಾರತೀಯ ಚಿಂತನೆ ಮತ್ತು ತತ್ವಾದರ್ಶಗಳನ್ನು ಜಾಗತಿಕವಾಗಿ ಬೆಳಗಿದ ಅವರ ಸಮಾಜಮುಖಿ ಸಂದೇಶಗಳು ಇಂದಿಗೂ ಸ್ಫೂರ್ತಿಯಾಗಿವೆ.

ಸ್ವಾಮಿ ವಿವೇಕಾನಂದರು 1863ರ ಜನವರಿ 12ರಂದು ಕೋಲ್ಕತ್ತಾದ ಬಂಗಾಳಿ ಕುಟುಂಬದಲ್ಲಿ ನರೇಂದ್ರನಾಥ ದತ್ತನಾಗಿ ಜನಿಸಿದರು. ತಂದೆ ವಿಶ್ವನಾಥ ದತ್ತ. ಕೋಲ್ಕತ್ತ ಹೈಕೋರ್ಟ್ನಲ್ಲಿ ಅಟಾರ್ನಿ ಜನರಲ್ ಆಗಿದ್ದರು. ತಾಯಿ ಭುವನೇಶ್ವರಿ ದೇವಿ ಗೃಹಿಣಿ. ತಮ್ಮ ಚಿಕ್ಕ ವಯಸ್ಸಿನಿಂದಲೇ ಧರ್ಮ, ಆಧ್ಯಾತ್ಮ ಹಾಗೂ ಸನ್ಯಾಸತ್ವದ ಕಡೆಗೆ ಹೆಚ್ಚಿನ ಒಲವು ಹೊಂದಿದ್ದರು. ತತ್ವಶಾಸ್ತ್ರ, ಧರ್ಮ, ಆಧ್ಯಾತ್ಮಿಕತೆ, ಸಾಹಿತ್ಯ ಮತ್ತು ಇತಿಹಾಸದಂತಹ ಅನೇಕ ವಿಷಯಗಳನ್ನು ಚೆನ್ನಾಗಿ ಓದಿಕೊಂಡಿದ್ದರು.

ಬಳಿಕ ಗುರು ರಾಮಕೃಷ್ಣ ಪರಮಹಂಸನನ್ನು ಭೇಟಿಯಾಗಿ ಪ್ರಭಾವಿತರಾಗಿದ್ದರು. ಅವರ ಶಿಷ್ಯರಾಗಿ ಸೇರಿಕೊಂಡ ನರೇಂದ್ರ, ಅವರಿಂದ ಎಲ್ಲ ಜೀವಿಗಳು ದೈವಿಕ ಆತ್ಮದ ಸಾಕಾರ. ಆದ್ದರಿಂದ, ದೇವರಿಗೆ ಸೇವೆ ಮಾಡುವುದೆಂದರೆ ಅದು ಮಾನವಕುಲದ ಸೇವೆಯಿಂದ ಸಾಧ್ಯ ಎಂಬುದನ್ನು ಕಂಡುಕೊಂಡಿದ್ದರು. 1893 ರಲ್ಲಿ ಮಹಾರಾಜ ಅಜಿತ್ ಸಿಂಗ್ ಅವರ ಕೋರಿಕೆಯ ಮೇರೆಗೆ ಅವರು ತಮ್ಮ ಹೆಸರನ್ನು ‘ವಿವೇಕಾನಂದ’ ಎಂದು ಬದಲಾಯಿಸಿಕೊಂಡರು.
1893ರಲ್ಲಿ ವಿವೇಕಾನಂದರ ಚಿಕಾಗೋ ವಿಶ್ವ ಧರ್ಮಸಮ್ಮೇಳನದ ಭಾಷಣ ಭಾರತದ ಪುನರ್ನವಕ್ಕೆ ಕಾರಣವಾಯಿತು. 'ಅಮೆರಿಕದ ನನ್ನ ಸಹೋದರ, ಸಹೋದರಿಯರೇ' ಎಂದು ಸ್ವಾಮಿ ವಿವೇಕಾನಂದರು ಅಂದು ಮಾತುಗಳನ್ನು ಆರಂಭಿಸಿದ್ದರು. ಆ ಮಾತು ಇಂದಿಗೂ ಎಲ್ಲರ ಮನಸಿನಲ್ಲೂ ಚಿರಸ್ಥಾಯಿಯಾಗಿ ಉಳಿದಿವೆ. ಮುಂದೆ 1902ರಲ್ಲಿ ಅವರು ಕಾಲವಾಗುವವರೆಗೂ ಈ ದೇಶದ ಜನರ ಉನ್ನತಿಗಾಗಿ ಶ್ರಮಿಸಿದರು. ಕೇವಲ 39 ವರ್ಷ ವಯಸ್ಸಿನಲ್ಲಿ ಅವರು ಸಾಧಿಸಿದ್ದನ್ನು ಜಗತ್ತು ಮತ್ತು ಭಾರತ ಗೌರವಾದರಗಳಿಂದ ನೆನೆಸುತ್ತದೆ. ಅವರ ಜನ್ಮದಿನವನ್ನು 'ಯುವದಿನಾಚರಣೆ' ಎಂದು ಸರ್ಕಾರ ಘೋಷಿಸಿದೆ.

ಸ್ವಾಮಿ ವಿವೇಕಾನಂದರ ಪ್ರಮುಖ ಉಲ್ಲೇಖಗಳು ಹೀಗಿವೆ...

- 'ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು, ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ'

- 'ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ'

- 'ಜೀವ ನಮ್ಮ ಮಾತನ್ನು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು. ಜೀವನ ನಮ್ಮ ಮಾತನ್ನು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು'

- 'ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ'

- 'ನಾವು ಏನಾಗಿದ್ದೇವೆಯೋ ಅದಕ್ಕೆ ನಾವೇ ಜವಾಬ್ದಾರರು ಮತ್ತು ನಾವು ಏನಾಗಬೇಕೆಂದು ಬಯಸುತ್ತೇವೆಯೋ ಅದಾಗುತ್ತೇವೆ, ನಮ್ಮನ್ನು ನಾವು ರೂಪಿಸಿಕೊಳ್ಳುವ ಶಕ್ತಿ ಇದೆ. ನಾವು ಈಗಿರುವುದು ನಮ್ಮ ಹಿಂದಿನ ಕ್ರಿಯೆಗಳ ಫಲವಾಗಿದ್ದರೆ, ಭವಿಷ್ಯದಲ್ಲಿ ನಾವು ಏನನ್ನು ಬಯಸುತ್ತೇವೆಯೋ ಅದನ್ನು ನಮ್ಮ ಸದ್ಯದ ಕ್ರಿಯೆಗಳಿಂದ ಉಂಟಾಗುತ್ತದೆ; ಆದ್ದರಿಂದ ನಾವು ಹೇಗೆ ವರ್ತಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು'

- 'ನೀನು ಯೋಚನೆ ಮಾಡದೆ ಹೇಳುವ ಒಂದೊಂದು ಮಾತು, ನಿನ್ನನ್ನು ಒಂದೊಂದು ನಿಮಿಷವೂ ಯೋಚನೆ ಮಾಡಿಸುತ್ತೆ'

- 'ನಿಮಗೆ ತಿಳಿದಿದೆ, ನಾನು ಮತ್ತೆ ಜನಿಸಬೇಕಾಗಬಹುದು, ನೀವು ನೋಡಿ, ನಾನು ಮಾನವಕುಲವನ್ನು ಪ್ರೀತಿಸುತ್ತಿದ್ದೇನೆ'

- 'ನಾನು ದೇವರನ್ನು ಶಾಂತಿಗಾಗಿ ಕೇಳಿದಾಗ, ಇತರರಿಗೆ ಹೇಗೆ ಸಹಾಯ ಮಾಡಬೇಕೆಂದು ಅವನು ನನಗೆ ತೋರಿಸಿದನು'

- 'ನೀವು ಏನು ಮಾಡುತ್ತಿರುವಿರೋ ನಿಮ್ಮ ಸಂಪೂರ್ಣ ಮನಸ್ಸನ್ನು ಅದರ ಮೇಲೆ ಕೇಂದ್ರೀಕರಿಸಿ. ನೀವು ಶೂಟಿಂಗ್ ಮಾಡುತ್ತಿದ್ದರೆ, ನಿಮ್ಮ ಮನಸ್ಸು ಗುರಿಯತ್ತ ಮಾತ್ರ ಇರಬೇಕು. ಆಗ ಅದನ್ನು ನೀವು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ನಿಮ್ಮ ಪಾಠಗಳನ್ನು ನೀವು ಕಲಿಯುತ್ತಿದ್ದರೆ, ಪಾಠದ ಬಗ್ಗೆ ಮಾತ್ರ ಯೋಚಿಸಿ. ಭಾರತದಲ್ಲಿ ಇದನ್ನು ಮಾಡಲು ಹುಡುಗರಿಗೆ ಮತ್ತು ಹುಡುಗಿಯರಿಗೆ ಕಲಿಸಲಾಗುತ್ತದೆ'

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು