ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿರುದ್ಧ ಮಿತ್ರ ಪಕ್ಷ ಜೆಡಿಯು ಅಸಮಾಧಾನ: ಬಿಹಾರದಲ್ಲಿ ಹೊಸ ಲೆಕ್ಕಾಚಾರ

Last Updated 28 ಡಿಸೆಂಬರ್ 2020, 2:04 IST
ಅಕ್ಷರ ಗಾತ್ರ

ಪಟ್ನಾ: ಅರುಣಾಚಲ ಪ್ರದೇಶದಲ್ಲಿ ಜೆಡಿಯುನ ಆರು ಶಾಸಕರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಯು ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿ ನಡೆದ ಘಟನೆಯು 'ಮೈತ್ರಿ ಧರ್ಮಕ್ಕೆ ವಿರುದ್ಧವಾಗಿದೆ' ಎಂದಿರುವ ಜೆಡಿಯು ನಾಯಕ ಕೆ.ಸಿ.ತ್ಯಾಗಿ, 'ಅರುಣಾಚಲ ಪ್ರದೇಶದಲ್ಲಿ ಜೆಡಿಯು ಶಾಸಕರನ್ನು ಸೆಳೆಯುವ ಅವಶ್ಯಕತೆ ಬಿಜೆಪಿಗೆ ಇರಲಿಲ್ಲ. ಬಿಜೆಪಿಯ ಈ ನಡೆಯು ಮೈತ್ರಿ ಧರ್ಮಕ್ಕೆ ವಿರುದ್ಧವಾಗಿದೆ. ಅಟಲ್‌ ಬಿಹಾರಿ ವಾಜಪೇಯಿ ಕಾಲದಲ್ಲಿನ ಮೈತ್ರಿ ರಾಜಕಾರಣವನ್ನು ಬಿಜೆಪಿ ಪಾಲಿಸಬೇಕಿದೆ' ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿಯ ಮೇಲೆ ಅರುಣಾಚಲ ಪ್ರದೇಶದಲ್ಲಿ ನಡೆದ ಬೆಳವಣಿಗೆಗಳು ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಕೆ.ಸಿ.ತ್ಯಾಗಿ ಸ್ಪಷ್ಟಪಡಿಸಿದ್ದಾರೆ.

ಅರುಣಾಚಲ ಪ್ರದೇಶದಲ್ಲಿನ 60 ವಿಧಾನಸಭಾ ಸ್ಥಾನಗಳ ಪೈಕಿ 15ರಲ್ಲಿ ಜೆಡಿಯು ಸ್ಪರ್ಧಿಸಿತ್ತು. ಚುನಾವಣೆಯಲ್ಲಿ 41 ಸ್ಥಾನಗಳನ್ನು ಗೆದ್ದ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದರೆ, ಏಳು ಸ್ಥಾನಗಳನ್ನು ಗೆದ್ದ ಜೆಡಿಯು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಶುಕ್ರವಾರ ದೋರ್ಜಿ ಖರ್ಮ, ಜಿಕ್ಕೆ ಟಾಕೊ, ಹಯೀಂಗ್‌ ಮಂಗ್ಫಿ, ಡೊಂಗ್ರು ಸಿಯಾಂಗ್ಜು, ತಲೇಮ್‌ ಟಬೊ ಹಾಗೂ ಕಂಗಾಂಗ್‌ ಟಕು ಅವರು ಜೆಡಿಯು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇದೇ ವೇಳೆ, ಜೆಡಿ(ಯು) ಜೊತೆಗಿನ ಮೈತ್ರಿಗೆ ಸಿದ್ಧವಿರುವುದಾಗಿ ಆರ್‌ಜೆಡಿ ತಿಳಿಸಿದೆ. ‘ಬಿಜೆಪಿಯು ಹಳೆಯ ದ್ವೇಷ ಸಾಧನೆಗಾಗಿ ಅರುಣಾಚಲದಲ್ಲಿ ಜೆಡಿಯು ಶಾಸಕರನ್ನು ತನ್ನತ್ತ ಸೆಳೆದುಕೊಂಡಿದೆ’ ಎಂದು ಆರೋಪಿಸಿರುವ ಆರ್‌ಜೆಡಿಯ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ ತಿವಾರಿ ಹೇಳಿದ್ದಾರೆ.

'ಅರುಣಾಚಲ ಪ್ರದೇಶದಲ್ಲಿ ಜೆಡಿಯುಗೆ ಆಗಿರುವ ಅವಮಾನಕ್ಕೆ ಪ್ರತಿಯಾಗಿ, ಆ ಪಕ್ಷವು ಬಿಜೆಪಿ ಜತೆಗಿನ ಮೈತ್ರಿಯನ್ನು ತೊರೆಯುವುದಾದರೆ ಹೊಸ ರಾಜಕೀಯ ಸಮೀಕರಣಕ್ಕೆ ಅವಕಾಶ ಇದೆ’ ಎಂಬ ಇಂಗಿತವನ್ನು ತಿವಾರಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT