ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಗುರುತಿನ ಚೀಟಿ: 17 ವರ್ಷ ಮೇಲ್ಪಟ್ಟವರಿಗೂ ಅರ್ಜಿ ಸಲ್ಲಿಸಲು ಅವಕಾಶ

Last Updated 28 ಜುಲೈ 2022, 12:25 IST
ಅಕ್ಷರ ಗಾತ್ರ

ನವದೆಹಲಿ: ಮತದಾನ ಪ್ರಕ್ರಿಯೆಯಲ್ಲಿ ಯುವಕರ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಚುನಾವಣಾ ಆಯೋಗವು 17 ವರ್ಷ ಮೇಲ್ಪಟ್ಟವರು ಮುಂಚಿತವಾಗಿಯೇ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಹೀಗೆ ಅರ್ಜಿ ಸಲ್ಲಿಸಿದವರಿಗೆ 18 ವರ್ಷ ಪೂರ್ಣಗೊಂಡ ಬಳಿಕ ಗುರುತಿನ ಚೀಟಿ ಸಿಗಲಿದೆ.

ಆಯಾ ವರ್ಷದ ಜನವರಿ 1ರಂದು ಅಥವಾ ಜನವರಿ 1ರೊಳಗೆ 18 ವರ್ಷ ಪೂರ್ಣಗೊಳಿಸಿದವರಿಗಷ್ಟೇಈ ಮೊದಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿತ್ತು. ಜನವರಿ 1ರ ನಂತರ 18 ವರ್ಷ ಪೂರ್ಣಗೊಳಿಸಿದವರು ಮತದಾರರ ಗುರುತಿನ ಚೀಟಿಗಾಗಿ ಹೆಸರು ನೋಂದಾಯಿಸಲು ಮುಂದಿನ ವರ್ಷದವರೆಗೆ ಕಾಯಬೇಕಾಗಿತ್ತು.

ಇದನ್ನು ತಪ್ಪಿಸುವ ಸಲುವಾಗಿಚುನಾವಣಾ ಕಾನೂನಿನಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದ್ದು, ಇನ್ನು ಮುಂದೆ ಜನವರಿ 1, ಏಪ್ರಿಲ್‌ 1, ಜುಲೈ 1 ಹಾಗೂ ಅಕ್ಟೋಬರ್‌ 1ರೊಳಗೆ 18 ವರ್ಷ ಪೂರ್ಣಗೊಂಡವರೂ ಗುರುತಿನ ಚೀಟಿಗಾಗಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

‘ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಮತ್ತು ಚುನಾವಣಾ ಆಯುಕ್ತ ಅನೂಪ್‌ಚಂದ್ರ ಪಾಂಡೆ ನೇತೃತ್ವದ ಸಮಿತಿಯು 17 ವರ್ಷ ಮೇಲ್ಪಟ್ಟವರಿಗೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಸಂಬಂಧ ನಿರ್ಣಯ ಕೈಗೊಂಡಿದೆ. ಇದನ್ನು ಕಾರ್ಯಗತಗೊಳಿಸುವಂತೆರಾಜ್ಯ ಚುನಾವಣಾ ಆಯೋಗಗಳಿಗೆ ನಿರ್ದೇಶನ ನೀಡಲಾಗಿದೆ. ಇದರ ಜಾರಿಗೆ ತಾಂತ್ರಿಕವಾಗಿ ಏನಾದರೂ ತೊಂದರೆಗಳಿದ್ದರೆ ಅದನ್ನು ನಿವಾರಿಸುವಂತೆಯೂ ಸೂಚಿಸಿದೆ’ ಎಂದು ಚುನಾವಣಾ ಆಯೋಗ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

‘ಇನ್ನು ಮುಂದೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮತದಾರರ ಪಟ್ಟಿಯು ಪರಿಷ್ಕರಣೆಯಾಗಲಿದೆ. 2023ರ ಏಪ್ರಿಲ್‌ 1, ಜುಲೈ 1 ಮತ್ತು ಅಕ್ಟೋಬರ್‌ 1ರೊಳಗೆ 18 ವರ್ಷ ಪೂರ್ಣಗೊಂಡರೆ ಅಂತಹವರು ಮುಂಚಿತವಾಗಿಯೇ ಅರ್ಜಿ ಸಲ್ಲಿಸಬಹುದು’ ಎಂದು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT