ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ಮಾನವಕುಲಕ್ಕೆ ದೊಡ್ಡ ಬೆದರಿಕೆ –ಜೈಶಂಕರ್

Last Updated 23 ಫೆಬ್ರುವರಿ 2021, 12:37 IST
ಅಕ್ಷರ ಗಾತ್ರ

ಜಿನಿವಾ: ‘ಭಯೋತ್ಪಾದನೆಯು ಮಾನವಕುಲಕ್ಕೇ ಅತಿದೊಡ್ಡದಾದ ಬೆದರಿಕೆ’ ಎಂದು ಬಣ್ಣಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್, ‘ಮಾನವಹಕ್ಕುಗಳ ರಕ್ಷಣೆ ಕುರಿತು ವ್ಯವಹರಿಸುತ್ತಿರುವ ಸಂಘ ಸಂಸ್ಥೆಗಳು ಭಯೋತ್ಪಾದನೆ ಎಂದಿಗೂ ಸಮರ್ಥನೀಯವಲ್ಲ ಎಂದು ಅರ್ಥ ಮಾಡಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

ಮಾನವ ಹಕ್ಕುಗಳ ಮಂಡಳಿಯ 46ನೇ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ‘ಭಯೋತ್ಪಾದನೆ ಎಂಬುದು ಮನುಕುಲದ ಮೇಲಿನ ಅಪರಾಧ. ಮೂಲಭೂತವಾಗಿಇದು ಮನುಷ್ಯನ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಿದೆ’ ಎಂದರು.

ಭಯೋತ್ಪಾದನೆ ಪರಿಣಾಮಕ್ಕೆ ತುತ್ತಾಗಿರುವ ಭಾರತ, ಇದರ ವಿರುದ್ಧ ಜಾಗತಿಕವಾಗಿ ಕ್ರಮಕೈಗೊಳ್ಳುವಲ್ಲಿ ಎಂದಿಗೂ ಮುಂಚೂಣಿಯಲ್ಲಿ ಇರುತ್ತದೆ. ಮಾನವಹಕ್ಕುಗಳ ರಕ್ಷಣೆ ಕುರಿತಂತೆ ಹೋರಾಡುತ್ತಿರುವ ಸಂಸ್ಥೆಗಳು ಒಳಗೊಂಡು ಎಲ್ಲರೂ ಭಯೋತ್ಪಾದನೆ ಪರಿಣಾಮವನ್ನು ಸ್ಪಷ್ಟವಾಗಿ ಅರಿತುಕೊಂಡಾಗ ಮಾತ್ರವೇ ಇದು ಸಾಧ್ಯವಾಗಲಿದೆ ಎಂದು ಹೇಳಿದರು.

ಭಯೋತ್ಪಾದನೆಯ ನಿಗ್ರಹ ಕುರಿತಂತೆ ಭಾರತವು ಕಳೆದ ತಿಂಗಳು ವಿಶ್ವಸಂಸ್ಥೆಯ ಎದುರು 8 ಅಂಶಗಳ ಕ್ರಿಯಾಯೋಜನೆಯನ್ನು ಪ್ರಸ್ತಾಪಿಸಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ಜೊತೆಗೂಡಿ ಕ್ರಿಯಾಯೋಜನೆ ಜಾರಿ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಭಾರತ ಒತ್ತು ನೀಡಲಿದೆ ಎಂದು ಹೇಳಿದರು.

ಸದ್ಯ ಕಾಡುತ್ತಿರುವ ಕೊರೊನಾ ಪರಿಸ್ಥಿತಿಯು ಜಗತ್ತಿನ ವಿವಿಧೆಡೆ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಈಗಿನ ಸವಾಲು ಎದುರಿಸಲು ಎಲ್ಲರೂ ಒಗ್ಗೂಡಬೇಕಾಗಿದೆ. ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕೆ ಪೂರಕವಾಗಿ ವಿವಿಧ ಸಂಸ್ಥೆಗಳು ಹಾಗೂ ವ್ಯವಸ್ಥೆಯು ಬದಲಾಗಬೇಕಾದುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕೋವಿಡ್‌–19 ಲಾಕ್‌ಡೌನ್ ಸಂದರ್ಭದಲ್ಲಿಯೂ ಮೂಲಭೂ‌ತ ಅಗತ್ಯಗಳಿಗೆ ಧಕ್ಕೆಯಾಗದಂತೆ ಭಾರತ ಕ್ರಮವಹಿಸಿದೆ. ಆರೋಗ್ಯ ಕ್ಷೇತ್ರದ ದೃಷ್ಟಿಯಿಂದ ಪರಿಸ್ಥಿತಿ ಎದುರಿಸಿದ್ದೇವೆ. ಹಾಗೇ ವಿಶ್ವದ ಅಗತ್ಯಕ್ಕೂ ಸ್ಪಂದಿಸಿದ್ದೇವೆ. 150ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭಾರತ ಔಷಧ ಮತ್ತು ಅಗತ್ಯ ಪರಿಕರಗಳನ್ನು ಒದಗಿಸಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT