ಗುರುವಾರ , ಮಾರ್ಚ್ 4, 2021
23 °C
ಹೊಣೆಗಾರಿಕೆಯ ಪತ್ರಿಕೋದ್ಯಮಕ್ಕೆ ಹೈಕೋರ್ಟ್‌ ಸೂಚನೆ

‘ಟೂಲ್‌ಕಿಟ್‌: ದಿಶಾ ಕುರಿತ ವರದಿ ಪೂರ್ವಗ್ರಹಪೀಡಿತ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರೈತರ ಹೋರಾಟಕ್ಕೆ ಬೆಂಬಲವಾಗಿ ಟೂಲ್‌ಕಿಟ್‌ ರಚಿಸಿದ ಪ್ರಕರಣದ ಆರೋಪಿ, ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಗ್ಗೆ ಕೆಲವು ಸುದ್ದಿವಾಹಿನಿಗಳು ಪ್ರಸಾರ ಮಾಡಿದ ವರದಿಯು ‘ಪ್ರಚೋದನಕಾರಿ ಮತ್ತು ಪೂರ್ವಗ್ರಹಪೀಡಿತ’ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. 

ತನಿಖೆಗೆ ಸಂಬಂಧಿಸಿದ ಸೋರಿಕೆಯಾದ ಮಾಹಿತಿಯನ್ನು ಪ್ರಸಾರ ಮಾಡಬಾರದು ಎಂದು ಮಾಧ್ಯಮ ಸಂಸ್ಥೆಗಳಿಗೆ ಪೀಠವು ಎಚ್ಚರಿಕೆ ನೀಡಿದೆ. ತನಿಖೆಯ ಭಾಗವಾಗಿ ಸಂಗ್ರಹಿಸಲಾದ ಮಾಹಿತಿಯನ್ನು ಸೋರಿಕೆ ಮಾಡಿಲ್ಲ ಮತ್ತು ಮಾಡುವ ಉದ್ದೇಶವೂ ಇಲ್ಲ ಎಂದು ಸಲ್ಲಿಸಿದ ಪ್ರಮಾಣಪತ್ರಕ್ಕೆ ದೆಹಲಿ ಪೊಲೀಸರು ಬದ್ಧವಾಗಿ ನಡೆದುಕೊಳ್ಳಬೇಕು ಎಂದು ಪೀಠವು ಸೂಚನೆ ನೀಡಿದೆ.

ಇಂತಹ ವರದಿ ಮತ್ತು ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಮಾಡಿರುವ ಟ್ವೀಟ್‌ಗಳನ್ನು ಅಳಿಸಿ ಹಾಕಬೇಕು ಎಂದು ದಿಶಾ ಅವರು ಮಾಡಿದ ಮನವಿಯನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌ ಅವರ ಪೀಠವು ಶುಕ್ರವಾರ ಹೇಳಿದೆ. 

ಪ್ರಚೋದನಕಾರಿ ವರದಿಗಳು ಪ್ರಕಟವಾಗದಂತೆ ನೋಡಿಕೊಳ್ಳುವುದರಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಮಾಧ್ಯಮ ಸಂಸ್ಥೆಗಳು ಹೊಣೆಗಾರಿಕೆಯ ಪತ್ರಿಕೋದ್ಯಮಕ್ಕೆ ಬದ್ಧವಾಗಿರಬೇಕು. ಪೊಲೀಸರು ನೀಡಿದ ಮಾಹಿತಿ ಮತ್ತು ನ್ಯಾಯಾಲಯದ ಕಲಾಪಗಳ ವರದಿಯನ್ನು ಪ್ರಕಟಿಸಬಹುದು. ಆದರೆ, ಸೋರಿಕೆಯಾದ ದಾಖಲೆಗಳ ಆಧಾರದಲ್ಲಿ ವರದಿ ಪ್ರಕಟಿಸಬಾರದು ಎಂದು ನ್ಯಾಯಾಲಯವು ಹೇಳಿದೆ. 

ಪ್ರಕರಣದ ವಿಚಾರದಲ್ಲಿ ಪೊಲೀಸರು ಮಾಧ್ಯಮಕ್ಕೆ ಮಾಹಿತಿ ನೀಡುವುದಕ್ಕೆ ಪೀಠವು ತಡೆ ಕೊಟ್ಟಿಲ್ಲ. ಆದರೆ, ಮಾಧ್ಯಮಕ್ಕೆ ಮಾಹಿತಿ ನೀಡುವಾಗ ಈಗ ಚಾಲ್ತಿಯಲ್ಲಿರುವ ನಿಯಮಗಳನ್ನು ಅನುಸರಿಸಬೇಕು ಎಂದು ಹೇಳಿದೆ. 

ಮೂಲಗಳಿಂದ ಪಡೆದ ಮಾಹಿತಿಯು ನೈಜವೇ ಎಂಬುದನ್ನು ಪರಿಶೀಲಿಸಬೇಕು ಮತ್ತು ಪರಿಶೀಲಿಸಿ ದೃಢಪಟ್ಟ ಮಾಹಿತಿಯನ್ನು ಮಾತ್ರ ಪ್ರಸಾರ ಮಾಡಬೇಕು. ತನಿಖೆಗೆ ತೊಂದರೆಯಾಗುವ ಮಾಹಿತಿಯನ್ನು ಪ್ರಕಟಿಸಬಾರದು ಎಂದು ಮಾಧ್ಯಮ ಸಂಸ್ಥೆಗಳಿಗೆ ಸೂಚಿಸಲಾಗಿದೆ. 

ತಮ್ಮ ಖಾಸಗಿ ವಾಟ್ಸ್‌ಆ್ಯಪ್‌ ಚಾಟ್‌ಗಳನ್ನು ಪೊಲೀಸರು ಮಾಧ್ಯಮಕ್ಕೆ ಸೋರಿಕೆ ಮಾಡಿದ್ದಾರೆ. ಅಂತಹ ಮಾಹಿತಿ ಸೋರಿಕೆ ಮಾಡದಂತೆ ಪೊಲೀಸರಿಗೆ ಸೂಚನೆ ಕೊಡಬೇಕು ಮತ್ತು ಈ ವರದಿಗಳನ್ನು ಅಳಿಸಿ ಹಾಕಲು ನಿರ್ದೇಶನ ನೀಡಬೇಕು ಎಂದು ಕೋರಿ ದಿಶಾ ಅವರು ಅರ್ಜಿ ಸಲ್ಲಿಸಿದ್ದರು. ಟೈಮ್ಸ್‌ ನೌ, ನ್ಯೂಸ್‌ 18 ಮತ್ತು ಇಂಡಿಯಾ ಟುಡೆ ಸುದ್ದಿವಾಹಿನಿಗಳನ್ನು ದಿಶಾ ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ದೆಹಲಿ ಪೊಲೀಸರ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ಹಾಜರಿದ್ದರು. ತನಿಖಾ ಸಂಸ್ಥೆಯ ಕೆಲವು ಅಧಿಕಾರಿಗಳು ದಾಖಲೆಗಳನ್ನು ಸೋರಿಕೆ ಮಾಡಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಅವರು ಹೇಳಿದರು. 

ತಮ್ಮ ಕಕ್ಷಿದಾರರು ಪ್ರಕಟಿಸಿದ ವರದಿಯ ಮೂಲ ದೆಹಲಿ ಪೊಲೀಸರು ಮತ್ತು ಅವರ ಟ್ವೀಟ್‌ಗಳು ಎಂದು ಮಾಧ್ಯಮ ಸಂಸ್ಥೆಯೊಂದರ ಪರವಾಗಿ ವಾದಿಸಿದ ವಕೀಲ ಮೃಣಾಲ್‌ ಭಾರ್ತಿ ತಿಳಿಸಿದರು.

3 ದಿನ ನ್ಯಾಯಾಂಗ ಬಂಧನ
ಕಳೆದ ಶನಿವಾರ ದೆಹಲಿ ಪೊಲೀಸರು ಬಂಧಿಸಿದ ದಿಶಾ ರವಿ ಅವರನ್ನು ಐದು ದಿನಗಳ ಪೊಲೀಸ್‌ ಕಸ್ಟಡಿಯ ಬಳಿಕ ಮೂರು ದಿನಗಳ ನ್ಯಾಯಾಂಗ ಬಂಧನಕ್ಕೆ ದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ನ್ಯಾಯಾಲಯವು ಶುಕ್ರವಾರ ಒಪ್ಪಿಸಿದೆ. 

ದಿಶಾ ಅವರ ಕಸ್ಟಡಿ ತನಿಖೆ ಸದ್ಯಕ್ಕೆ ಅಗತ್ಯ ಇಲ್ಲ. ಸಹ ಆರೋಪಿಗಳಾದ ಶಾಂತನು ಮುಲುಕ್‌ ಮತ್ತು ನಿಕಿತಾ ಜೇಕಬ್‌ ಅವರು ತನಿಖೆಗಾಗಿ ಹಾಜರಾದಾಗ ದಿಶಾ ಅವರನ್ನು ತನಿಖೆಗೆ ಕರೆಸಿಕೊಳ್ಳಬೇಕಾಗಬಹುದು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಈವರೆಗಿನ ತನಿಖೆಯಲ್ಲಿ ದಿಶಾ ಅವರು ಹಾರಿಕೆಯ ಉತ್ತರ ಕೊಟ್ಟಿದ್ದಾರೆ. ತಪ್ಪೆಲ್ಲವೂ ಸಹ ಆರೋಪಿಗಳದ್ದು ಎಂದು ಜಾರಿಕೊಂಡಿದ್ದಾರೆ. ಶಾಂತನು ಮತ್ತು ನಿಕಿತಾ ಅವರಿಗೆ ಸೋಮವಾರ ತನಿಖೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ದಿಶಾ ಅವರ ಜಾಮೀನು ಅರ್ಜಿಯ ವಿಚಾರಣೆ ಶನಿವಾರ ನಡೆಯಲಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು