ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ: ಮಹಿಳೆಯರ ಖಾತೆಗೆ ತಿಂಗಳಿಗೆ 5 ಸಾವಿರ ವರ್ಗಾಯಿಸುವುದಾಗಿ ಟಿಎಂಸಿ ಘೋಷಣೆ

Last Updated 11 ಡಿಸೆಂಬರ್ 2021, 10:41 IST
ಅಕ್ಷರ ಗಾತ್ರ

ಪಣಜಿ: ಮುಂದಿನ ವರ್ಷ ಫೆಬ್ರುವರಿಯಲ್ಲಿ ಗೋವಾದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗಾಗಿ ನೇರ ನಗದು ವರ್ಗಾವಣೆ ಯೋಜನೆಯನ್ನು ಆರಂಭಿಸುವುದಾಗಿ ಟಿಎಂಸಿ ಘೋಷಿಸಿದೆ.

'ಗೃಹ ಲಕ್ಷ್ಮಿ ಎಂಬ ಹೆಸರಿನ ಈ ಯೋಜನೆಯಡಿ, ಟಿಎಂಸಿ ಸರ್ಕಾರ ಅಧಿಕಾರಕ್ಕೆ ಬಂದದ್ದೇ ಆದರೆ, ಹಣದುಬ್ಬರವನ್ನು ಕಡಿಮೆ ಮಾಡಲು ಖಾತರಿ ಆದಾಯ ಬೆಂಬಲವಾಗಿ ರಾಜ್ಯದ ಪ್ರತಿಯೊಬ್ಬ ಮಹಿಳೆಗೂ ತಿಂಗಳಿಗೆ ₹ 5 ಸಾವಿರವನ್ನು ವರ್ಗಾವಣೆ ಮಾಡಲಾಗುವುದು' ಎಂದು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ತಿಳಿಸಿದ್ದಾರೆ.

'ಪಕ್ಷವು ಶೀಘ್ರದಲ್ಲೇ ಈ ಯೋಜನೆಗಾಗಿ ಕಾರ್ಡ್‌ಗಳನ್ನು ವಿತರಿಸಲು ಪ್ರಾರಂಭಿಸುತ್ತದೆ. ಪಕ್ಷವು ಗೋವಾದಲ್ಲಿ ಸರ್ಕಾರ ರಚಿಸಿದ ನಂತರ ವಿಶಿಷ್ಟ ಗುರುತಿನ ಸಂಖ್ಯೆಗಳನ್ನು ಹೊಂದಿರುವ ಈ ಕಾರ್ಡ್‌ಗಳು ಕಾರ್ಯನಿರ್ವಹಿಸುತ್ತದೆ' ಎಂದು ಹೇಳಿದರು.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯು ಗೋವಾದ ಎಲ್ಲ 40 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವುದಾಗಿ ಘೋಷಿಸಿದೆ.

'ಗೃಹ ಲಕ್ಷ್ಮಿ ಯೋಜನೆಯಡಿ ರಾಜ್ಯದ 3.5 ಲಕ್ಷ ಮಹಿಳೆಯರು ಪ್ರಯೋಜನ ಪಡೆಯಲಿದ್ದು, ಇದು ರಾಜ್ಯದ ಬಿಜೆಪಿ ಸರ್ಕಾರದ ಸದ್ಯದ ಗೃಹ ಆಧಾರ್ ಯೋಜನೆಯಲ್ಲಿನ ಕಡ್ಡಾಯಗೊಳಿಸಲಾದ ಗರಿಷ್ಠ ಆದಾಯದ ಮಿತಿಯನ್ನು ಸಹ ತೆಗೆದುಹಾಕುತ್ತದೆ' ಎಂದು ಗೋವಾ ಟಿಎಂಸಿ ಉಸ್ತುವಾರಿ ಮೊಯಿತ್ರಾ ಹೇಳಿದರು.

'ಗೋವಾ ಬಿಜೆಪಿ ಸರ್ಕಾರದ ಸದ್ಯದ ಯೋಜನೆಯು ಮಹಿಳೆಯರಿಗೆ ಪ್ರತಿ ತಿಂಗಳಿಗೆ ₹ 1,500 ಅನ್ನು ನೀಡುತ್ತಿದೆ ಮತ್ತು ಇದು ಆದಾಯ ಮಿತಿಯಿಂದಾಗಿ ಕೇವಲ 1.5 ಲಕ್ಷ ಮಹಿಳೆಯರನ್ನು ಒಳಗೊಂಡಿದೆ. ಗೃಹ ಆಧಾರ್ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡಲು ವರ್ಷಕ್ಕೆ ₹ 270 ಕೋಟಿಯ ಅಗತ್ಯವಿದೆ. ಆದರೆ ಗೋವಾ ಸರ್ಕಾರವು ವರ್ಷಕ್ಕೆ ಕೇವಲ ₹ 140 ಕೋಟಿಯನ್ನು ಮಾತ್ರ ಮೀಸಲಿಟ್ಟಿರುವುದರಿಂದಾಗಿ ಬಹುತೇಕರು ಯೋಜನೆಯಿಂದ ವಂಚಿತರಾಗಿದ್ದಾರೆ' ಎಂದು ಹೇಳಿದರು.

ಟಿಎಂಸಿಯ ಈ ಯೋಜನೆಗೆ ಯೋಜಿತ ಖರ್ಚು ಗೋವಾದ ಒಟ್ಟು ಬಜೆಟ್‌ನ ಶೇ 6 ರಿಂದ 8ರಷ್ಟಿದೆ. ಕೋವಿಡ್-19ನಿಂದಾಗಿ ದೇಶದ ಆರ್ಥಿಕತೆಯು ಕುಗ್ಗಿಸಿದೆ ಎಂಬುದನ್ನು ಇತ್ತೀಚಿನ ಅಧ್ಯಯನಗಳು ಬಹಿರಂಗಪಡಿಸಿದೆ. ಹೀಗಾಗಿ ಆರ್ಥಿಕತೆಯನ್ನು ಚೇತರಿಸಿಕೊಳ್ಳುವಂತೆ ಮಾಡಬೇಕಿದೆ' ಎಂದು ಹೇಳಿದರು.

ಇತ್ತೀಚೆಗಷ್ಟೇ ಗೋವಾಗೆ ಭೇಟಿ ನೀಡಿದ್ದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಅರವಿಂದ ಕೇಜ್ರಿವಾಲ್, 'ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಗೃಹ ಆಧಾರ್ ಯೋಜನೆಯ ಮೊತ್ತವನ್ನು ₹ 1,500 ರಿಂದ ₹ 2,500ಕ್ಕೆ ಹೆಚ್ಚಿಸಲಾಗುವುದು. ಸದ್ಯ ಈ ಯೋಜನೆಯ ಫಲಾನುಭವಿಗಳಲ್ಲದ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೂ ತಿಂಗಳಿಗೆ ₹ 1,000 ವನ್ನು ನೀಡಲಾಗುವುದು' ಎಂದು ಘೋಷಿಸಿದ್ದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉದ್ಯೋಗದಲ್ಲಿ ಶೇ 30ರಷ್ಟು ಮೀಸಲಾತಿ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಸದ್ಯದ ಬಿಜೆಪಿ ಸರ್ಕಾರದ ಸಿದ್ಧಾಂತವು ಮಹಿಳಾ ವಿರೋಧಿಯಾಗಿದೆ ಮತ್ತು ಹೊರಗಿನಿಂದ ಬರುತ್ತಿರುವ ಪಕ್ಷಗಳ ಹಿಂದಿನ ದಾಖಲೆಗಳನ್ನು ಪರಿಶೀಲಿಸಿ' ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT