ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಶಾ ರವಿ ಟೂಲ್‌ಕಿಟ್‌ ಪ್ರಕರಣ: ಮಾಧ್ಯಮಗಳ ವರದಿ ತೆಗೆಸಲು ಹೈಕೋರ್ಟ್ ನಕಾರ

ತನಿಖೆಗೆ ಅಡ್ಡಿಯಾಗುವ ವರದಿ ಬೇಡ
Last Updated 19 ಫೆಬ್ರುವರಿ 2021, 8:25 IST
ಅಕ್ಷರ ಗಾತ್ರ

ನವದೆಹಲಿ: ರೈತರ ಪ್ರತಿಭಟನೆಯನ್ನು ಬೆಂಬಲಿಸುವ ‘ಟೂಲ್‌ಕಿಟ್‌’ ಹಂಚಿಕೊಂಡ ಆರೋಪ ಎದುರಿಸುತ್ತಿರುವ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಪ್ರಕರಣದಲ್ಲಿ ಕೆಲ ಮಾಧ್ಯಮ ವರದಿಗಳು ‘ಪ್ರಚೋದನಾತ್ಮಕ ಮತ್ತು ಪೂರ್ವಾಗ್ರಹಪೀಡಿತ’ ವಾಗಿವೆ ಎಂದು ದೆಹಲಿ ಹೈಕೋರ್ಟ್‌ ಶುಕ್ರವಾರ ಹೇಳಿದ್ದು, ಈ ಹಂತದಲ್ಲಿ ಅಂತಹ ಯಾವುದೇ ವಿಷಯವನ್ನು ತೆಗೆದುಹಾಕುವಂತೆ ಆದೇಶಿಸಲು ನ್ಯಾಯಾಲಯ ನಿರಾಕರಿಸಿದೆ.

ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್‌ ಅವರು, ಇಂತಹ ಸುದ್ದಿ ಮತ್ತು ದೆಹಲಿ ಪೊಲೀಸರ ಟ್ವೀಟ್‌ಗಳನ್ನು ತೆಗೆದುಹಾಕಬೇಕೆಂಬ ಮಧ್ಯಂತರ ಮನವಿಯನ್ನು ನಂತರದ ಹಂತದಲ್ಲಿ ಪರಿಗಣಿಸಲಾಗುವುದು ಎಂದು ಹೇಳಿದರು.

ಆದಾಗ್ಯೂ, ತನಿಖೆಯ ಮೇಲೆ ಪರಿಣಾಮ ಬೀರಬಹುದಾದ ಸುದ್ದಿ ಪ್ರಸಾರವಾಗದಂತೆ ನೋಡಿಕೊಳ್ಳಲು ನ್ಯಾಯಾಲಯ ಮಾಧ್ಯಮ ಸಂಸ್ಥೆಗಳಿಗೆ ಸೂಚಿಸಿತು. ಅಲ್ಲದೆ, ‘ತನಿಖೆ ವಿವರಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿಲ್ಲ ಮತ್ತು ಮಾಡಲು ಉದ್ದೇಶಿಸಿಲ್ಲ’ ಎಂಬ ಹೇಳಿಕೆಗೆ ಬದ್ಧರಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ದೆಹಲಿ ಪೊಲೀಸರಿಗೂ ಹೈಕೋರ್ಟ್‌ ನಿರ್ದೇಶನ ನೀಡಿತು.

ಪೊಲೀಸರು 2010ರ ಕಚೇರಿ ಜ್ಞಾಪಕ ಪತ್ರಕ್ಕೆ ಅನುಗುಣವಾಗಿ ಯಾವುದೇ ಪ್ರಕರಣಗಳ ಕುರಿತು ಮಾಧ್ಯಮ ಪ್ರಸಾರಕ್ಕೆ ಪತ್ರಿಕಾಗೋಷ್ಠಿ ನಡೆಸಬಹುದು ಎಂದೂ ನ್ಯಾಯಾಲಯ ತಿಳಿಸಿತು.

ಆದರೆ, ಮಾಧ್ಯಮ ಸಂಸ್ಥೆಗಳು ಮೂಲಗಳಿಂದ ಪಡೆದ ಮಾಹಿತಿಯು ಅಧಿಕೃತವಾದದ್ದು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಹೀಗೆ ಪರಿಶೀಲಿಸಿದ ವಿಷಯವನ್ನು ಮಾತ್ರವೇ ಪ್ರಸಾರ ಮಾಡಬೇಕು ಎಂದು ಸೂಚಿಸಿದ ಹೈಕೋರ್ಟ್‌, ತನಿಖೆಗೆ ಅಡ್ಡಿಯಾಗುವ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ಹೇಳಿತು.

ತನ್ನ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ತನಿಖಾ ದಾಖಲಾತಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಕ್ಕೆ ತಡೆ ನೀಡಬೇಕು ಎಂದು ದಿಶಾ ರವಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ ಈ ಸೂಚನೆಗಳನ್ನು ನೀಡಿತು.

ತನ್ನ ಮತ್ತು ಮೂರನೇ ವ್ಯಕ್ತಿಗಳ ನಡುವೆ ನಡೆದಿರುವ ವಾಟ್ಸ್‌ಆ್ಯಪ್‌ ಸಂದೇಶ ಸೇರಿದಂತೆ ಯಾವುದೇ ಖಾಸಗಿ ಚಾಟ್‌ಗಳ ವಿಷಯಗಳನ್ನು ಪ್ರಕಟಿಸದಂತೆ ಮಾಧ್ಯಮಗಳ ಮೇಲೆ ತಡೆ ಹೇರುವಂತೆಯೂ ದಿಶಾ ಅರ್ಜಿಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT