ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ಚುನಾವಣೆ: ಪಾಲಿಕೆ ನೌಕರರ ಬೈಕ್‌ನಲ್ಲಿ ಇವಿಎಂ, ವಿವಿಪ್ಯಾಟ್‌ ಪತ್ತೆ

Last Updated 7 ಏಪ್ರಿಲ್ 2021, 7:12 IST
ಅಕ್ಷರ ಗಾತ್ರ

ಚೆನ್ನೈ: ಪಾಲಿಕೆ ನೌಕರರ ದ್ವಿಚಕ್ರ ವಾಹನದಲ್ಲಿ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ), ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್ ಪತ್ತೆಯಾಗಿ ಗೊಂದಲ ಸೃಷ್ಟಿಯಾದ ವಿದ್ಯಮಾನ ತಮಿಳುನಾಡಿನ ವಲಚೇರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ.

ತಮಿಳುನಾಡು ವಿಧಾನಸಭೆಗೆ ಮಂಗಳವಾರ ಚುನಾವಣೆ ನಡೆದಿತ್ತು. ಮತದಾನ ಮುಕ್ತಾಯವಾದ ಬಳಿಕ ಪಾಲಿಕೆ ನೌಕರರು ಇವಿಎಂ, ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್‌ಗಳನ್ನು ಅನಧಿಕೃತವಾಗಿ ದ್ವಿಚಕ್ರವಾಹನದಲ್ಲಿ ಮತ ಎಣಿಕೆ ಕೇಂದ್ರಕ್ಕೆ ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ.

ಮತಗಟ್ಟೆಯಿಂದ ತೆರಳುತ್ತಿದ್ದ ನೌಕರರಿಗೆ ಇನ್ನಿಬ್ಬರು ನೌಕರರು ಮತ್ತೊಂದು ದ್ವಿಚಕ್ರ ವಾಹನದಲ್ಲಿ ಸಾಥ್ ನೀಡಿದ್ದರು. ತಾರಾಮಣಿ ಲಿಂಕ್ ರಸ್ತೆ ಬಳಿ ಬಂದಾಗ ದ್ವಿಚಕ್ರ ವಾಹನ ಸ್ಕಿಡ್ ಆಗಿದೆ. ಈ ವೇಳೆ ನೌಕರರು ರಸ್ತೆಗೆ ಬಿದ್ದಿದ್ದಾರೆ. ಅವರ ಬಳಿ ಮತ ಯಂತ್ರಗಳು ಇರುವುದು ಸಾರ್ವಜನಿಕರಿಗೆ ಗೊತ್ತಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಡಿಎಂಕೆ ಕಾರ್ಯಕರ್ತರು ನೌಕರರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ತಡೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಮತಗಟ್ಟೆ ಅಧಿಕಾರಿ ನೌಕರರ ವಿಚಾರಣೆ ನಡೆಸಿದ್ದಾರೆ. ಬಳಿಕ ಹೆಚ್ಚಿನ ತನಿಖೆಗಾಗಿ ಅವರನ್ನು ವಲಚೇರಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ಇದಾದ ಬಳಿಕ ಡಿಎಂಕೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದಾರೆ. ನೌಕರರ ಬಳಿ ದೊರೆತ ಮತಯಂತ್ರಗಳು ಕಾದಿರಿಸಿದ ಇವಿಎಂಗಳಾಗಿದ್ದವು. ಚುನಾವಣೆ ಉದ್ದೇಶಕ್ಕೆ ಬಳಸಿರಲಿಲ್ಲ ಎಂದು ಅವರಿಗೆ ಸ್ಪಷ್ಟನೆ ನೀಡಲಾಯಿತು.

ಕಠಿಣ ಕ್ರಮ ಕೈಗೊಳ್ಳುತ್ತೇವೆ: ಮುಖ್ಯ ಚುನಾವಣಾಧಿಕಾರಿ

‘ಪ್ರಾಥಮಿಕ ತನಿಖೆಯಲ್ಲಿ ದೊರೆತ ಮಾಹಿತಿ ಪ್ರಕಾರ ಇಬ್ಬರು ನೌಕರರಿಂದ ಪ್ರಮಾದವಾಗಿರುವುದು ತಿಳಿದುಬಂದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ. ಈ ಕುರಿತು ವಿಸ್ತೃತ ವಿಚಾರಣೆ ನಡೆಯುತ್ತಿದೆ. ನೌಕರರ ಬಳಿ ಪತ್ತೆಯಾದ ಎರಡು ಮತಯಂತ್ರಗಳನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸಿರಲಿಲ್ಲ. ಮತಯಂತ್ರಗಳ ಪ್ರಮಾಣಿತ ಕಾರ್ಯಾಚರಣೆ (ಎಸ್‌ಒಪಿ) ವಿಧಾನ ಉಲ್ಲಂಘಿಸಿದ್ದಕ್ಕಾಗಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸತ್ಯಭಾರತ ಸಾಹೂ ಹೇಳಿದ್ದಾರೆ.

ಆರಂಭದಲ್ಲಿ ಮತಗಟ್ಟೆ ವಶಪಡಿಸಿಕೊಳ್ಳಲಾಗಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಇಬ್ಬರು ನೌಕರರಿಂದ ಪ್ರಮಾದವಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ಮೊದಲಲ್ಲ

ಕಾದಿರಿಸಿದ ವಿದ್ಯುನ್ಮಾನ ಇವಿಎಂಗಳ ಜತೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಉತ್ತರ ಉಲುಬೆಡಿಯಾ ವಿಧಾನಸಭೆ ಕ್ಷೇತ್ರದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನ ಮನೆಯಲ್ಲಿ ತಂಗಿದ್ದ ಅಧಿಕಾರಿ ತಪನ್ ಸರ್ಕಾರ್ ಎಂಬವರನ್ನು ಚುನಾವಣಾ ಆಯೋಗ ಮಂಗಳವಾರ ಅಮಾನತು ಮಾಡಿತ್ತು. ಅಸ್ಸಾಂನ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂಗಳಿದ್ದ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ ಮುಕ್ತಾಯವಾದ ಕೆಲವೇ ಗಂಟೆಗಳಲ್ಲಿ ಕಾರು ಪತ್ತೆಯಾಗಿದೆ ಎನ್ನಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT