ಶನಿವಾರ, ಅಕ್ಟೋಬರ್ 23, 2021
20 °C

ಅಮ್ಮನ ಬಳಿಗೆ ಒಯ್ಯಿರಿ, ಭಾರತೀಯ ಸೇನೆಯ ಒಳ್ಳೆಯತನ ತಿಳಿಸಬೇಕು: ಪಾಕ್ ಉಗ್ರ

ಪಿಟಿಐ Updated:

ಅಕ್ಷರ ಗಾತ್ರ : | |

ಪಾಕಿಸ್ತಾನದ ಉಗ್ರ ಅಲಿ ಬಾಬರ್ ಪಾತ್ರಾ

ಶ್ರೀನಗರ: 'ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ತದ ಹೊಳೆಯನ್ನೇ ಹರಿಸುತ್ತಿದೆ ಎಂದು ನಮಗೆ ತಿಳಿಸಲಾಗಿತ್ತು. ಆದರೆ, ಇಲ್ಲಿ ಎಲ್ಲವೂ ಶಾಂತಿಯುತವಾಗಿದೆ. ಭಾರತೀಯ ಸೇನೆಯು ನನ್ನನ್ನು ಚೆನ್ನಾಗಿ ನೋಡಿಕೊಂಡಿರುವುದಾಗಿ ನಾನು ನನ್ನ ತಾಯಿಗೆ ಹೇಳಬೇಕು...' -ಇದು ಪಾಕಿಸ್ತಾನದಿಂದ ನುಸುಳಿ ಭಾರತದೊಳಗೆ ಅಡಗಿದ್ದ ಉಗ್ರನೊಬ್ಬನ ಮಾತು.

ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಹದಿಹರೆಯದ ಉಗ್ರನೊಬ್ಬನನ್ನು ಸೆರೆ ಹಿಡಿಯಲಾಗಿತ್ತು. ಸೆಪ್ಟೆಂಬರ್‌ 18ರಿಂದ ಸೆಪ್ಟೆಂಬರ್‌ 26ರ ವರೆಗೂ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸೇನೆಯು ಒಬ್ಬ ಉಗ್ರನನ್ನು ಹೊಡೆದುರುಳಿಸಿದರೆ, ಮತ್ತೊಬ್ಬ ಉಗ್ರ ಜೀವ ಉಳಿಸುವಂತೆ ಬೇಡಿಕೊಂಡಿದ್ದ. ಸೇನೆಯ ವಶದಲ್ಲಿರುವ ಹರಿಹರೆಯದ ಉಗ್ರನ ಹೆಸರು ಅಲಿ ಬಾಬರ್ ಪಾತ್ರಾ (19).

ಏಳು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ಅಲಿ ಬಾಬರ್ ಪಾತ್ರಾ, ಹಣಕಾಸು ತೊಡಕಿನಿಂದಾಗಿ ಶಾಲೆಯನ್ನು ತೊರೆದ. ಪಾಕಿಸ್ತಾನದ ಸಿಯಾಲ್‌ಕೋಟ್‌ನ ಗಾರ್ಮೆಂಟ್‌ ಫ್ಯಾಕ್ಟರಿವೊಂದರಲ್ಲಿ ಕೆಲಸಕ್ಕೆ ಸೇರಿದ್ದ ಆತನಿಗೆ ಅನ್ನಾಸ್‌ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಆತ ಲಷ್ಕರ್‌ ಎ ತೈಬಾ ಉಗ್ರ ಸಂಘಟನೆಗಾಗಿ ಜನರನ್ನು ನೇಮಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ. 'ಪರಿಸ್ಥಿತಿಯ ಕಾರಣದಿಂದಾಗಿ ನಾನು ಆತನ ಬಳಿಗೆ ಹೋದೆ' ಎಂದು ಹೇಳಿಕೊಂಡಿರುವ ಪಾತ್ರಾ, ಆತ ತನಗೆ ₹20,000ಕೊಟ್ಟಿದ್ದ ಹಾಗೂ ಇನ್ನೂ ₹30,000 ಕೊಡುವುದಾಗಿ ಭರವಸೆ ನೀಡಿದ್ದ ಎಂದು ವಿವರಿಸಿದ್ದಾನೆ.

ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ ಜೊತೆಗೆ ಖೈಬರ್‌ ದೆಲಿಹಾಬಿಬುಲ್ಲಾ ಕ್ಯಾಂಪ್‌ನಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿರುವ ಕುರಿತು ಪಾತ್ರಾ ಮಾಹಿತಿ ನೀಡಿದ್ದಾನೆ. ಕಾಶ್ಮೀರದ ಪರಿಸ್ಥಿತಿಯ ಕುರಿತು ಪಾಕಿಸ್ತಾನ ಸೇನೆ, ಐಎಸ್ಐ ಹಾಗೂ ಎಲ್‌ಇಟಿ ಸುಳ್ಳು ಪ್ರಚಾರವನ್ನು ಮಾಡುತ್ತಿದೆ. ನಮ್ಮ ಅಸಹಾಯಕ ಪರಿಸ್ಥಿತಿಯ ಲಾಭ ಪಡೆದುಕೊಂಡು ಇಲ್ಲಿಗೆ ಕಳುಹಿಸುತ್ತಿದ್ದಾರೆ ಎಂದಿದ್ದಾನೆ.

ಇದನ್ನೂ ಓದಿಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಒಬ್ಬ ಉಗ್ರನ ಹತ್ಯೆ, ಮತ್ತೊಬ್ಬ ಶರಣು

'ನನ್ನನ್ನು ಇಲ್ಲಿಗೆ (ಭಾರತ) ಕರೆತಂದಂತೆಯೇ ವಾಪಸ್‌ ನನ್ನ ತಾಯಿಯ ಬಳಿಗೆ ಕರೆದುಕೊಂಡು ಹೋಗಿ' ಎಂದು ಅಲಿ ಬಾಬರ್‌ ಲಷ್ಕರ್‌ ಎ ತೈಬಾದ (ಎಲ್‌ಇಟಿ) ಏರಿಯಾ ಕಮಾಂಡರ್‌, ಐಎಸ್‌ಐ ಹಾಗೂ ಪಾಕಿಸ್ತಾನ ಸೇನೆಯನ್ನು ಒತ್ತಾಯಿಸಿದ್ದಾನೆ. ಅದರ ವಿಡಿಯೊ ಸಂದೇಶವನ್ನು ಭಾರತೀಯ ಸೇನೆ ಬುಧವಾರ ಬಿಡುಗಡೆ ಮಾಡಿದೆ.

ಕ್ಯಾಂಪ್‌ಗೆ ಭೇಟಿ ನೀಡುವ ಸ್ಥಳೀಯರೊಂದಿಗೆ ಭಾರತೀಯ ಸೇನೆಯ ಯೋಧರು ಮತ್ತು ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ದಿನದಲ್ಲಿ ಐದು ಬಾರಿ ಧ್ವನಿವರ್ಧಕಗಳ ಮೂಲಕ ಆಜಾನ್‌ (ಪ್ರಾರ್ಥನೆ) ಕೇಳುತ್ತಿದ್ದೆ. ಭಾರತೀಯ ಸೇನೆಯ ನಡವಳಿಕೆಯು ಪಾಕಿಸ್ತಾನ ಸೇನೆಗಿಂತ ಭಿನ್ನವಾಗಿದೆ. ಇದರಿಂದಾಗಿ ಕಾಶ್ಮೀರದಲ್ಲಿ ಶಾಂತಿ ಇರುವುದಾಗಿ ನನಗೆ ಅನಿಸಿದೆ ಎಂದು ಪಾತ್ರ ಹೇಳಿದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು