ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ: ರಾಹುಲ್ ಗಾಂಧಿ

Last Updated 24 ಡಿಸೆಂಬರ್ 2020, 8:24 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ. ಅಸಮರ್ಥ ನಾಯಕರೊಬ್ಬರು ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿ ಕಾರಿದರು.

ಕೇಂದ್ರ ಸರಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು 29ನೇ ದಿನಕ್ಕೆ ಕಾಲಿಟ್ಟಿದೆ. ರೈತರ ಹೋರಾಟವನ್ನು ಬೆಂಬಲಿಸಿರುವ ಕಾಂಗ್ರೆಸ್, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಧ್ಯ ಪ್ರವೇಶವನ್ನು ಕೋರಿ ಗುರುವಾರ ರಾಷ್ಟ್ರಪತಿ ಭವನದತ್ತ ಕಾಲ್ನಡಿಗೆ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು.

ಕಾಂಗ್ರೆಸ್ ನಿಯೋಗದ ಪ್ರತಿಭಟನಾ ಮೆರವಣಿಗೆಯನ್ನು ತಡೆದ ಪೊಲೀಸರು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪ್ರಮುಖ ಮುಖಂಡರವನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸರ ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ರಾಹುಲ್ ಗಾಂಧಿ, ದೇಶದಲ್ಲಿ ಪ್ರಜಾಪ್ರಭುತ್ವವೇ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನ ಮೂವರು ಮುಖಂಡರಿಗೆ ಮಾತ್ರ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡುವ ಅವಕಾಶ ದೊರಕಿತ್ತು. ಈ ವೇಳೆ ಕೃಷಿ ಕಾನೂನು ರದ್ದುಗೊಳಿಸುವಂತೆ ಆಗ್ರಹಿಸಿ ಎರಡು ಕೋಟಿ ಹಸ್ತಾಕ್ಷರವಿರುವ ನಿವೇದನಾ ಪತ್ರವನ್ನು ರಾಷ್ಟ್ರಪತಿಗೆ ಸಲ್ಲಿಸಿರುವ ರಾಹುಲ್ ಗಾಂಧಿ, ಈ ಕೃಷಿ ಕಾಯ್ದೆಗಳು ರೈತ ವಿರೋಧಿ ಎಂದು ರಾಷ್ಟ್ರಪತಿಗೆ ಮನವರಿಕೆ ಮಾಡಿದ್ದೇವೆ. ರೈತರು ಈ ಕಾಯ್ದೆಗಳ ವಿರುದ್ಧವಾಗಿ ಹೋರಾಡುತ್ತಿದ್ದಾರೆ ಎಂದು ಹೇಳಿದರು.

ಈ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ವರೆಗೂ ರೈತರು ಮನೆಗೆ ಹಿಂದಿರುಗುವುದಿಲ್ಲ ಎಂದು ನಾನು ಪ್ರಧಾನಿಗೆ ಹೇಳಲು ಬಯಸುತ್ತೇನೆ. ಸರ್ಕಾರವು ಸಂಸತ್ತಿನ ಜಂಟಿ ಅಧಿವೇಶನವನ್ನು ಕರೆದು ಈ ಕಾಯ್ದೆಗಳನ್ನು ಹಿಂಪಡೆಯಬೇಕು. ವಿರೋಧ ಪಕ್ಷವು ರೈತರಿಗೆ ಸಾಥ್ ನೀಡಲಿದೆ ಎಂದು ಹೇಳಿದರು.

ಬಂಡವಾಳಶಾಹಿಗಳಿಗಾಗಿ ಪ್ರಧಾನಿ ಹಣ ಸಂಪಾದಿಸುತ್ತಿದ್ದಾರೆ. ಅವರ ವಿರುದ್ಧ ನಿಲ್ಲಲು ಪ್ರಯತ್ನಿಸುವವರನ್ನು ಭಯೋತ್ಪಾದಕ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಅವರು ರೈತರು, ಕಾರ್ಮಿಕರೇ ಆಗಿರಬಹುದು ಎಂದು ವಾಗ್ದಾಳಿ ನಡೆಸಿದರು.

ಶಾಂತಿ ಪ್ರತಿಭಟನೆಯನ್ನು ಹತ್ತಿಕ್ಕುವುದು, ಲಾಠಿ ಬೀಸುವುದು ಅವರ ಹಾದಿಯಾಗಿದೆ. ನೀವು ಯಾವ ದೇಶದ ಬಗ್ಗೆ ಮಾತನಾಡುತ್ತಿದ್ದೀರಿ!ಯಾವ ದೇಶದ ಪ್ರಜಾಪ್ರಭುತ್ವ ಬಗ್ಗೆ ಮಾತನಾಡುತ್ತಿದ್ದೀರಿ?ಭಾರತದಲ್ಲಿ ಯಾವುದೇ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ. ಪ್ರಜಾಪ್ರಭುತ್ವ ನಿಮ್ಮ ಕಲ್ಪನೆಯಲ್ಲಿರಬಹುದು. ಆದರೆ ಯಥಾರ್ಥವಾಗಿ ಇಲ್ಲ ಎಂದು ಹೇಳಿದರು.

ಗಡಿಯಲ್ಲಿ ಚೀನಾವು ಭಾರತದ ಸಾವಿರಾರು ಕಿ.ಮೀ. ಭೂಮಿಯನ್ನು ಕಸಿದುಕೊಂಡಿದೆ. ಪ್ರಧಾನಿ ಅದರ ಬಗ್ಗೆ ಏಕೆ ಪ್ರತಿಕ್ರಿಯಿಸುತ್ತಿಲ್ಲ. ಅವರು ಏಕೆ ಮೌನವಾಗಿದ್ದಾರೆ? ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು.

ಅಸಮರ್ಥ ವ್ಯಕ್ತಿಯೊಬ್ಬರು ಇತರೆ ವ್ಯಕ್ತಿಗಳ ನಿಯಂತ್ರಣದಲ್ಲಿದ್ದಾರೆ. ಏನನ್ನೂ ಗೊತ್ತಿಲ್ಲದ ಅಸಮರ್ಥ ವ್ಯಕ್ತಿಯು ಅವರ ಪರವಾಗಿ ವ್ಯವಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಇದನ್ನು ಭಾರತ ಹಾಗೂ ಯುವ ಜನತೆ ಅರ್ಥ ಮಾಡಿಕೊಳ್ಳಬೇಕು. ಇವರು ಬಡವರ ಹಣವನ್ನು ಕಸಿದು ತಮ್ಮ ಜೇಬಿಗಿಳಿಸುತ್ತಾರೆ. ಇದರ ವಿರುದ್ಧ ನಮ್ಮ ಹೋರಾಟಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT