ಸೋಮವಾರ, ಆಗಸ್ಟ್ 15, 2022
27 °C

ಕೇರಳದ ಸಿಪಿಐ(ಎಂ) ಪ್ರಧಾನ ಕಚೇರಿ ಮೇಲೆ ಸ್ಫೋಟಕ ಎಸೆತ: ಉದ್ವಿಗ್ನ ಪರಿಸ್ಥಿತಿ

ಪಿಟಿಐ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಇಲ್ಲಿನ ಸಿಪಿಐ(ಎಂ) ಪ್ರಧಾನ ಕಚೇರಿ ಮೇಲೆ ಗುರುವಾರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಸ್ಫೋಟಕ ಎಸೆದಿದ್ದು, ಕೇರಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ರಾತ್ರಿ 11.30ರ ಸುಮಾರಿಗೆ ಬೈಕಿನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ನಗರದ ಹೃದಯಭಾಗದಲ್ಲಿರುವ ಎಕೆಜಿ ಸೆಂಟರ್ ಮೇಲೆ ಸ್ಫೋಟಕ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಸಿಪಿಐ(ಎಂ) ಮುಖಂಡರು ಇದೊಂದು ಬಾಂಬ್ ದಾಳಿ ಎಂದು ಆರೋಪಿಸಿದ್ದಾರೆ. ಎಕೆಜಿ ಸೆಂಟರ್‌ನಲ್ಲಿ ತಂಗಿದ್ದ ಕೆಲ ಸಿಪಿಐ(ಎಂ) ಮುಖಂಡರು ಕಟ್ಟಡದ ಹೊರಗೆ ಭಾರೀ ಸ್ಫೋಟದ ಶಬ್ಧ ಕೇಳಿದ್ದಾಗಿ ಹೇಳಿದ್ದಾರೆ.

ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಘಟನಾ ಸ್ಥಳ ಮತ್ತು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಸಹ ತಪಾಸಣೆ ನಡೆಸಿದೆ.

ಎಕೆಜಿ ಸೆಂಟರ್‌ನ ಅಧಿಕೃತ ಮಾಧ್ಯಮ ಗುಂಪಿನ ಮೂಲಕ ಸಿಪಿಐ(ಎಂ) ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಗಳಲ್ಲಿ, ವ್ಯಕ್ತಿಯೊಬ್ಬ ಮೋಟಾರ್ ಬೈಕ್‌ನಲ್ಲಿ ಸ್ಥಳಕ್ಕೆ ಆಗಮಿಸಿ ಕಟ್ಟಡದ ಮೇಲೆ ಸ್ಫೋಟಕ ಎಸೆದು ಸ್ಥಳದಿಂದ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಸ್ಫೋಟಕ ಎಕೆಜಿ ಕೇಂದ್ರದ ಕಲ್ಲಿನ ಗೋಡೆಗೆ ತಗುಲಿದೆ ಎನ್ನಲಾಗಿದೆ.

ಈ ಪ್ರಚೋದನಕಾರಿ ಕೃತ್ಯದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿರುವ ಸಿಪಿಐ(ಎಂ)ನ ಹಿರಿಯ ನಾಯಕ ಮತ್ತು ಎಲ್‌ಡಿಎಫ್ ಸಂಚಾಲಕ ಇ ಪಿ ಜಯರಾಜನ್, ಸಿಪಿಐ(ಎಂ) ಕಾರ್ಯಕರ್ತರು ಶಾಂತವಾಗಿರುವಂತೆ ಮನವಿ ಮಾಡಿದ್ದಾರೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದೆ.

ಇದೇ ವೇಳೆ, ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್, ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಸೇರಿದಂತೆ ಕೇರಳದ ಹಲವು ಸಚಿವರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಸಿಪಿಐ(ಎಂ)ನ ಹಲವು ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪತ್ತನಂತಿಟ್ಟ ಮತ್ತು ರಾಜ್ಯದ ಇತರ ಸ್ಥಳಗಳಲ್ಲಿಯೂ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಉದ್ವಿಗ್ನ ಪರಿಸ್ಥಿತಿ ನೆಲೆಸಿರುವ ಕಾರಣ, ರಾಜ್ಯದ ಕಾಂಗ್ರೆಸ್ ಕಚೇರಿಗಳ ಸುತ್ತಲೂ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಶಾಂತಿಯುತ ಪ್ರತಿಭಟನೆಗೆ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಕರೆ ನೀಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಉದ್ದೇಶಪೂರ್ವಕವಾಗಿ ಪ್ರಚೋದನೆಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಬಾಲಕೃಷ್ಣನ್, ಅವರ ಬಲೆಗೆ ಬೀಳದಂತೆ ಪಕ್ಷದ ಕಾರ್ಯಕರ್ತರನ್ನು ಒತ್ತಾಯಿಸಿದರು.

ದಾಳಿ ನಡೆಸಿದ ಆರೋಪಿಯನ್ನು ಪತ್ತೆ ಮಾಡಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ತಮ್ಮ ಕ್ಷೇತ್ರ ವಯನಾಡ್‌ಗೆ ಭೇಟಿ ನೀಡುತ್ತಿದ್ದು, ಈ ಮಧ್ಯೆಯೇ ಅಹಿತಕರ ಘಟನೆ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು