ಮಂಗಳವಾರ, ನವೆಂಬರ್ 24, 2020
22 °C
‘ಜಂಗಲ್ ರಾಜ್‌ನ ಯುವರಾಜ’ ಟೀಕೆಗೆ ತೇಜಸ್ವಿ ಯಾದವ್ ತಿರುಗೇಟು

‘ನಿಜವಾದ ಸಮಸ್ಯೆ ಮರೆಮಾಚಿದ ಮೋದಿ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ‘ಪ್ರಧಾನಿ ಅವರು ಭ್ರಷ್ಟಾಚಾರ, ನಿರುದ್ಯೋಗ ಮತ್ತು ವಲಸಿಗರ ಸಮಸ್ಯೆಗಳಂತಹ ನಿಜವಾದ ವಿಷಯಗಳನ್ನು ಮರೆಮಾಚಿದ್ದಾರೆ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮನ್ನು ‘ಜಂಗಲ್‌ರಾಜ್‌ನ ಯುವರಾಜ’ ಎಂದು ಕರೆದುದರ ಬಗ್ಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ತೇಜಸ್ವಿ ಯಾದವ್ ಅವರ ರ್‍ಯಾಲಿಗಳಿಗೆ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಇದು ಬಿಜೆಪಿ ಮತ್ತು ಜೆಡಿಯು ಮುಖಂಡರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿಯೇ ಆ ಎರಡೂ ಪಕ್ಷಗಳ ನಾಯಕರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಆರ್‌ಜೆಡಿ ಮುಖಂಡರು ಹೇಳಿದ್ದಾರೆ. 

‘ಅವರು ದೇಶದ ಪ್ರಧಾನಿ. ಅವರು ಏನು ಬೇಕಾದರೂ ಹೇಳಬಹುದು. ನಾನು ಅದಕ್ಕೆ ಪ್ರತಿಕ್ರಿಯೆ ನೀಡಬೇಕಿಲ್ಲ. ಆದರೆ, ಅವರು ಬಿಹಾರಕ್ಕೆ ಬಂದಿದ್ದರು. ಅವರು ವಿಶೇಷ ಪ್ಯಾಕೇಜ್‌ ಬಗ್ಗೆ, ನಿರುದ್ಯೋಗ ಮತ್ತು ಇನ್ನೂ ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಬಹುದಿತ್ತು. ಆದರೆ ಮಾತನಾಡಲಿಲ್ಲ’ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

‘ಬಿಜೆಪಿ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷ. ಅವರು 30 ಹೆಲಿಕಾಪ್ಟರ್‌ ಬಳಕೆ ಮಾಡುತ್ತಿದ್ದಾರೆ. ಒಬ್ಬ ಪ್ರಧಾನಿ ಈ ರೀತಿ ಮಾತನಾಡಿದರೆ... ಜನರಿಗೆ ಎಲ್ಲವೂ ಗೊತ್ತಿದೆ. ಅವರು ಬಡತನ, ಕಾರ್ಖಾನೆಗಳು, ರೈತರು, ನಿರುದ್ಯೋಗಿಗಳ ಬಗ್ಗೆ ಮಾತನಾಡಬೇಕಿತ್ತು’ ಎಂದು ತೇಜಸ್ವಿ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ಬಿಹಾರದ ಮುಜಪ್ಫರಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ‘ಜಂಗಲ್‌ ರಾಜ್‌ನ ಯುವರಾಜನ ಕೆಲಸಗಳನ್ನು ಅವಲೋಕಿಸಿದರೆ, ಜನರು ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ’ ಎಂದು ಟೀಕಿಸಿದ್ದರು. ತೇಜಸ್ವಿ ಯಾದವ್ ಅವರ ತಂದೆ ಲಾಲು ಪ್ರಸಾದ್ ಮತ್ತು ಅವರ ಪತ್ನಿ ರಾಬ್ಡಿ ದೇವಿ ಬಿಹಾರದ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ವಿರೋಧ ಪಕ್ಷಗಳು ಜಂಗಲ್‌ ರಾಜ್ ಎಂದು ಕರೆಯುತ್ತಿದ್ದವು.

ಮತ್ತೆ ಜಂಗಲ್‌ ರಾಜ್: ಯೋಗಿ

‘ಮಹಾಘಟಬಂಧನವನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಅಧಿಕಾರಕ್ಕೆ ತಂದರೆ ಬಿಹಾರದಲ್ಲಿ ಮತ್ತೆ ಜಂಗಲ್‌ ರಾಜ್ ಬರಲಿದೆ. ಹೀಗಾಗಿ ಮಹಘಾಟಬಂಧನದ ಪಕ್ಷಗಳನ್ನು ಅಧಿಕಾರಕ್ಕೆ ತರಬೇಡಿ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಅಂಗವಾಗಿ ಇಲ್ಲಿನ ಸಿವಾನ್‌ನಲ್ಲಿ ಗುರುವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ‘1990ರಿಂದ 2005ರವರೆಗಿನ ಆಡಳಿತದಲ್ಲಿ ಬಿಹಾರದಲ್ಲಿ ಜಂಗಲ್‌ ರಾಜ್ ನಡೆಸಿದವರು ಯಾರು ಎಂಬುದು ಜನರಿಗೆ ಗೊತ್ತಿದೆ. ಜಂಗಲ್‌ ರಾಜ್‌ನ ನಂತರ ನಿತೀಶ್‌ ಕುಮಾರ್ ಅವರು ಬಿಹಾರವನ್ನು ಅಭಿವೃದ್ಧಿಯ ಹಳಿಗೆ ಮರಳಿಸಿದ್ದಾರೆ. ಬಿಹಾರದಲ್ಲಿ ಮತ್ತೆ ಜಂಗಲ್ ರಾಜ್ ಬರುವುದು ಬೇಡ’ ಎಂದು ಯೋಗಿ ಹೇಳಿದ್ದಾರೆ.

‘ಕಾಶ್ಮೀರದಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿದ್ದೇವೆ. ಈಗ ಇಡೀ ದೇಶದಿಂದ ನಕ್ಸಲೀಯರನ್ನು ನಿರ್ಮೂಲನೆ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

***

ಮಹಾಘಟಬಂಧನದ ಪಕ್ಷಗಳು ಜಾತಿಯನ್ನು ಮುಂದುಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಈ ಜಾತಿವಾದಿಗಳನ್ನು ಮತದಾರರು ಅಧಿಕಾರದಿಂದ ದೂರ ಇರಿಸಬೇಕು

ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

--------

ದೇಶದ ಪಶ್ಚಿಮದ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ನೆಲೆಯೂರಲು ಬಿಜೆಪಿ ಯತ್ನಿಸುತ್ತಿದೆ. ಆದರೆ ಅವರ ಯತ್ನಕ್ಕೆ ಬಿಹಾರದಲ್ಲೇ ತಡೆ ಬೀಳಲಿದೆ. ಬಿಜೆಪಿ ಇಲ್ಲೇ ಸೋಲಲಿದೆ

ಸಚಿನ್ ಪೈಲಟ್, ಕಾಂಗ್ರೆಸ್ ನಾಯಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು