ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಷೇರುಪೇಟೆ ನಿಯಂತ್ರಣ ವ್ಯವಸ್ಥೆ ಮೌಲ್ಯಮಾಪನಕ್ಕೆ ಅಭ್ಯಂತರವಿಲ್ಲ’

ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರದಿಂದ ಮಾಹಿತಿ
Last Updated 13 ಫೆಬ್ರುವರಿ 2023, 21:00 IST
ಅಕ್ಷರ ಗಾತ್ರ

ನವದೆಹಲಿ: ಷೇರುಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಿತರಕ್ಷಣೆಗೆ ಈಗ ಜಾರಿಯಲ್ಲಿರುವ ನಿಯಂತ್ರಣ ವ್ಯವಸ್ಥೆ ಮತ್ತು ನಿಯಂತ್ರಣ ಸಂಸ್ಥೆಗಳ ಪಾತ್ರದ ಮೌಲ್ಯಮಾಪನಕ್ಕೆ ತಜ್ಞರ ಸಮಿತಿ ರಚಿಸಲು ನಮ್ಮ ಅಭ್ಯಂತರ ವೇನೂ ಇಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಆದರೆ, ಈ ಸ್ವರೂಪದ ಮೌಲ್ಯಮಾಪನ ಸಮಿತಿ ಇದೆ ಎಂಬ ಸಂದೇಶ ವಿದೇಶಿ ಅಥವಾ ದೇಶಿ ಹೂಡಿಕೆದಾರರಿಗೆ ರವಾನೆಯಾದರೆ ಹೂಡಿಕೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದೂ ಸರ್ಕಾರವು ಹೇಳಿದೆ.

ಹಿಂಡನ್‌ಬರ್ಗ್‌ ರಿಸರ್ಚ್‌ನ ವರದಿಯ ನಂತರ ಅದಾನಿ ಸಮೂಹದ ಷೇರುಗಳ ಮೌಲ್ಯದಲ್ಲಿ ಸುಮಾರು ₹10 ಲಕ್ಷ ಕೋಟಿಯಷ್ಟು ನಷ್ಟವಾಗಿದೆ. ಇದರಿಂದ ದೇಶದ ಹೂಡಿಕೆದಾರರಿಗೆ ನಷ್ಟವಾಗಿದೆ. ಇಂತಹ ನಷ್ಟವನ್ನು ತಪ್ಪಿಸಲು ಅಗತ್ಯ ವ್ಯವಸ್ಥೆ ಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಕಳೆದ ವಾರ ವಿಚಾರಣೆಗೆ ಎತ್ತಿಕೊಂಡಿತ್ತು. ಆಗ, ‘ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಕಠಿಣವಾದ ನಿಯಂತ್ರಣ ವ್ಯವಸ್ಥೆ ಬೇಕು. ಈಗ ಇರುವ ನಿಯಂತ್ರಣ ವ್ಯವಸ್ಥೆಯ ಮೌಲ್ಯಮಾಪನವೂ ಆಗಬೇಕು. ಈಗಿನ ಸ್ಥಿತಿಯ ಪರಿಶೀಲನೆಗೆ ಸಮಿತಿ ರಚನೆಯಾಗಬೇಕು’ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌,
ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಮತ್ತು ಜೆ.ಬಿ.ಪಾರ್ದೀವಾಲಾ ಅವರಿದ್ದ ಪೀಠವು ಹೇಳಿತ್ತು. ಈ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಈ ಬಗ್ಗೆ ಸರ್ಕಾರದ ನಿಲುವಿಗೆ ಸಂಬಂಧಿಸಿದ ಪ್ರಮಾಣಪತ್ರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಪೀಠಕ್ಕೆ ಸೋಮವಾರ ಸಲ್ಲಿಸಿದರು. ‘ಇಂತಹ ಪರಿಸ್ಥಿತಿಗಳನ್ನು ನಿಯಂತ್ರಿಸಲು ಸೆಬಿ ಶಕ್ತವಾಗಿದೆ ಮತ್ತು ಸನ್ನದ್ಧವಾಗಿದೆ. ಆದರೆ, ಮೌಲ್ಯಮಾಪನ ವ್ಯವಸ್ಥೆ ಬೇಕು ಎಂಬುದರ ಅಭಿಪ್ರಾಯ ತಿಳಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದಕ್ಕೆ ಈ ಪ್ರತಿಕ್ರಿಯೆ ನೀಡುತ್ತಿದ್ದೇವೆ. ಈ ನಿಯಂತ್ರಣ ಸಂಸ್ಥೆಗಳಿಗೆ ಧಕ್ಕೆಯಾಗದೇ ಇರುವ ರೀತಿಯಲ್ಲಿ ಮೌಲ್ಯಮಾಪನ ಸಮಿತಿಯನ್ನು ರಚಿಸಲು ನಮ್ಮ ಅಭ್ಯಂತರವಿಲ್ಲ. ಸಮಿತಿಯಲ್ಲಿ ಯಾರು ಇರಬೇಕು ಎಂದು ಹೆಸರನ್ನು ಸೂಚಿಸಲು ಸರ್ಕಾರಕ್ಕೆ ಅವಕಾಶ ನೀಡಬೇಕು. ಆ ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗುತ್ತದೆ’ ಎಂದು ಅವರು ಪೀಠಕ್ಕೆ ಹೇಳಿದರು.

ಆಗ ಪೀಠವು, ‘ಬುಧವಾರ ಈ ಬಗ್ಗೆ ದಾಖಲೆಗಳನ್ನು ಸಲ್ಲಿಸಿ’ ಎಂದು ಸೂಚಿಸಿತು. ಅರ್ಜಿಗಳ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿತು ಎಂದು ಪಿಟಿಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT