ಶನಿವಾರ, ಮಾರ್ಚ್ 6, 2021
31 °C

ಚಿರತೆ ಸಂಖ್ಯೆಯಲ್ಲಿ ಜಿಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶದಲ್ಲಿ 2014–18ರ ಅವಧಿಯಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಶೇ 60ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯವು ಹೇಳಿದೆ. ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಚಿರತೆಗಳನ್ನು ಗುರುತಿಸಲಾಗಿದೆ. ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಪರಿಸರ ಸಚಿವಾಲಯವು ಈಚೆಗೆ ಬಿಡುಗಡೆ ಮಾಡಿರುವ ‘ಭಾರತದಲ್ಲಿ ಚಿರತೆಗಳ ಸ್ಥಿತಿಗತಿ-2018’ ವರದಿಯಲ್ಲಿ ಈ ಮಾಹಿತಿ ಇದೆ.

* ಕ್ಯಾಮೆರಾ ಟ್ರ್ಯಾಪಿಂಗ್ ವಿಧಾನ ಬಳಸಿ ಚಿರತೆಗಳ ಗುರುತು ಪತ್ತೆ. ಇದಕ್ಕಾಗಿ 26,838 ಜಾಗಗಳಲ್ಲಿ ಇಂತಹ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
* ಪ್ರತಿಯೊಂದು ಜಾಗದಲ್ಲೂ 25-35 ದಿನಗಳವರೆಗೆ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
* ಕ್ಯಾಮೆರಾ ಟ್ರ್ಯಾಪಿಂಗ್ ಮೂಲಕ ತೆಗೆಯಲಾದ 51,337 ಚಿತ್ರಗಳನ್ನು ಪರಸ್ಪರ ಹೋಲಿಕೆ ಮಾಡಿ, ಇಷ್ಟು ಚಿರತೆಗಳನ್ನು ಗುರುತಿಸಲಾಗಿದೆ.

ಮಾನವ-ಚಿರತೆ ಮುಖಾಮುಖಿ ಏರಿಕೆ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕರ್ನಾಟಕ, ಗೋವಾ, ಕೇರಳ ಮತ್ತು ತಮಿಳುನಾಡು ರಾಜ್ಯ ಬರುತ್ತವೆ. ಇಲ್ಲಿನ ಪಶ್ಚಿಮ ಘಟ್ಟಗಳು ಮತ್ತು ನೀಲಗಿರಿ ಪರ್ವತ ಪ್ರದೇಶಗಳಲ್ಲಿ ಇರುವ ಅರಣ್ಯಗಳಲ್ಲಿ ಚಿರತೆಗಳ ಸಂಖ್ಯೆ ಏರಿಕೆಯಾಗಿದೆ. ಈ ಪ್ರದೇಶದಲ್ಲಿ ಜನಸಂಖ್ಯೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

2014ರಲ್ಲಿನ ಅಧ್ಯಯನಕ್ಕೆ ಹೋಲಿಸಿದರೆ 2018ರ ಅವಧಿಯಲ್ಲಿ ಈ ಪ್ರದೇಶದಲ್ಲಿ ಮಾನವ-ಚಿರತೆ ಮುಖಾಮುಖಿಯ ಪ್ರಮಾಣ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಮಾನವನ ಚಟುವಟಿಕೆಗಳು ಏರಿಕೆ ಆಗಿರುವುದು ಇದಕ್ಕೆ ಕಾರಣ. ಕರ್ನಾಟಕದ ಕಾಫಿ ತೋಟಗಳಿಗೆ ಪ್ರತಿದಿನವೂ ಚಿರತೆಗಳು ಬರುತ್ತವೆ. ಈ ಮೊದಲು ಚಿರತೆಗಳು ಕಾಫಿ ತೋಟಗಳಿಗೆ ಬರುವ ಪ್ರಮಾಣ ಕಡಿಮೆ ಇತ್ತು. ಈಗ ಅದು ಏರಿಕೆಯಾಗಿದೆ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

ಮಧ್ಯಭಾರತದಲ್ಲಿ ಹೆಚ್ಚು
ದೇಶದಲ್ಲಿ ಹುಲಿ ಆವಾಸವಿರುವ 17 ರಾಜ್ಯಗಳಲ್ಲಿ ಇರುವ ಚಿರತೆಗಳಿಗೆ ಸಂಬಂಧಿಸಿದ ಮಾಹಿತಿ ಮಾತ್ರ ಈ ವರದಿಯಲ್ಲಿ ಇದೆ. ಉಳಿದ ರಾಜ್ಯಗಳಲ್ಲಿನ ಚಿರತೆಗಳ ಬಗ್ಗೆ ಇದರಲ್ಲಿ ಮಾಹಿತಿ ಇಲ್ಲ. ಈ 17 ರಾಜ್ಯಗಳನ್ನೇ ನಾಲ್ಕು ಪ್ರಾದೇಶಿಕ ಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಇವುಗಳಲ್ಲಿ ಮಧ್ಯ ಭಾರತ ಮತ್ತು ಪೂರ್ವಘಟ್ಟ ಪ್ರದೇಶಗಳಲ್ಲಿ ಚಿರತೆಗಳ ಸಂಖ್ಯೆ ಅತ್ಯಧಿಕವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

1,253: ಶಿವಾಲಿಕ್ ಪರ್ವತ ಮತ್ತು ಗಂಗಾನದಿ ಬಯಲು ಪ್ರದೇಶದಲ್ಲಿರುವ ಚಿರತೆಗಳ ಸಂಖ್ಯೆ
8,071: ಮಧ್ಯ ಭಾರತ ಮತ್ತು ಪೂರ್ವ ಘಟ್ಟದಲ್ಲಿ ಇರುವ ಚಿರತೆಗಳು
3,387: ಪಶ್ಚಿಮ ಘಟ್ಟದಲ್ಲಿ ಇರುವ ಚಿರತೆಗಳು
141: ಈಶಾನ್ಯ ಪರ್ವತ ಮತ್ತು ಬ್ರಹ್ಮಪುತ್ರಾ ಬಯಲು ಪ್ರದೇಶದಲ್ಲಿ ಇರುವ ಚಿರತೆಗಳು

ಹೆಚ್ಚು ಚಿರತೆಗಳಿರುವ ರಾಜ್ಯಗಳು
3,421:
ಮಧ್ಯಪ್ರದೇಶ
1,783: ಕರ್ನಾಟಕ
1,690: ಮಹಾರಾಷ್ಟ್ರ

12,852: 2018ರಲ್ಲಿ ಭಾರತದಲ್ಲಿ ಗುರುತಿಸಲಾಗಿದ್ದ ಚಿರತೆಗಳ ಅಂದಾಜು ಸಂಖ್ಯೆ
8,000: 2014ರಲ್ಲಿ ಭಾರತದಲ್ಲಿ ಗುರುತಿಸಲಾಗಿದ್ದ ಚಿರತೆಗಳ ಅಂದಾಜು ಸಂಖ್ಯೆ
4,852: 2014-2018ರ ನಡುವಣ ಅವಧಿಯಲ್ಲಿ ಏರಿಕೆ ಆಗಿರುವ ಚಿರತೆಗಳ ಸಂಖ್ಯೆ

ಆಧಾರ: ಭಾರತದಲ್ಲಿ ಚಿರತೆಗಳ ಸ್ಥಿತಿಗತಿ-2018 ವರದಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು