ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಆತ್ಮನಿರ್ಭರ ಭಾರತ' ಟ್ಯಾಗೋರರ ಚಿಂತನೆಯ ತಿರುಳು: ಮೋದಿ

ಶಾಂತಿನಿಕೇತನ ವಿ.ವಿ ಶತಮಾನೋತ್ಸವ ಕಾರ್ಯಕ್ರಮ
Last Updated 24 ಡಿಸೆಂಬರ್ 2020, 18:35 IST
ಅಕ್ಷರ ಗಾತ್ರ

ಶಾಂತಿನಿಕೇತನ: ‘ಎಲ್ಲ ರಂಗಗಳಲ್ಲಿ ಸ್ವಾವಲಂಬನೆ ಸಾಧಿಸಲು ನಮ್ಮ ಸರ್ಕಾರ ಆರಂಭಿಸಿರುವ ಆತ್ಮ ನಿರ್ಭರ ಭಾರತ ಕಾರ್ಯಕ್ರಮವು ವಿಶ್ವಕವಿ ರವೀಂದ್ರನಾಥ್ ಟ್ಯಾಗೋರ್‌ ಅವರ ಚಿಂತನೆಗಳ ತಿರಳೇ ಆಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.

ಟ್ಯಾಗೋರ್‌ ಅವರು ಸ್ಥಾಪಿಸಿರುವ ವಿಶ್ವಭಾರತಿ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಆನ್‌ಲೈನ್‌ ಮೂಲಕ ಮಾತನಾಡಿದರು.

‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ನಂತರದ ದಿನಗಳಲ್ಲಿ ವಿಶ್ವ ಭ್ರಾತೃತ್ವ ಸಾಧಿಸಲು ವಿಶ್ವಭಾರತಿ ವಿಶ್ವವಿದ್ಯಾಲಯ ಮಹತ್ವದ ಪಾತ್ರ ವಹಿಸಿತ್ತು. ಈಗ ಈ ವಿಶ್ವವಿದ್ಯಾಲಯವು ದೇಶಕ್ಕೆ ಬೇಕಾಗಿರುವ ನೈತಿಕ ಶಕ್ತಿಯ ಮೂಲವಾಗಿದೆ’ ಎಂದು ಮೋದಿ ಹೇಳಿದರು.

‘ಕಲೆ, ಸಾಹಿತ್ಯ, ವಿಜ್ಞಾನ, ನಾವೀನ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶ್ವ ಭಾರತಿ ಗಮನಾರ್ಹ ಸಾಧನೆ ಮಾಡಿದೆ. ವಿಶ್ವವಿದ್ಯಾಲಯದ ಸುತ್ತಲಿನ ಪ್ರದೇಶಗಳಲ್ಲಿರುವ ಕುಶಲಕರ್ಮಿಗಳ ನೆರವಿಗೆ ವಿದ್ಯಾರ್ಥಿಗಳು ಧಾವಿಸಬೇಕು. ಅವರ ಉತ್ಪನ್ನಗಳಿಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಶ್ರಮಿಸಬೇಕು’ ಎಂದರು.

‘ಭಕ್ತಿ ಚಳವಳಿಯಿಂದಾಗಿ ನಮ್ಮಲ್ಲಿ ಒಗ್ಗಟ್ಟು ಸಾಧ್ಯವಾಯಿತು. ಕಲಿಕೆಗಾಗಿ ನಡೆದ ಚಳವಳಿಗಳಿಂದ ಬೌದ್ಧಿಕ ಶಕ್ತಿ–ಸಾಮರ್ಥ್ಯ ವೃದ್ಧಿಯಾದರೆ, ನಮ್ಮ ಹಕ್ಕುಗಳಿಗಾಗಿ ಹೋರಾಡಲು ಛತ್ರಪತಿ ಶಿವಾಜಿ, ಮಹಾರಾಣಾ ಪ್ರತಾಪ್‌ ಸಿಂಹ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರು ಸ್ಫೂರ್ತಿಯಾದರು’ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ನನ್ನನ್ನುಆಹ್ವಾನಿಸಿಲ್ಲ:ಮಮತಾ ಬ್ಯಾನರ್ಜಿ
ಕೋಲ್ಕತ್ತ:
ವಿಶ್ವಭಾರತಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ನನ್ನನ್ನು ಅದರ ಅಧಿಕಾರಿಗಳು ಆಹ್ವಾನಿಸಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಈ ಕೇಂದ್ರೀಯ ವಿಶ್ವವಿದ್ಯಾಲಯದ ಉನ್ನತ ಸ್ಥಾನದಲ್ಲಿ ಇರುವವರು ಟ್ಯಾಗೋರ್‌ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಯಾವುದೇ ಪಾತ್ರವಹಿಸಿಲ್ಲ. ಹೀಗಿದ್ದರೂ, ಶತಮಾನೋತ್ಸವ ಪೂರೈಸಿದ ಸಂಸ್ಥೆಯು ನಮ್ಮಲ್ಲಿ ಹೆಮ್ಮೆ ಉಂಟುಮಾಡುತ್ತದೆ ಎಂದು ನಾನು ಟ್ವಿಟರ್‌ ಮೂಲಕ ಶುಭಹಾರೈಸಿದ್ದೇನೆ’ ಎಂದರು.

ಮಮತಾ ಆರೋಪಕ್ಕೆ ಪ್ರತಿಯಾಗಿ, ‘ಆಹ್ವಾನ ನೀಡಿದ್ದರೂ ಕಾರ್ಯಕ್ರಮಕ್ಕೆ ಹಾಜರಾಗದೇ ಇದ್ದ ಮಮತಾ ಬ್ಯಾನರ್ಜಿ ಅವರು ಇಲ್ಲಿಯೂ ಕೀಳು ರಾಜಕೀಯ ಮಾಡುತ್ತಿದ್ದಾರೆ. ಟ್ಯಾಗೋರ್‌ ಅವರ ಪರಂಪರೆಯನ್ನು ನಿಂದಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕವು ಆರೋಪಿಸಿದೆ.

ಭಾಷಣದಲ್ಲಿ ಹಲವು ತಪ್ಪು: ‘ಕಾರ್ಯಕ್ರಮದಲ್ಲಿ ಮೋದಿ ಅವರು ಭಾಷಣದಲ್ಲಿ ಹಲವು ತಪ್ಪುಗಳನ್ನು ಮಾಡಿದ್ದಾರೆ. ಮಾತು ಮಾತಿಗೂ ಗುಜರಾತ್‌ನ ಗುಣಗಾನ ಮಾಡುತ್ತಿದ್ದ ಅವರು, ಸತ್ಯೆನ್‌ ಅವರು ಟ್ಯಾಗೋರ್‌ ಅವರ ಪತ್ನಿ ಎಂದೂ (ಸತ್ಯೆನ್‌ ಅವರು ಟ್ಯಾಗೋರರಿಗೆ ನಾದಿನಿ ಆಗಬೇಕು) ಉಲ್ಲೇಖಿಸಿದ್ದರು’ ಎಂದು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ನಾಯಕ ಬ್ರಾತ್ಯಾ ಬಸು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT