ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಕ್ರಮ, ತಂತ್ರಜ್ಞಾನ ಬಳಕೆ: ಘೇಂಡಾಮೃಗ ಬೇಟೆ ಶೂನ್ಯ

Last Updated 2 ಜನವರಿ 2023, 15:42 IST
ಅಕ್ಷರ ಗಾತ್ರ

ಗುವಾಹಟಿ: ಶಸ್ತ್ರಸಜ್ಜಿತ ಕಮಾಂಡೊಗಳು, ಅರಣ್ಯ ಸಿಬ್ಬಂದಿ ಮತ್ತು ತಂತ್ರಜ್ಞಾನದ ಬಳಕೆಯ ಕಠಿಣ ಕ್ರಮದಿಂದ 2022ರಲ್ಲಿ ಅಸ್ಸಾಂ ಒಂದು ಕೊಂಬಿನ ಘೇಂಡಾಮೃಗಗಳ (ಖಡ್ಗಮೃಗ) ಶೂನ್ಯ ಬೇಟೆಯ ಗುರಿ ಸಾಧಿಸಲು ಸಹಾಯ ಮಾಡಿದೆ. ಇದು ಎರಡು ದಶಕದ ನಂತರ ರಾಜ್ಯ ಸಾಧಿಸಿದ ಸಾಧನೆಯಾಗಿದೆ.

ಸುಮಾರು 2,900 ಘೇಂಡಾಮೃಗಗಳನ್ನು (2018ರ ಜನಗಣತಿ) ಹೊಂದಿರುವ ಅಸ್ಸಾಂ, ಒಂದು-ಕೊಂಬಿನ ಘೇಂಡಾಮೃಗಗಳ ಅತಿದೊಡ್ಡ ಆವಾಸಸ್ಥಾನವಾಗಿದೆ. ಇದು ದುರ್ಬಲ ವನ್ಯಜೀವಿ ಪ್ರಭೇದವಾಗಿದೆ. ಸ್ಟೇಟ್‌ ಆಫ್‌ ದಿ ರೈನೋಸ್ ವರದಿ 2022ರ ಪ್ರಕಾರ ಭಾರತ, ನೇಪಾಳ ಮತ್ತು ಭೂತಾನ್‌ನಲ್ಲಿ ಮಾತ್ರ ಕಂಡುಬರುವ ಒಂದು ಕೊಂಬಿನ ಘೇಂಡಾಮೃಗಗಳ ಜನಸಂಖ್ಯೆ 4,012 ತಲುಪಿದೆ.

ಆದರೆ, ಅಸ್ಸಾಂನ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಬೇಟೆಯಾಡುವುದು ಉಳಿದಿದೆ. ವನ್ಯಜೀವಿ ಭಾಗಗಳ ಕಳ್ಳಸಾಗಣೆದಾರರ ಅಂತರರಾಷ್ಟ್ರೀಯ ತಂಡದೊಂದಿಗೆ ಸಂಪರ್ಕ ಹೊಂದಿರುವ ಕಳ್ಳ ಬೇಟೆಗಾರರು 2000 ರಿಂದ ಕನಿಷ್ಠ 191 ಘೇಂಡಾಮೃಗಗಳನ್ನು ಕೊಂದಿದ್ದಾರೆ. 2014 ಮತ್ತು 2015ರಲ್ಲಿ ತಲಾ 17 ಬೇಟೆಯಾಡಿದ್ದಾರೆ. 2016ರಲ್ಲಿ ಕನಿಷ್ಠ 18 ಘೇಂಡಾಮೃಗನ್ನು ಕೊಲ್ಲಲಾಗಿದೆ. ನಂತರ ಬೇಟೆಯಾಡುವ ಸಂಖ್ಯೆ ಕಡಿಮೆಯಾಯಿತು. 2021ರಲ್ಲಿ ಕೇವಲ ಒಂದು ಘೇಂಡಾಮೃಗ ಕೊಲ್ಲಲಾಯಿತು.

ರಾಜ್ಯ ಸರ್ಕಾರ 2021ರ ಜೂನ್‌ನಲ್ಲಿ ವಿಶೇಷ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಜಿ.ಪಿ. ಸಿಂಗ್ ನೇತೃತ್ವದಲ್ಲಿ 22 ಸದಸ್ಯರ ಕಾರ್ಯಪಡೆ ರಚಿಸಿತು ಮತ್ತು ಕಳ್ಳ ಬೇಟೆಗಾರರ ವಿರುದ್ಧ ಕಠಿಣ ಕ್ರಮಕ್ಕಾಗಿ ಸಶಸ್ತ್ರ ಕಮಾಂಡೋಗಳನ್ನು ನಿಯೋಜಿಸಿತು.

ಕಾರ್ಯಪಡೆಯು ಕನಿಷ್ಠ 11 ಜಿಲ್ಲೆಗಳ ಹಿರಿಯ ಅರಣ್ಯ ಅಧಿಕಾರಿಗಳು ಮತ್ತು ಎಸ್‌.ಪಿಗಳು ಮತ್ತು ವಿಭಾಗೀಯ ಅರಣ್ಯಾಧಿಕಾರಿಗಳನ್ನು (ಆರು ವನ್ಯಜೀವಿ ವಿಭಾಗಗಳು) ಒಳಗೊಂಡಿತ್ತು. ಪೊಲೀಸ್ ಮತ್ತು ರಾಜ್ಯ ಅರಣ್ಯ ಸಿಬ್ಬಂದಿಯ ಸಶಸ್ತ್ರ ಕಮಾಂಡೋಗಳನ್ನು ಘೇಂಡಾಮೃಗಗಳ ಆವಾಸಸ್ಥಾನಗಳ (ಕಾಜಿರಂಗ, ಮಾನಸ್, ಒರಾಂಗ್, ಪೊಬಿಟೋರಾ) ಪ್ರಮುಖ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದು, ಕಳ್ಳ ಬೇಟೆಗಾರರ ಚಲನವಲನವನ್ನು ಪತ್ತೆಹಚ್ಚಲು ಶ್ವಾನ ದಳಗಳನ್ನು ಸಹ ಬಳಸಲಾಗಿದೆ ಎಂದು ಸಿಂಗ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಪಡೆಯನ್ನು ರಚಿಸಿದಾಗಿನಿಂದ ಕನಿಷ್ಠ ನಾಲ್ವರು ಕಳ್ಳ ಬೇಟೆಗಾರರು ಕೊಲ್ಲಲ್ಪಟ್ಟಿದ್ದು, 58 ಮಂದಿಯನ್ನು ಬಂಧಿಸಲಾಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT