ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರಾದಲ್ಲಿ ಕಾನೂನು, ಸುವ್ಯವಸ್ಥೆಗೆ ಟಿಎಂಸಿಯಿಂದ ಧಕ್ಕೆ: ಬಿಜೆಪಿ ಆರೋಪ

Last Updated 23 ನವೆಂಬರ್ 2021, 6:17 IST
ಅಕ್ಷರ ಗಾತ್ರ

ಅಗರ್ತಲ:ತೃಣಮೂಲ ಕಾಂಗ್ರೆಸ್ ಪಕ್ಷವು (ಟಿಎಂಸಿ) ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡುತ್ತಿರುವುದಲ್ಲದೆ, ಶಾಂತಿಯಿಂದಿರುವ ತ್ರಿಪುರಾದಲ್ಲಿ ಕಾನೂನು, ಸುವ್ಯವಸ್ಥೆಗೆ ಭಂಗ ತರುತ್ತಿದೆ ಎಂದು ಆಡಳಿತಾರೂಢ ಬಿಜೆಪಿ ಆರೋಪಿಸಿದೆ.

‘ತ್ರಿಪುರಾದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಡಿಸಲು ತೃಣಮೂಲ ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಎರಡೂ ರಾಜ್ಯಗಳ (ತ್ರಿಪುರಾ ಮತ್ತು ಪಶ್ಚಿಮ ಬಂಗಾಳ) ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ನಾಶಮಾಡಿದ್ದಾರೆ’ ಎಂದು ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್ ಹಾಗೂ ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಸುಶಾಂತ ಚೌಧರಿ ಆರೋಪಿಸಿದ್ದಾರೆ.

ಟಿಎಂಸಿ ನಾಯಕರು ತ್ರಿಪುರಾದಲ್ಲಿ ಅನೇಕ ರಾಜಕೀಯ ರ್‍ಯಾಲಿಗಳನ್ನು ನಡೆಸಿದ್ದಾರೆ. ಆದರೂ ರಾಜಕೀಯ ಕಾರ್ಯಕ್ರಮಗಳನ್ನು ನಡೆದಂತೆ ತಡೆಯಲಾಗುತ್ತಿದೆ ಎಂದು ಆರೋಪಿಸುತ್ತಿರುವುದಾಗಿ ಚೌಧರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾವುದೇ ಪಕ್ಷಗಳನ್ನೂ ಪ್ರಚಾರ ಅಭಿಯಾನ ನಡೆಸದಂತೆ ತಡೆಯಬಾರದು ಎಂದು ಈ ತಿಂಗಳ ಆರಂಭದಲ್ಲಿ ಸುಪ್ರೀಂ ಕೋರ್ಟ್ ತ್ರಿಪುರಾ ಪೊಲೀಸರಿಗೆ ಸೂಚಿಸಿತ್ತು. ಟಿಎಂಸಿಯ ರಾಜ್ಯಸಭಾ ಸದಸ್ಯೆ ಸುಷ್ಮಿತಾ ದೇವ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಸೂಚನೆ ನೀಡಿತ್ತು.

‘ಟಿಎಂಸಿಯ ಅನೇಕ ನಾಯಕರು ಶಾರದಾ, ನಾರದಾ ಸೇರಿದಂತೆ ಇತರ ಚಿಟ್‌ಫಂಡ್‌ಗಳ ಫಲಾನುಭವಿಗಳು. ಅವರು ಚಿಟ್‌ಫಂಡ್‌ಗಳಲ್ಲಿ ಗಳಿಸಿದ್ದ ಹಣದೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ತ್ರಿಪುರಾಕ್ಕೆ ಬರುತ್ತಿದ್ದಾರೆ’ ಎಂದು ಭೌಮಿಕ್ ಹೇಳಿದ್ದಾರೆ.

‘ಟಿಎಂಸಿಯದ್ದು ಸ್ಟಂಟ್ ರಾಜಕೀಯ. ರಾಜಕೀಯ ಸಭೆಯಲ್ಲಿ ಟಿಎಂಸಿ ನಾಯಕರು ತ್ರಿಪುರಾ ಮುಖ್ಯಮಂತ್ರಿಗಳ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ಅವಮಾನ ಮಾಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಟಿಎಂಸಿ ಆಡಳಿತ ಇರುವ ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿದೆ. ನೂರಾರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ’ ಎಂದು ಭೌಮಿಕ್ ದೂರಿದ್ದಾರೆ.

ತ್ರಿಪುರಾದಲ್ಲಿ ಇದೇ 25ಕ್ಕೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯಲಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಟಿಎಂಸಿ ನಡುವಣ ಜಟಾಪಟಿ ತಾರಕಕ್ಕೆ ಏರಿದೆ. ಟಿಎಂಸಿ ಯುವ ಘಟಕದ ಅಧ್ಯಕ್ಷೆ ಸಯಾನಿ ಘೋಷ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ಮತ್ತಷ್ಟು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT