ಸೋಮವಾರ, ಆಗಸ್ಟ್ 8, 2022
22 °C

ಮಹಿಳೆಯರನ್ನು ಅರ್ಚಕರನ್ನಾಗಿ ನೇಮಿಸುವ ತಮಿಳುನಾಡು ಸರ್ಕಾರದ ನಡೆಗೆ ಪರ–ವಿರೋಧ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಮಹಿಳೆಯರನ್ನು ಅರ್ಚಕರನ್ನಾಗಿ ನೇಮಿಸುವ ತಮಿಳುನಾಡು ಸರ್ಕಾರದ ಘೋಷಣೆಗೆ ಪರ–ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ.

ನಿಗದಿತ ತರಬೇತಿಯ ಬಳಿಕ ಮಹಿಳೆಯರನ್ನು ದೇವಾಲಯದ ಅರ್ಚಕರನ್ನಾಗಿ ನೇಮಕ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಅಲ್ಲಿನ ಧಾರ್ಮಿಕ ದತ್ತಿ ಇಲಾಖೆ ಸಚಿವ ಪಿ.ಕೆ ಶೇಖರ್‌ ಬಾಬು ಹೇಳಿದ್ದಾರೆ.

ಸರ್ಕಾರದ ನಿರ್ಧಾರವನ್ನು ಹಲವರು ಸ್ವಾಗತಿಸಿದರೆ, ಇನ್ನು ಕೆಲವರು ವಿರೋಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಈ ವಿಚಾರವಾಗಿ ಎರಡು ಭಿನ್ನ ಅಭಿಪ್ರಾಯಗಳಿಂದ ಆವರಿಸಿಕೊಂಡಿವೆ.

‘ಪ್ರಾಚೀನ ಕಾಲದಿಂದಲೂ ಮಹಿಳೆಯರು ‘ಅಗಮಾ ಶಾಸ್ತ್ರದಲ್ಲಿ’ ಪರಿಣತಿ ಹೊಂದಿದ್ದಾರೆ. ಮಹಿಳೆಯರು ಈಗಾಗಲೇ ಮೇಲ್‌ಮರುವತ್ತೂರಿನಲ್ಲಿರುವ ಆದಿಪರಾಶಕ್ತಿ ದೇವಾಲಯಗಳಲ್ಲಿ ಪೂಜೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆಂಡಾಳ್‌ ಪಸುರಮ್‌ನಲ್ಲಿ ಪಂಚರಾತ್ರ ಆಗಮ ಆರಾಧನೆಯನ್ನು ಯಾರು ಬೇಕಾದರೂ ನೋಡಬಹುದು,‘ ಎಂದು ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಎಲ್ ಮುರುಗನ್ ಹೇಳಿದ್ದಾರೆ.

‘ಅಗಮ ಶಾಸ್ತ್ರದ ಪೂಜೆಗೆ ಸಂಬಂಧಿಸಿದಂತೆ ನಿಬಂಧನೆಗಳಿವೆ. ದೇವಾಲಯಗಳಲ್ಲಿನ ಆಚರಣೆಗಳು, ರಚನೆ, ದೇವಾಲಯಗಳ ನಿರ್ಮಾಣ ಮತ್ತು ಪಂಚರಾತ್ರಗಳು ಕೇವಲ ಮಾರ್ಗಸೂಚಿಗಳಲ್ಲದೇ ಅವುಗಳು ಒಂದು ರೀತಿ ಶಾಲೆಗಳಂತೆ,‘ ಎಂದು ಅವರು ಹೇಳಿದ್ದಾರೆ.

‘ಎಲ್ಲಾ ಸಮುದಾಯದ ಜನರನ್ನು ಅರ್ಚಕರನ್ನಾಗಿ ನೇಮಿಸುವ ಕ್ರಮವನ್ನು ಬಿಜೆಪಿ ಸ್ವಾಗತಿಸುತ್ತದೆ,‘ ಎಂದಿರುವ ಮುರುಗನ್‌, ವಿವಿಧ ಜಾತಿಗಳ ಜನರು ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿರುವ ಹಲವು ದೇವಾಲಯಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಮಹಿಳೆಯರನ್ನು ಅರ್ಚಕರನ್ನಾಗಿ ನೇಮಿಸುವ ಈ ಕಲ್ಪನೆಯೂ ಹೊಸದೇನೂ ಅಲ್ಲ. ಪ್ರಾಚೀನ ಕಾಲದಿಂದಲೂ ನಮ್ಮ ತಮಿಳು ಸಂಸ್ಕೃತಿಯಲ್ಲಿ, ನಮ್ಮ ದೇವಾಲಯಗಳಲ್ಲಿ ವಿವಿಧ ಜಾತಿಯ ಜನರು ಮತ್ತು ಮಹಿಳೆಯರು ಅರ್ಚಕರಾಗಿದ್ದಾರೆ ಎಂದು ನಾವು ಜನರಿಗೆ ನೆನಪಿಸಲು ಬಯಸುತ್ತೇವೆ,‘ ಎಂದು ಹೇಳಿದ್ದಾರೆ. .

‘ಹಲವು ಮಹಿಳೆಯರು ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಮತ್ತು ಅಗಮ ಶಾಸ್ತ್ರದ ತರಬೇತಿಯ ನಂತರ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗುತ್ತದೆ,‘ ಎಂದು ಸಚಿವ ಬಾಬು ತಿಳಿಸಿದ್ದಾರೆ.

ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆ, ಶಾಸಕಿ ವಾನತಿ ಶ್ರೀನಿವಾಸನ್‌ ಸ್ವಾಗತಿಸಿದ್ದಾರೆ. ‘ಭಕ್ತರು, ದೇವಾಲಯದ ಆಡಳಿತ ಮಂಡಳಿಯನ್ನು ವಿಶ್ವಾಸಕ್ಕೆ ಪಡೆದು ರಚನಾತ್ಮಕವಾಗಿ ಇದನ್ನು ಜಾರಿಗೆ ತರಬೇಕು. ಮಹಿಳೆಯರಿಗೆ ಸೂಕ್ತ ತರಬೇತಿ ನೀಡಬೇಕು,‘ ಎಂದು ಅವರು ಹೇಳಿದ್ದಾರೆ.

ಅರ್ಚಕರನ್ನಾಗಿ ವಿವಿಧ ಜಾತಿಯ ಜನರನ್ನು ನೇಮಕ ಮಾಡುವ ಕಲ್ಪನೆಯನ್ನು ಸ್ವಾಗತಿಸಿದ್ದ ಹಲವು ಹಿಂದುಪರ ಸಂಘಟನೆಗಳು ಮಾತ್ರ ಮಹಿಳೆಯರನ್ನು ಈ ಸ್ಥಾನಕ್ಕೆ ನೇಮಿಸುವುದನ್ನು ವಿರೋಧಿಸಿವೆ. ಇದು ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದು ಹೇಳಿವೆ.

‘ಒಂದು ವೇಳೆ ಈಗ ಮಹಿಳೆಯರನ್ನು ದೇವಾಲಯದ ಅರ್ಚಕರನ್ನಾಗಿ ನೇಮಿಸಿಕೊಂಡರೆ ಮುಂದೊಂದು ದಿನ ಶಬರಿಮಲೆಗೆ ಪ್ರವೇಶ ನೀಡುವಂತೆ ಕೇಳುತ್ತಾರೆ. ಇದಕ್ಕೆ ಕೊನೆಯೇ ಇಲ್ಲವಾಗುತ್ತದೆ,‘ ಎಂದು ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡಿದ್ದ, ಹಿಂದೂ ತಮಿಳರ್‌ ಕಚ್ಚಿಯ ಸಂಸ್ಥಾಪಕ ರವಿಕುಮಾರ್‌ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಕೆಲವು ದೇವಾಲಯಗಳಲ್ಲಿ ಮಹಿಳಾ ಅರ್ಚಕರು ಕೆಲಸ ಮಾಡುತ್ತಿದ್ದಾರಲ್ಲ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ ಅವು ದೇವಾಲಯಗಳಲ್ಲ. ಆಗಮ ವಿಧಾನದಲ್ಲಿ ಆ ದೇವಾಲಯಗಳು ನಡೆಯುತ್ತಿಲ್ಲ,‘ ಎಂದು ಪ್ರತಿಪಾದಿಸಿದರು.

ಹಲವು ದೇವಾಲಯಗಳ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿರುವ ಟಿ. ಆರ್. ಕನ್ನಜಿ ಎಂಬುವವರು ಈ ಕುರಿತು ಪ್ರತಿಕ್ರಿಯಿಸಿದ್ದು, ‘ಮಹಿಳೆಯರನ್ನು ಅರ್ಚಕರನ್ನಾಗಿ ಮಾಡುವುದು ಅಪ್ರಾಯೋಗಿಕ. ಸ್ವತಃ ಮಹಿಳೆಯರೇ ಅರ್ಚಕರಾಗಲು ಇಷ್ಟಪಡುವುದಿಲ್ಲ,‘ ಎಂದಿದ್ದಾರೆ.

ಮಹಿಳೆಯರನ್ನು ಅರ್ಚಕರನ್ನಾಗಿ ನೇಮಿಸುವ ತಮಿಳುನಾಡು ಸರ್ಕಾರದ ನಿರ್ಧಾರವು ಸಾಮಾಜಿಕ ಮಾಧ್ಯಮಗಳಲ್ಲೂ ಪರ ವಿರೋಧದ ಚರ್ಚೆ ಹುಟ್ಟು ಹಾಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು