ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ ಮುಖ್ಯಮಂತ್ರಿಯಾಗಿ ತೀರಥ್ ‌ಸಿಂಗ್‌ ರಾವತ್‌ ಪ್ರಮಾಣ ವಚನ

Last Updated 10 ಮಾರ್ಚ್ 2021, 12:58 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ತೀರಥ್‌ ಸಿಂಗ್‌ ರಾವತ್‌ ಅವರು ಉತ್ತರಾಖಂಡದ 9ನೇ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರು ತೀರಥ್‌ಸಿಂಗ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಗರ್ವಾಲ್‌ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ತೀರಥ್‌ಸಿಂಗ್‌ ರಾವತ್‌ ಅವರಿಗೆ, ಬಿಜೆಪಿಯಲ್ಲಿನ ಕ್ಷಿಪ್ರ ಬೆಳವಣಿಗೆಯಿಂದಾಗಿ ಮುಖ್ಯಮಂತ್ರಿ ಪದವಿ ಒಲಿದುಬಂತು.

ತಮ್ಮ ಕಾರ್ಯವೈಖರಿಗೆ ಪಕ್ಷದ ವಲಯದಲ್ಲಿಯೇ ಭಾರಿ ಅಸಮಾಧಾನ, ವಿರೋಧ ವ್ಯಕ್ತವಾದ ಕಾರಣ ತ್ರಿವೇಂದ್ರಸಿಂಗ್‌ ರಾವತ್‌ ಮಂಗಳವಾರವಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಪಕ್ಷದ ಹೈಕಮಾಂಡ್‌ನ ಪ್ರತಿನಿಧಿಗಳಾದ ರಮಣ್‌ಸಿಂಗ್‌ ಹಾಗೂ ದುಷ್ಯಂತ್‌ ಸಿಂಗ್‌ ಅವರ ಉಪಸ್ಥಿತಿಯಲ್ಲಿ ಡೆಹ್ರಾಡೂನ್‌ನಲ್ಲಿ ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರಥ್‌ಸಿಂಗ್‌ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ರಾಜ್ಯದ ಸಂಸದರು ಸಹ ಈ ಸಭೆಯಲ್ಲಿ ಇದ್ದರು.

‘ತೀರಥ್‌ಸಿಂಗ್‌ ಅವರಿಗೆ ಆಡಳಿತ ಮತ್ತು ಸಂಘಟನೆ ಕ್ಷೇತ್ರದಲ್ಲಿ ಅಪಾರ ಅನುಭವ ಇದೆ. ಅವರ ನಾಯಕತ್ವದಲ್ಲಿ ರಾಜ್ಯ ಮತ್ತಷ್ಟು ಅಭಿವೃದ್ಧಿ ಹೊಂದುವ ವಿಶ್ವಾಸ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್‌, ‘ಆರೋಗ್ಯ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ನಾನು ಹೆಚ್ಚು ಒತ್ತು ನೀಡುವೆ’ ಎಂದು ಹೇಳಿದರು.

ಉತ್ತರಾಖಂಡ ವಿಧಾನಸಭೆಗೆ ಚುನಾವಣೆ ನಡೆಯಲು ಒಂದು ವರ್ಷ ಮಾತ್ರ ಬಾಕಿ ಇದೆ. ಪಕ್ಷದಲ್ಲಿನ ಅಸಮಾಧಾನ ಶಮನ ಮಾಡುವ ಜೊತೆಗೆ ರಾಜ್ಯವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ದು, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ತೀರಥ್‌ ಸಿಂಗ್‌ ಅವರ ಮೇಲಿದೆ.

ತ್ರಿವೇಂದ್ರಸಿಂಗ್‌ ರಾವತ್‌ ಅವಧಿಯಲ್ಲಿ ಹಲವಾರು ದೇವಾಲಯಗಳನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಗೈರ್‌ಸೇನ್‌ ಕಮಿಷನರೇಟ್‌ ಅನ್ನು ಸೃಷ್ಟಿಸಿದ್ದು ಸಹ ವಿವಾದಕ್ಕೆ ಕಾರಣವಾಗಿತ್ತು. ಇವು ಸೇರಿದಂತೆ ಆಡಳಿತಾತ್ಮಕವಾಗಿ ಹಲವಾರು ಸವಾಲುಗಳು ನೂತನ ಮುಖ್ಯಮಂತ್ರಿ ಮುಂದಿವೆ.

ಆರ್‌ಎಸ್‌ಎಸ್‌ ಪ್ರಚಾರಕರಾಗಿ ತಮ್ಮ ಸಾಮಾಜಿಕ ಜೀವನ ಆರಂಭಿಸಿದ ತೀರಥ್‌ಸಿಂಗ್‌ ಅವರು, ಹೇಮವತಿನಂದನ್‌ ಬಹುಗುಣ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಭಾರತೀಯ ಯುವ ಮೋರ್ಚಾದಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.

ಉತ್ತರಾಖಂಡ ರಾಜ್ಯ ಉದಯವಾದ ನಂತರ, 2000–02 ಅವಧಿಗೆ ಮೊದಲ ಶಿಕ್ಷಣ ಮಂತ್ರಿಯಾಗಿ, ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿ 2013–15ರ ಅವಧಿಗೆ ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT