ಶುಕ್ರವಾರ, ಫೆಬ್ರವರಿ 26, 2021
32 °C
ಕಳೆದ ವರ್ಷದ ಘಟನೆ: ಕೈ ಬರಹದ ಮೂಲಕ ಪತ್ತೆ ಹಚ್ಚಿದ ಸಿಬಿಐ

ಪ್ರಧಾನಿ ಕಚೇರಿ ತಲುಪಿದ್ದು ಟಿಕೆಟ್ ಆಕಾಂಕ್ಷಿಯ ‘ನಕಲಿ ಪತ್ರ‘ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಲ್ಲಿ ಒಬ್ಬರಾದ ಶಿವಾಜಿ ಯಾದವ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕೆಂದು ಮುಖ್ಯಮಂತ್ರಿ ಆದಿತ್ಯನಾಥ್ ಶಿಫಾರಸು ಮಾಡಿ ಬರೆದ ಪತ್ರವೊಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಲುಪಿತ್ತು.

ಆದರೆ, ಅಂತಹ ಯಾವುದೇ ಪತ್ರವನ್ನು ಆದಿತ್ಯನಾಥ್ ಅವರು ಪ್ರಧಾನಿಗೆ ಎಂದೂ ಬರೆದಿಲ್ಲ ಎಂದು ಸಿಬಿಐ ತನಿಖೆ ಮೂಲಕ ತಿಳಿದುಬಂದಿದೆ. ವಿಷಯ ಏನೆಂದರೆ, ಸ್ವತಃ ಯಾದವ್ ಅವರೇ, ಮುಖ್ಯಮಂತ್ರಿಯವರ ಹೆಸರಲ್ಲಿ ಈ ಪತ್ರ ಬರೆದಿದ್ದಾರೆ ಎಂದು ಲಕೋಟೆ ಮೇಲಿನ ಕೈ ಬರಹದಿಂದ ಗೊತ್ತಾಗಿರುವುದಾಗಿ ತನಿಖೆ ವೇಳೆ ಬಹಿರಂಗಗೊಂಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ವರ್ಷಕ್ಕೂ ಹೆಚ್ಚು ಕಾಲ ಸಿಬಿಐ ತನಿಖೆ ನಡೆಸಿದ್ದು, ಕಳೆದ ವಾರ ಯಾದವ್ ವಿರುದ್ಧ ವಂಚನೆ, ಮೋಸ ಮತ್ತು ಖೋಟಾ ಆರೋಪದ ಮೇಲೆ ಪ್ರಕರಣ ದಾಖಲಿಸಿದೆ.

ಉತ್ತರ ಪ್ರದೇಶದಲ್ಲಿ ಶಾಸಕರು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ ನಂತರ, ಅವರಿಂದ ತೆರವಾದ ಹನ್ನೊಂದು ವಿಧಾನಸಭಾ ಸ್ಥಾನಗಳಿಗೆ ಕಳೆದ ಅಕ್ಟೋಬರ್‌ನಲ್ಲಿ ಉಪ ಚುನಾವಣೆ ನಿಗದಿಯಾಗಿತ್ತು. ಚುನಾವಣೆ ದಿನಾಂಕ ಪ್ರಕಟಿಸುವ ಮೊದಲೇ, ಯಾರು ಸ್ಪರ್ಧಿಸಬೇಕೆಂಬುದರ ಬಗ್ಗೆ ಸ್ಪರ್ಧಿ ನಡೆದಿತ್ತು. ಈ ವೇಳೆ ಯೋಗಿ ಆದಿತ್ಯನಾಥ್ ಅವರ ಹೆಸರಲ್ಲಿ ಯಾದವ್ ಅವರಿಗೆ ಟಿಕೆಟ್ ನೀಡುವಂತೆ ಜೂನ್ 10, 2019ರಂದು ಶಿಫಾರಸು ಮಾಡಿದ ಪತ್ರ ಪ್ರಧಾನಿ ಮೋದಿಯವರನ್ನು ತಲುಪಿತ್ತು.

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಹದಿನೈದು ದಿನಗಳ ನಂತರ ಈ ಪತ್ರವು ಪ್ರಧಾನಿಯವರಿಗೆ ತಲುಪಿತ್ತು. ಇದರ ಬಗ್ಗೆ ಅನುಮಾನ ವ್ಯಕ್ತವಾದ ನಂತರ, ಪ್ರಧಾನಮಂತ್ರಿ ಕಚೇರಿಯ ಸಹಾಯಕ ನಿರ್ದೇಶಕ ಪಿ.ಕೆ.ಇಸ್ಸಾರ್ ಅವರು ತನಿಖೆ ನಡೆಸುವಂತೆ ಆ. 8ರಂದು ಸಿಬಿಐಗೆ ಪತ್ರ ಬರೆದು ಮನವಿ ಮಾಡಿದ್ದರು.

ಪ್ರಾಥಮಿಕ ವಿಚಾರಣೆಯ ವೇಳೆ, ಜೂನ್ 13, 2019 ರಂದು ಜೌನ್‌ಪುರ ಜಿಲ್ಲೆಯ ಬಾದಾಲ್‌ಪುರ ಉಪ-ಅಂಚೆ ಕಚೇರಿಯಿಂದ ಸ್ಪೀಡ್ ಪೋಸ್ಟ್ ಮೂಲಕ ಈ ಪತ್ರ ಪ್ರಧಾನಿ ಕಚೇರಿಗೆ ಕಳುಹಿಸಲಾಗಿತ್ತು ಎಂದು ತನಿಖಾಧಿಕಾರಿಗಳು ಪತ್ತೆ ಮಾಡಿದರು. ಲಕೋಟೆ ಮೇಲಿದ್ದ ಫೋನ್‌ ಸಂಖ್ಯೆ ಮರಜ್‌ಗಂಜ್‌ನ ಸಂದೀಪ್ ಸಿಂಗ್ ಅವರಿಗೆ ಸೇರಿದ್ದು ಎಂಬುದೆಂದು ಗೊತ್ತಾಯಿತು. ನಂತರ ತನಿಖಾಧಿಕಾರಿಗಳು ಅವರನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ವೇಳೆ ‘ಆ ಪತ್ರವನ್ನು ತಾನು ಕಳಿಸಿಲ್ಲ‘ ಎಂದು ಸಿಂಗ್ ಹೇಳಿದರು. ಕೊನೆಗೆ ಸಿಂಗ್ ಅವರು, ಲಕೋಟೆಯ ಮೇಲಿನ ಕೈಬರಹವನ್ನು ಕಂಡು, ‘ಇದು ಯಾದವ್ ಅವರ ಕೈಬರಹ‘ ಎಂದು ಗುರುತಿಸಿದರು. ಆಗ ಈ ತನಿಖೆ ಹೊಸ ತಿರುವು ಪಡೆದುಕೊಂಡಿತ್ತು.

ಅಸಲಿಯ ವಿಷಯ ಏನೆಂದರೆ, ಸಂದೀಪ್ ಸಿಂಗ್ ಮತ್ತು ಯಾದವ್ ಆಪ್ತ ಸ್ನೇಹಿತರು, ನೆರೆಹೊರೆಯವರು. ಇವರ ಪತ್ನಿಯರು ಸಿಂಹಾನಿಯಾ ವಿಶ್ವವಿದ್ಯಾಲಯದಲ್ಲಿ ಬಿ.ಇಡಿ ಓದುವಾಗ ಸಹಪಾಠಿಗಳಾಗಿದ್ದರು ಎಂಬ ಮಾಹಿತಿಯೂ ತಿಳಿದುಬಂತು.

ಲಖನೌ ಪೊಲೀಸ್ ಅಧಿಕಾರಿಗಳು ನೀಡಿದ ವರದಿಯ ಅನ್ವಯ ದೆಹಲಿಯ ಸಿಬಿಐ ಅಧಿಕಾರಿಗಳು ಯಾದವ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು