ಗುರುವಾರ , ಮೇ 13, 2021
24 °C

ಇಂದಿನಿಂದ ಲಸಿಕೆ ಆಂದೋಲನ: ಜನರಿಗೆ 4 ಮನವಿ ಪ್ರಕಟಿಸಿದ ಪ್ರಧಾನಿ ಮೋದಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ ಇಂದಿನಿಂದ ದೇಶದಲ್ಲಿ ಲಸಿಕೆ ಆಂದೋಲನ ಅಥವಾ ಉತ್ಸವ (ಟೀಕಾ ಉತ್ಸವ್) ಆರಂಭವಾಗಿದೆ. ಕೊರೊನಾ ವೈರಸ್‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮನವಿ ಮಾಡಿವೆ. ಇದರೊಂದಿಗೆ ಕೆಲವು ರಾಜ್ಯಗಳಲ್ಲಿ ಲಸಿಕೆ ಕೊರತೆ ಎದುರಾಗಿದೆ.

ಏಪ್ರಿಲ್‌ 11ರಿಂದ 14ರ ವರೆಗೂ ಲಸಿಕೆ ಆಂದೋಲನದಲ್ಲಿ ಅತಿ ಹೆಚ್ಚು ಜನರಿಗೆ ಲಸಿಕೆ ಹಾಕಿಸಲು ಉತ್ತರ ಪ್ರದೇಶ, ಬಿಹಾರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಸಜ್ಜಾಗಿವೆ. 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವ್ಯಕ್ತಿಗೆ ಲಸಿಕೆ ಹಾಕಿಸಿಕೊಳ್ಳಲು ಅವಕಾಶವಿದೆ.

'ಇಂದು ದೇಶದಾದ್ಯಂತ ಲಸಿಕೆ ಆಂದೋಲನವನ್ನು ಆರಂಭಿಸುತ್ತಿದ್ದೇವೆ. ಕೊರೊನಾ ಹೋರಾಟದ ಈ ಸಂದರ್ಭದಲ್ಲಿ ನಾನು ನಾಲ್ಕು ಮನವಿಗಳನ್ನು ಮುಂದಿಡುತ್ತಿದ್ದೇನೆ' ಎಂದು ಪ್ರಧಾನಿ ಮೋದಿ ಲೇಖನದ ಪುಟವನ್ನು ಪ್ರಕಟಿಸಿದ್ದು, ಅದರಲ್ಲಿ– 'ಒಬ್ಬ–ಮತ್ತೊಬ್ಬರಿಗೆ ಲಸಿಕೆ ಹಾಕಿಸಿ, ಒಬ್ಬ–ಮತ್ತೊಬ್ಬರಿಗೆ ಸಹಕಾರ ನೀಡಿ, ಒಬ್ಬ–ಮತ್ತೊಬ್ಬರನ್ನು ಉಳಿಸಿ. ಹಾಗೂ ಮೈಕ್ರೊ–ಕಂಟೈನ್ಮೆಂಟ್‌ ವಲಯವನ್ನು ಸೃಷ್ಟಿಸಿ' ಎಂದಿದ್ದಾರೆ.

ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ಇಲ್ಲದ ವ್ಯಕ್ತಿಗೆ ಮತ್ತೊಬ್ಬರು ಸಹಾಯ ಮಾಡಬೇಕು, ಅವರನ್ನು ಸೋಂಕಿನಿಂದ ಈ ಮೂಲಕ ರಕ್ಷಿಸಬಹುದು ಹಾಗೂ ಸ್ವತಃ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಸೋಂಕು ಹರಡುವುದನ್ನು ತಪ್ಪಿಸಿ ಮತ್ತೊಬ್ಬರ ಪ್ರಾಣ ಉಳಿಸಬಹುದಾಗಿದೆ ಎಂದು ಪ್ರಧಾನಿ ವಿವರಿಸಿದ್ದಾರೆ.

ದೇಶದಲ್ಲಿ 85 ದಿನಗಳಲ್ಲಿ 10 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ಹಾಕಲಾಗಿದೆ, ಭಾರತ ಅತ್ಯಂತ ವೇಗವಾಗಿ ಲಸಿಕೆ ಪ್ರಕ್ರಿಯೆ ನಡೆಸಿರುವ ರಾಷ್ಟ್ರವಾಗಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ. ಅಮೆರಿಕ 89 ದಿನಗಳಲ್ಲಿ 10 ಕೋಟಿ ಡೋಸ್ ಲಸಿಕೆ ಹಾಕಿದ್ದರೆ, ಚೀನಾ 102 ದಿನಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸಿದೆ.

'ಆರೋಗ್ಯಪೂರ್ಣ ಮತ್ತು ಕೋವಿಡ್‌–19 ಮುಕ್ತ ಭಾರತ ಸಾಧಿಸುವ ಪ್ರಯತ್ನ...' ಎಂದು ಪ್ರಧಾನಿ ಕಾರ್ಯಾಲಯ ಲಸಿಕೆ ಅಭಿಯಾನದ ಚಾರ್ಟ್‌ ಪ್ರಕಟಿಸಿದೆ.

'ಲಸಿಕೆ ಆಂದೋಲನದ' ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳುವಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜನರಲ್ಲಿ ಮನವಿ ಮಾಡಿದ್ದಾರೆ.

ಜ್ಯೋತಿಬಾ ಫುಲೆ ಜನ್ಮ ದಿನವಾದ ಏ.11ರಂದು ಆರಂಭಗೊಂಡು ಅಂಬೇಡ್ಕರ್ ಜಯಂತಿ ದಿನವಾದ ಏ. 14ರ ವರೆಗೆ ಲಸಿಕಾ ಆಂದೋಲನ ಹಮ್ಮಿಕೊಳ್ಳುವಂತೆ ಗುರುವಾರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಪ್ರಧಾನಿ ಕರೆ ನೀಡಿದ್ದರು.

'ಲಸಿಕೆ ಪಡೆಯಲು ಅರ್ಹರಾಗಿರುವವರು ಈ ವಿಶೇಷ ಅಭಿಯಾನದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರಲಿ ಹಾಗೂ ಲಸಿಕೆಯ ಪೋಲು ಶೂನ್ಯ ಮಟ್ಟದಲ್ಲಿರಲಿ. ಇದರಿಂದಾಗಿ ಲಸಿಕೆ ಸಾಮರ್ಥ್ಯ ವೃದ್ಧಿಯಾಗಲಿದೆ' ಎಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ್ದರು.

ಕೆಲವು ವಾರಗಳಿಂದ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಭಾನುವಾರ ಬೆಳಿಗ್ಗೆ 24 ಗಂಟೆಗಳ ಅವಧಿಯಲ್ಲಿ 1,52,879 ಹೊಸ ಪ್ರಕರಣಗಳು ದಾಖಲಾಗಿವೆ ಹಾಗೂ 839 ಮಂದಿ ಸಾವಿಗೀಡಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು