ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆ 27ನೇ ದಿನ ಪೂರ್ಣ: ‘ಸ್ಪಷ್ಟ ಪರಿಹಾರ ಮುಂದಿಟ್ಟರೆ ಮಾತುಕತೆ’

ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳ ರದ್ದತಿಗೆ ಪಟ್ಟು
Last Updated 21 ಡಿಸೆಂಬರ್ 2020, 21:08 IST
ಅಕ್ಷರ ಗಾತ್ರ

ನವದೆಹಲಿ: ಮತ್ತೆ ಮಾತುಕತೆಗೆ ಪ್ರಸ್ತಾವ ಮಂಡಿಸಿರುವ ಸರ್ಕಾರದ ಪತ್ರದಲ್ಲಿ ಸ್ಪಷ್ಟತೆಯಿಲ್ಲ ಎಂದು ರೈತ ಮುಖಂಡರು ಸೋಮವಾರ ಹೇಳಿದ್ದಾರೆ. ಸ್ಪಷ್ಟವಾದ ಪರಿಹಾರಗಳನ್ನು ಸರ್ಕಾರವು ಮುಂದಿಟ್ಟರೆ ಮಾತುಕತೆಗೆ ಸದಾ ಸಿದ್ಧ ಎಂದಿದ್ದಾರೆ.

ದೆಹಲಿಯ ಸಿಂಘು ಗಡಿಯಲ್ಲಿ 27 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್, ಹರಿಯಾಣದ ರೈತರು ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಪಟ್ಟು ಹಿಡಿದಿದ್ದಾರೆ.ಕೃಷಿ ಕಾಯ್ದೆಗಳಿಗೆ ತಾರ್ಕಿಕವಾದ ಪರಿಹಾರವನ್ನು ಕೇಂದ್ರ ಸರ್ಕಾರ ಸೂಚಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.

‘ಕೇಂದ್ರ ಇತ್ತೀಚೆಗೆ ಕಳುಹಿಸಿರುವ ಪತ್ರದಲ್ಲಿ ಹೊಸತೇನೂ ಇಲ್ಲ. ಹೊಸ ಕೃಷಿ ಕಾನೂನುಗಳಿಗೆ ತಿದ್ದುಪಡಿ ಮಾಡುವ ಹಿಂದಿನ ಪ್ರಸ್ತಾವದ ಬಗ್ಗೆಯೇ ಮಾತುಕತೆ ನಡೆಸಲು ಸರ್ಕಾರ ಬಯಸಿದೆ’ ಎಂದುಭಾರತೀಯ ಕಿಸಾನ್ ಯೂನಿಯನ್‌ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

‘ತಿದ್ದುಪಡಿ ಬೇಡ, ಕಾಯ್ದೆಗಳನ್ನು ಸಂಪೂರ್ಣವಾಗಿ ವಾಪಸ್‌ ಪಡೆಯಬೇಕು ಎಂಬ ಉದ್ದೇಶದಿಂದ ಈ ಹಿಂದೆ ನಾವು ಅವರೊಂದಿಗೆ ಮಾತನಾಡಲಿಲ್ಲ. ಪ್ರಸ್ತುತ ಸರ್ಕಾರದ ಪತ್ರಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಚರ್ಚಿಸುತ್ತಿದ್ದೇವೆ’ ಎಂದು ಟಿಕಾಯತ್ ಹೇಳಿದ್ದಾರೆ.

ಡಿ.9ರಂದು ಆರನೇ ಸುತ್ತಿನ ಮಾತುಕತೆ ರದ್ದುಗೊಂಡಿತ್ತು. ಮರು ಮಾತುಕತೆ ಸಂಬಂಧ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್‌ವಾಲ್ ಅವರು ರೈತರ40 ಸಂಘಟನೆಗಳ ಮುಖಂಡರಿಗೆ ಪತ್ರ ಬರೆದಿದ್ದಾರೆ. ರೈತರ ಎಲ್ಲ ಬೇಡಿಕೆಗಳನ್ನು ಮುಕ್ತ ಮನಸ್ಸಿನಿಂದ ಚರ್ಚಿಸಲಾಗುವುದು ಎಂದು ಅವರು ಪತ್ರದಲ್ಲಿ ಭರವಸೆ ನೀಡಿದ್ದಾರೆ.

ಈಗ ಚಾಲ್ತಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆ ಮುಂದುವರಿಯುತ್ತದೆ ಎಂದು ರೈತರಿಗೆ ‘ಲಿಖಿತ ಭರವಸೆ’ ನೀಡುವುದು ಸೇರಿದಂತೆ ಕನಿಷ್ಠ ಏಳು ವಿಷಯಗಳ ಬಗ್ಗೆ ಅಗತ್ಯ ತಿದ್ದುಪಡಿಗಳನ್ನು ಮಾಡಲು ಡಿ.9ರಂದು ಕಳುಹಿಸಲಾದ ಕರಡು ಪ್ರಸ್ತಾವನೆಯಲ್ಲಿ ಸರ್ಕಾರ ಪ್ರಸ್ತಾಪಿಸಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸರ್ಕಾರದ ಪತ್ರಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ಮಂಗಳವಾರ ಸಭೆ ಸೇರಿ ನಿರ್ಧರಿಸಲಾಗುವುದು ಎಂದು ಕ್ರಾಂತಿಕಾರಿ ಕಿಸಾನ್ ಸಂಘಟನೆಯ ಗುರ್ಮೀತ್ ಸಿಂಗ್ ಹೇಳಿದ್ದಾರೆ.

ಹೋರಾಟಕ್ಕೆ ಸಾಮಾಜಿಕ ಜಾಲತಾಣ ಅಗತ್ಯ: ತಮ್ಮ ಪ್ರತಿಭಟನೆಗೆ ಸಾಮಾಜಿಕ ಜಾಲತಾಣ ಅತಿಅಗತ್ಯ ಎಂದು ಪ್ರತಿಭಟನಾನಿರತ ರೈತರು ಅಭಿಪ್ರಾಯಪಟ್ಟಿದ್ದಾರೆ. ರೈತರ ಪ್ರತಿಭಟನೆಗೆ ಸಂಬಂಧಿಸಿದ ಫೇಸ್‌ಬುಕ್ ಪುಟವನ್ನು (ಪೇಜ್) ಫೇಸ್‌ಬುಕ್ ಸಂಸ್ಥೆಯು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಮ್ಮ ನಿಜದನಿಯನ್ನು ನಮ್ಮದೇ ಭಾಷೆಯಲ್ಲಿ ಹೇಳಲು ಅದು ಸಹಕಾರಿಯಾಗಿತ್ತು’ ಎಂದು ರೈತರು ಹೇಳಿದ್ದಾರೆ.

‘ಕಿಸಾನ್ ಏಕತಾ ಮೋರ್ಚಾ’ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಪ್ರತಿಭಟನೆಯ ಪ್ರತಿಯೊಂದು ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ವಿರೋಧದ ಕಾರಣ ಸ್ಥಗಿತಗೊಳಿಸಿದ ಮೂರು ಗಂಟೆಗಳ ಒಳಗೆ ಖಾತೆಯನ್ನು ಮರುಚಾಲನೆಗೊಳಿಸಲಾಗಿತ್ತು. ಕಿಸಾನ್ ಮೋರ್ಚಾದ ಇನ್‌ಸ್ಟಾಗ್ರಾಂ ಪುಟ ಕೂಡಾ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ಕೇರಳದಲ್ಲಿ 23ಕ್ಕೆ ವಿಶೇಷ ಅಧಿವೇಶನ
(ತಿರುವನಂತಪುರ ವರದಿ): ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ಬಗ್ಗೆ ಚರ್ಚಿಸಲುಡಿಸೆಂಬರ್‌ 23 ರಂದು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲು ಸಿಪಿಐ(ಎಂ) ನೇತೃತ್ವದಎಲ್‌ಡಿಎಫ್ ಸರ್ಕಾರವು ಸೋಮವಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ವೇಳೆ ವಿಶೇಷ ಸಭೆ ಕರೆಯುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡುವ ಬಗ್ಗೆಯೂ ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಸಿಂಘು ಗಡಿಯಲ್ಲಿ ರೈತ ಆತ್ಮಹತ್ಯೆ ಯತ್ನ
ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ 65 ವರ್ಷದ ರೈತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದನಿರಂಜನ್ ಸಿಂಗ್ ಎಂಬುವರು ಪಂಜಾಬ್‌ನ ತರನ್ ತಾರನ್‌ನವರು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ರೋಹ್ಟಕ್‌ನ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ. ನಿರಂಜನ್ ಸಿಂಗ್ ಅವರು ಮರಣಪತ್ರ ಬರೆದಿದ್ದು, ಅದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಸಿಂಘು ಗಡಿಯಲ್ಲಿ ಸಿಖ್ ಬೋಧಕ ಸಂತ ರಾಮ್ ಸಿಂಗ್ ಅವರುಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು. ರೈತರ ನೋವು ನೋಡಲಾಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಪ್ರತಿಭಟನೆ ಮುಗಿಸಿ ಪಂಜಾಬ್‌ಗೆ ವಾಪಸಾಗಿದ್ದ 22 ವರ್ಷದ ರೈತರೊಬ್ಬರು ಭಟಿಂಡಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ಸೋಮವಾರ ಪ್ರಾರಂಭವಾದ ಛತ್ತೀಸಗಡ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ರೈತರ ಪ್ರತಿಭಟನೆ ವಿಚಾರ ಕೋಲಾಹಲ ಸೃಷ್ಟಿಸಿತು.

‘ಚಳಿ, ಸಾವು ಏನೇ ಇದ್ದರೂ ಹೋರಾಟ ಬಿಡೆವು’
ಏಷ್ಟೇ ಸಾವುಗಳು ಸಂಭವಿಸಿದರೂ, ಎಷ್ಟೇ ಶೀತದ ವಾತಾವರಣ ಇದ್ದರೂ ತಮ್ಮ ಹೋರಾಟದಿಂದ ಇಂಚು ಸಹ ಹಿಂದೆ ಸರಿಯುವುದಿಲ್ಲ ಎಂದು ರೈತರು ಹೇಳಿದ್ದಾರೆ. ದೆಹಲಿಯ ಸಿಂಘು ಗಡಿಯಲ್ಲಿ ರೈತರು ಬೀಡುಬಿಟ್ಟಿದ್ದಾರೆ.

ದೆಹಲಿಯಲ್ಲಿ ಕಳೆದೊಂದು ವಾರದಿಂದ ತಾಪಮಾನ ಭಾರಿ ಪ್ರಮಾಣದಲ್ಲಿ ಕುಸಿದಿದ್ದು 3 ಡಿಗ್ರಿ ಸೆಲ್ಸಿಯಸ್‌ ಇದ್ದರೂ, ರೈತರು ತಮ್ಮ ಹೋರಾಟ ಮುಂದುವರಿಸಿದ್ದಾರೆ. ಈವರೆಗೆ 30ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದರೂ ಹೋರಾಟಕ್ಕೆ ಹಿನ್ನಡೆಯಾಗಿಲ್ಲ.

‘ಇಂತಹ ಶೀತದ ವಾತಾವರಣದಲ್ಲಿ ಬೀದಿಯಲ್ಲಿ ವಾಸಿಸುವುದು ತುಂಬಾ ಕಷ್ಟ. ಆದರೆ ನಾವು ಇದರಿಂದ ಹೆದರಿಲ್ಲ’ ಎಂದು ಪಟಿಯಾಲದ ರೈತ ಬಲ್ಬೀರ್ ಸಿಂಗ್ ಹೇಳಿದ್ದಾರೆ.

*

ಮುಂದಿನ 10 ವರ್ಷಗಳಲ್ಲಿ ಕೃಷಿ ಯಾಂತ್ರೀಕರಣ ದ್ವಿಗುಣಗೊಳಿಸುವ ಗುರಿ ಸರ್ಕಾರದ್ದು. ರೈತರಿಗೆಸುಧಾರಿತ ಕೃಷಿ ಉಪಕರಣ ಒದಗಿಸಲು ಒತ್ತು ನೀಡಲಾಗಿದೆ.
-ನರೇಂದ್ರ ಸಿಂಗ್ ತೋಮರ್,ಕೃಷಿ ಸಚಿವ

*

ಸಂಸತ್ತಿನಲ್ಲಿ ಅಂಗೀಕರಿಸಿದ ಕಾನೂನುಗಳನ್ನು ಪ್ರತಿಭಟನೆಗೆ ಮಣಿದು ಕೇಂದ್ರ ಹಿಂಪಡೆದರೆ, ಸಂಸದೀಯ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯಕ್ಕೆ ಸಿಲುಕಲಿವೆ.
-ರಾಮದಾಸ್ ಅಠವಳೆ,ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT