ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಣಸಿಯಲ್ಲಿ ₹2,095 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

Last Updated 23 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಲಖನೌ: ‘ಗೋವು ಹಲವರಿಗೆ ತಾಯಿ ಮತ್ತು ಪವಿತ್ರ. ಯಾರು ಇದರಲ್ಲಿ ಅಪರಾಧವನ್ನು ಹುಡುಕುತ್ತಾರೊ ಅವರಿಗೆ, ಕೋಟ್ಯಂತರ ಜನರ ಜೀವನೋಪಾಯ ಜಾನುವಾರುಗಳನ್ನು ಅವಲಂಬಿಸಿದೆ ಎಂಬುದು ಅರಿವಾಗಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದರು.

ತಮ್ಮ ಲೋಕಸಭೆ ಕ್ಷೇತ್ರ ವಾರಾಣಸಿಯ ಕಾರ್ಕಿಯಾಂವ್‌ನಲ್ಲಿ₹475 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ‘ಬನಾಸ್‌ ಡೇರಿ ಸಂಕುಲ್‌’ ಹಾಲಿನ ಘಟಕದ ಶಿಲಾನ್ಯಾಸ ನೆರವೇರಿಸಿದರು. ಇದರ ಜತೆಗೆ, ಸುಮಾರು ₹2,095 ಕೋಟಿ ಮೊತ್ತದ 27 ಯೋಜನೆಗಳಿಗೆ ಅವರು ಚಾಲನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.

‘ಹಿಂದೂ ಧರ್ಮದ ಪ್ರಾಚೀನ ಗ್ರಂಥಗಳನ್ನು ಉಲ್ಲೇಖಿಸಿದ ಅವರು, ಜನರು ತಮ್ಮ ಸುತ್ತಲೂ ಗೋವುಗಳು ಇರಬೇಕು ಎಂದು ಬಯಸುತ್ತಿದ್ದರು. ಇದು ಗೋವುಗಳಿಗೆ ನೀಡುವ ಮಹತ್ವವಾಗಿತ್ತು’ ಎಂದರು.

ಹಾಲು ಉತ್ಪಾದನೆ ಕುರಿತು ಮಾತನಾಡಿದ ಅವರು, ಭಾರತ ₹8.5 ಲಕ್ಷ ಕೋಟಿ ಮೌಲ್ಯದ ಹಾಲು ಉತ್ಪಾದನೆ ಮಾಡಿದೆ. ಎಂಟು ಕೋಟಿಗೂ ಹೆಚ್ಚು ಕುಟುಂಬಗಳ ಜೀವನ ಪಶುಸಂಗೋಪನೆ ಮೇಲೆ ಆಧಾರಿತವಾಗಿದೆ ಎಂದರು.

ಪ್ರತಿಸ್ಪರ್ಧಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ರಾಜ್ಯದ ಅಭಿವೃದ್ಧಿಗೆನಮ್ಮ ಡಬಲ್‌ ಇಂಜಿನ್‌ ಸರ್ಕಾರ (ಕೇಂದ್ರ ಮತ್ತು ರಾಜ್ಯ) ತೆಗೆದುಕೊಳ್ಳುತ್ತಿರುವ ಕ್ರಮಗಳಿಂದ ಕೆಲ ಜನರಿಗೆ ಸಿಟ್ಟು ಬಂದಿದೆ. ರಾಜ್ಯದ ಪ್ರಗತಿಗೆ ನಾವು ಮತ್ತಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದನ್ನು ನೋಡಿ ಆ ಸಿಟ್ಟು ಮತ್ತಷ್ಟು ಹೆಚ್ಚಾಗಿದೆ’ ಎಂದರು.

ವಿಪಕ್ಷಗಳ ನಿಘಂಟಿನಲ್ಲಿ ಅಭಿವೃದ್ಧಿ ಎಂದರೆ ನೋಟು, ಮಾಫಿಯಾ ರಾಜ್ಯ, ಸ್ವಜನ ಪಕ್ಷಪಾತಕ್ಕೆ ಉತ್ತೇಜನ, ಮನೆಗಳು ಮತ್ತು ಭೂಮಿಯನ್ನು ಕಬಳಿಸುವುದು ಎಂದರ್ಥ. ಆದರೆ, ನಮ್ಮ ಆದ್ಯತೆ ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ (ಎಲ್ಲರ ಜೊತೆ, ಎಲ್ಲರ ವಿಕಾಸ) ಎಂದರು.

ತಮ್ಮ ಎದುರಾಳಿಗಳಿಗೆ ಕಾಶಿ ವಿಶ್ವನಾಥ ದೇವಾಲಯ ವೈಭವ ಹೆಚ್ಚಿಸುವುದು ಇಷ್ಟವಿಲ್ಲ ಎಂದರು.

*
ಬಿಜೆಪಿ, ಎಸ್‌ಪಿ ಮತ್ತಿತರ ಪಕ್ಷಗಳು ಚುನಾವಣೆಗೆ ಕೋಮು ಬಣ್ಣ ಬಳಿಯುತ್ತಿವೆ. ಬಿಎಸ್‌ಪಿಯು ಪ್ರತಿ ಹಳ್ಳಿ, ಮನೆಗೆ ತೆರಳಿ ಈ ಕುರಿತು ಜನರನ್ನು ಎಚ್ಚರಿಸಲಿದೆ.
-ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

*

ಹಿಂದಿನ ಸರ್ಕಾರಗಳ ರೈತ ವಿರೋಧಿ ನೀತಿಗಳು ಮತ್ತು ಅವೈಜ್ಞಾನಿಕ ಕ್ರಮಗಳು ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದವು. ಹಲವರು ಕೃಷಿಯಿಂದ ದೂರ ಸರಿದರು.
-ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT