ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಆರ್‌ಎಸ್ ಕೇಳಿದ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ: ವಿಧಾನಸಭೆಗೆ ಸ್ಪರ್ಧೆ?

Last Updated 11 ನವೆಂಬರ್ 2022, 1:39 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಸಮಾಜ ಕಲ್ಯಾಣ ಮತ್ತು ಪೌಷ್ಟಿಕ ಆಹಾರ ಕಾರ್ಯಕ್ರಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹಿರಿಯ ಐಎಎಸ್‌ ಅಧಿಕಾರಿ, ಕರ್ನಾಟಕ ಮೂಲದ ಶಂಭು ಕಲ್ಲೋಳಿಕರ ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅವರು, ಬೆಳಗಾವಿ ಜಿಲ್ಲೆಯ ಕ್ಷೇತ್ರವೊಂದರಿಂದ ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ.

ಬೆಳಗಾವಿ ಜಿಲ್ಲೆ ರಾಯಭಾಗ ಮೂಲದ ಇವರು,1991ನೇ ಕೇಡರ್‌ನ ಐಎಎಸ್‌ ಅಧಿಕಾರಿ. ಕೇಂದ್ರ ಮತ್ತು ರಾಜ್ಯದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸರ್ಕಾರದ ಮೂಲಗಳ ಪ್ರಕಾರ, ‘ಸ್ವಯಂನಿವೃತ್ತಿ ಕೋರಿ ಇವರು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲಾಗಿದೆ’. ಈ ಕುರಿತ ಪ್ರತಿಕ್ರಿಯೆಗೆ ಅಧಿಕಾರಿಯನ್ನು ಸಂಪರ್ಕಿಸಲು ಯತ್ನಿಸಲಾಯಿತು. ಆದರೆ, ಅವರು ಲಭ್ಯರಾಗಲಿಲ್ಲ.

ಮೂಲಗಳ ಪ್ರಕಾರ, ಕಲ್ಲೋಳಿಕರ ಅವರು ಕಾಂಗ್ರೆಸ್‌ ಪಕ್ಷದ ಕರ್ನಾಟಕದ ಮುಖಂಡರ ಜೊತೆಗೆ ಹಲವು ತಿಂಗಳಿಂದ ಸಂಪರ್ಕದಲ್ಲಿದ್ದಾರೆ. ಕರ್ತವ್ಯದಿಂದ ಬಿಡುಗಡೆ ಆಗುತ್ತಿದ್ದಂತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದು ನಿಶ್ಚಿತವಾಗಿದೆ.

‘ಅವರು ಬೆಳಗಾವಿ ಜಿಲ್ಲೆ ಕ್ಷೇತ್ರವೊಂದರಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ಶೀಘ್ರವೇ ಪಕ್ಷಕ್ಕೆ ಸೇರುವರು’ ಎಂದು ಕಾಂಗ್ರೆಸ್‌ ಪಕ್ಷದ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದು, ಮತ್ತೊಬ್ಬ ಮುಖಂಡರೂ ಈ ವಿಷಯವನ್ನು ದೃಢಪಡಿಸಿದ್ದಾರೆ.

ರಾಜಕಾರಣ ಪ್ರವೇಶಿಸಲು ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡುತ್ತಿರುವ ತಮಿಳುನಾಡಿನ ಮೂರನೇ ಐಎಎಸ್‌ ಅಧಿಕಾರಿ ಇವರು. ಈಹಿಂದೆ 2020ರಲ್ಲಿ ವಿಆರ್‌ಎಸ್‌ ಪಡೆದಿದ್ದ ಸಂತೋಷ್ ಬಾಬು ಅವರು ಕಮಲಹಾಸನ್‌ ನೇತೃತ್ವದ ಮಕ್ಕಳ್ ನೀಧಿ ಮಯ್ಯಂಗೆ (ಎಂಎನ್ಎಂ) ಸೇರಿದ್ದು, ಚೆನ್ನೈನ ವೇಲಚೆರಿ ಕ್ಷೇತ್ರದಿಂದ ಸ್ಪರ್ಧಿಸಿ, ಸೋತಿದ್ದರು. ಇದೇ ವರ್ಷದ ಆರಂಭದಲ್ಲಿ ಜಗಮೋಹನ್‌ ಸಿಂಗ್ ರಾಜು ಅವರು ಸ್ವಯಂ ನಿವೃತ್ತಿ ಪಡೆದಿದ್ದು, ಅಮೃತಸರ ಪೂರ್ವ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದ್ದರು.

ಐಎಎಸ್ ಅಧಿಕಾರಿಯಾಗಿ ಪಶ್ಚಿಮ ಬಂಗಾಳದಲ್ಲಿ ಸೇವೆಯನ್ನು ಆರಂಭಿಸಿದ್ದ ಕಲ್ಲೋಳಿಕರ ಅವರು, ತಮಿಳುನಾಡಿನಲ್ಲಿ ಪುಡುಕ್ಕೊಟ್ಟಾಯಿ ಮತ್ತು ತಿರುವರೂರ್ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿದ್ದರು. ಮೀನುಗಾರಿಕೆ ಇಲಾಖೆ ಆಯುಕ್ತರು, ತಮಿಳುನಾಡು ಏಡ್ಸ್‌ ನಿಯಂತ್ರಣ ಸೊಸೈಟಿಯ ಯೋಜನಾ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಮತ್ತು ಐಪಿಎಸ್‌ ಅಧಿಕಾರಿಯಾಗಿದ್ದ ಕೆ.ಅಣ್ಣಾಮಲೈ ಅವರು ಈ ಹಿಂದೆ ಸ್ವಯಂ ನಿವೃತ್ತಿ ಪಡೆದ ಬಳಿಕ ತಮಿಳುನಾಡಿನಲ್ಲಿ ಈಗ ರಾಜಕಾರಣಿಗಳಾಗಿದ್ದಾರೆ. ಸೆಂಥಿಲ್ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೆ, ಅಣ್ಣಾಮಲೈ ಅವರು ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT