ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆಯನ್ನು ಪ್ರಚೋದನೆ ಎನ್ನಲಾಗದು: ಮಧ್ಯಪ್ರದೇಶ ಹೈಕೋರ್ಟ್‌

ಆತ್ಮಹತ್ಯೆ ಪ್ರಕರಣವೊಂದರ ವಿಚಾರಣೆ ವೇಳೆ ಮಧ್ಯಪ್ರದೇಶ ಹೈಕೋರ್ಟ್‌ ಅಭಿಮತ
Last Updated 18 ಮಾರ್ಚ್ 2021, 12:10 IST
ಅಕ್ಷರ ಗಾತ್ರ

ಜಬಲ್ಪುರ: ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಬೆದರಿಕೆಯೂ ಕಾರಣವಾಗಿರಬಹುದು. ಆದರೆ, ಅದನ್ನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ಎಂಬುದಾಗಿ ಪರಿಗಣಿಸಲು ಆಗದು ಎಂದು ಮಧ್ಯಪ್ರದೇಶ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಒಬ್ಬ ಪುರುಷ ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆಯ ಪ್ರಚೋದನೆಯೇ ಕಾರಣ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣದ ವಿಚಾರಣೆ ನಡೆಸಿದನ್ಯಾಯಮೂರ್ತಿ ಅಂಜಲಿ ಪಾಲೊ ಅವರಿದ್ದ ಏಕಸದಸ್ಯ ಪೀಠ, ಮಹಿಳೆ ವಿರುದ್ಧ ಕೆಳ ನ್ಯಾಯಾಲಯದಲ್ಲಿ ದಾಖಲಿಸಿದ್ದ ದೂರನ್ನು ವಜಾಗೊಳಿಸಿ, ಆಕೆಯನ್ನು ಆರೋಪ ಮುಕ್ತಗೊಳಿಸಿದೆ.

‘ಒಂದು ವೇಳೆ ಮೃತ ವ್ಯಕ್ತಿಯನ್ನು ಅರ್ಜಿದಾರ ಬ್ಲ್ಯಾಕ್‌ಮೇಲ್‌ ಮಾಡಿದ್ದರೆ, ಆಗ, ಅರ್ಜಿದಾರಳ ವಿರುದ್ಧ ದೂರು ಸಲ್ಲಿಸಲು ಅವಕಾಶ ಇದ್ದೇ ಇತ್ತು’ ಎಂದೂ ನ್ಯಾಯಮೂರ್ತಿ ಅಂಜಲಿ ಅಭಿಪ್ರಾಯಪಟ್ಟಿದ್ದಾರೆ.

ಘಟನೆ ವಿವರ: ಈ ಪ್ರಕರಣದಲ್ಲಿ ಅರ್ಜಿದಾರರಾಗಿರುವ ಮಹಿಳೆ, ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ತನ್ನನ್ನು ಮದುವೆಯಾಗುವಂತೆ ಆತನಿಗೆ ಒತ್ತಾಯಿಸುತ್ತಿದ್ದರು. ಆದರೆ ಆ ವ್ಕಕ್ತಿ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ್ದರು ಎನ್ನಲಾಗಿದೆ.

‘ಒಂದು ವೇಳೆ ಮದುವೆಯಾಗದಿದ್ದಲ್ಲಿ, ವ್ಯಕ್ತಿ ಹಾಗೂ ಆತನ ಕುಟುಂಬದ ಸದಸ್ಯರ ವಿರುದ್ಧ ದೂರು ಸಲ್ಲಿಸುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಳು’ ಎನ್ನಲಾಗಿದೆ.

ನಂತರ, ವ್ಯಕ್ತಿ 2020ರ ಜನವರಿ 28ರಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆಮಹಿಳೆ ವಿರುದ್ಧ ಜಬಲ್ಪುರ ಜಿಲ್ಲೆಯ ಬಾರ್ಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.

ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣ ಪ್ರಶ್ನಿಸಿ ಮಹಿಳೆ ಕೋರ್ಟ್‌ ಮೊರೆ ಹೋಗುತ್ತಾರೆ. ‘ಆತ್ಮಹತ್ಯೆ ಮಾಡಿಕೊಳ್ಳಲು ಆ ವ್ಯಕ್ತಿಗೆ ನೇರವಾಗಿ ಇಲ್ಲವೇ ಪರೋಕ್ಷವಾಗಿ ನಾನು ಪ್ರಚೋದನೆ ನೀಡಿಲ್ಲ. ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಲು ಹಲವಾರು ಮಾರ್ಗಗಳೂ ಇದ್ದವು’ ಎಂದು ಮಹಿಳೆ ಅರ್ಜಿಯಲ್ಲಿ ವಿವರಿಸಿದ್ದರು.

ಮಹಿಳೆ ಸಲ್ಲಿಸಿದ ಅರ್ಜಿಯನ್ನು ಮಾ.3ರಂದು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಅಂಜಲಿ, ‘ಅಪರಾಧ ಕೃತ್ಯ ಎಸಗಲು ದುರುದ್ದೇಶಪೂರಿತ ಯೋಚನೆ ಇರುವುದು ಸಾಬೀತಾದರೆ, ಮಹಿಳೆಗೆ ಐಪಿಸಿ ಸೆಕ್ಷನ್‌ 306ರ (ಆತ್ಮಹತ್ಯೆ ಪ್ರಚೋದನೆ) ಅಡಿ ಶಿಕ್ಷೆ ನೀಡಬಹುದು. ಆದರೆ ಮಹಿಳೆ ಒಡ್ಡಿದ್ದಳು ಎನ್ನಲಾದ ಬೆದರಿಕೆಯನ್ನೇ ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲು ಸಾಧ್ಯ ಇಲ್ಲ’ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT