ಹೈದರಾಬಾದ್: ‘ಅಭಿವೃದ್ಧಿಯಲ್ಲಿ ಭಾರತದ ಇತರ ರಾಜ್ಯಗಳು ತೆಲಂಗಾಣ ಮಾದರಿ ಅನುಸರಿಸುವಂತಾಗಿದೆ’ ಎಂದು ತೆಲಂಗಾಣ ಕೈಗಾರಿಕಾ ಸಚಿವ ಹಾಗೂ ಟಿಆರ್‌ಎಸ್ ಮುಖಂಡಕೆ.ಟಿ. ರಾಮರಾವ್ ಹೇಳಿದ್ದಾರೆ.
ಭಾನುವಾರ ನಡೆದ ‘ಹಾರ್ವರ್ಡ್ ಇಂಡಿಯಾ ಸಮಾವೇಶ 2022’ ಉದ್ದೇಶಿಸಿ ಮಾತನಾಡಿದ ಅವರು ‘ಸ್ಟಾರ್ಟ್‌ಪ್ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಕಾರ್ಯಗತಗೊಳಿಸಿದ ರಾಜ್ಯ ತೆಲಂಗಾಣ’ ಎಂದು ತಿಳಿಸಿದ್ದಾರೆ.
‘ಹೈದರಾಬಾದ್‌ನ ಮಾಹಿತಿ ತಂತ್ರಜ್ಞಾನ ವಲಯ, ಕೈಗಾರಿಕಾ ಸ್ನೇಹಿ ನೀತಿ ನಿಯಮಗಳು ಹಾಗೂ ಹೂಡಿಕೆ ಸ್ನೇಹಿ ತಾಣ ತೆಲಂಗಾಣ ರಾಜ್ಯವನ್ನು ಒಂದು ಮಾದರಿ ರಾಜ್ಯವನ್ನಾಗಿ ರೂಪಿಸಿವೆ’ ಎಂದು ಬಣ್ಣಿಸಿದ್ದಾರೆ.
‘2030 ರ ವೇಳೆಗೆ ಭಾರತ ಜಗತ್ತನ್ನು ಮುನ್ನಡೆಸುತ್ತದೆ. ‘ಟರ್ಬೊಚಾರ್ಜಿಂಗ್ ಇಂಡಿಯಾ 2030’ ಕಲ್ಪನೆಯನ್ನು ‘ಟರ್ಬೊಚಾರ್ಜಿಂಗ್ ತೆಲಂಗಾಣ’ ಎಂಬ ಹೆಸರಿನಲ್ಲಿ 2014 ರಿಂದಲೇ ತೆಲಂಗಾಣದಲ್ಲಿ ಸಾಕಾರಗೊಳಿಸಿಕೊಂಡು ಬರಲಾಗಿದೆ’ ಎಂದು ರಾಮರಾವ್ ಮಾಹಿತಿ ನೀಡಿದ್ದಾರೆ.
‘ಇನ್ನೇನು ಕೆಲವೇದಿನಗಳಲ್ಲಿ ತೆಲಂಗಾಣ ಮಾದರಿ ಎಂಬುದು ಇಡೀ ದೇಶದಲ್ಲಿ ಕೇಳಿ ಬರಲಿದ್ದು, ಕಳೆದ ಏಳು ವರ್ಷಗಳಲ್ಲಿ ಯಾರೂ ನಿರೀಕ್ಷಿಸದ ಸಾಧನೆಯನ್ನು ಮಾಡಿ ತೋರಿಸಿದ್ದೇವೆ. ಹೊಸ ಕೈಗಾರಿಕಾ ನೀತಿ ಘೋಷಣೆಯಾದ ನಂತರ ಬರೋಬ್ಬರಿ 2.5 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದ್ದು, ಹೊಸದಾಗಿ 16 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ’ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.