ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ ಅನುದಾನ ಬಳಸದ ಕರ್ನಾಟಕ: ಲೋಕಸಭೆಯಲ್ಲಿ ಆರೋಪ

Last Updated 22 ಮಾರ್ಚ್ 2021, 20:57 IST
ಅಕ್ಷರ ಗಾತ್ರ

ನವದೆಹಲಿ: ಹಂಪಿ ಸೇರಿದಂತೆ ಕರ್ನಾಟಕದ ವಿವಿಧೆಡೆ ಇರುವ ಐತಿಹಾಸಿಕ, ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಮಂಜೂರು ಮಾಡಿರುವ ಅನುದಾನವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಕೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.

‘ರಾಜ್ಯದಲ್ಲಿನ ಐತಿಹಾಸಿಕ ಸ್ಮಾರಕಗಳಿರುವ ಪಾರಂಪರಿಕ ತಾಣಗಳನ್ನು ಪ್ರವಾಸಿ ಕ್ಷೇತ್ರಗಳನ್ನಾಗಿ ಅಭಿವೃದ್ಧಿಪಡಿಸಲು ಅನುದಾನ ನೀಡದೆ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿರುವುದು ಏಕೆ’ ಎಂದು ಸೋಮವಾರ ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಹಾಸನದ ಜೆಡಿಎಸ್‌ ಸದಸ್ಯ ಪ್ರಜ್ವಲ್‌ ರೇವಣ್ಣ ಕೇಳಿದ ಪ್ರಶ್ನೆಗೆ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಪ್ರಹ್ಲಾದ್‌ಸಿಂಗ್‌ ಪಟೇಲ್‌ ಉತ್ತರ ನೀಡಿದರು.

‘ರಾಜ್ಯದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ವಿಜಯಪುರ ಮತ್ತಿತರ ಪ್ರಸಿದ್ಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಬಿಡಿಗಾಸನ್ನೂ ನೀಡಲಾಗಿಲ್ಲ. ಹಂಪಿ ಹೊರತುಪಡಿಸಿ ಇತರ ತಾಣಗಳನ್ನು ನಿರ್ಲಕ್ಷಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಗ್ರಾಮೀಣ ಕರಕುಶಲ ಕಲೆಗೂ ಪ್ರೋತ್ಸಾಹ ದೊರೆಯಲಿದೆ. ಉದ್ಯೋಗ ಸೃಷ್ಟಿಯೂ ಆಗಲಿದೆ. ಆದರೂ ಕೇಂದ್ರ ಗಮನ ಹರಿಸದಿರುವುದು ಏಕೆ’ ಎಂದು ಪ್ರಜ್ವಲ್‌ ಪೂರಕ ಪ್ರಶ್ನೆ ಕೇಳಿದರು.

ಅಲ್ಲದೆ, ಇದುವರೆಗೆ ಪ್ರವಾಸೋದ್ಯಮ ತಾಣಗಳಲ್ಲಿ ಉತ್ಸವ, ಪ್ರದರ್ಶನಕ್ಕಾಗಿ ಹಣಕಾಸಿನ ನೆರವು ನೀಡಿರುವ ಕೇಂದ್ರವು ನವೀಕರಣ, ಮೂಲ ಸೌಲಭ್ಯ ಅಭಿವೃದ್ಧಿಗೆ ಆರ್ಥಿಕ ನೆರವು ಒದಗಿಸಿಲ್ಲ ಎಂದೂ ಅವರು ಆರೋಪಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ಒದಗಿಸಿಲ್ಲ ಎಂದು ಹೇಳಲಾಗದು. ನೀಡಿದ ಅನುದಾನವನ್ನು ಬಳಸದೆ ವಾಪಸ್‌ ನೀಡಿರುವುದು ಸರಿಯಲ್ಲ. ಕರ್ನಾಟಕದ ಸಂಸದರು ಮತ್ತಷ್ಟು ನೆರವಿಗೆ ಸಂಬಂಧ ಮನವಿ ಸಲ್ಲಿಸಿದ್ದು, ಕೇಂದ್ರವು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.

ಕರ್ನಾಟಕದ ಬೀದರ್‌, ಯಾದಗಿರಿ ಮತ್ತು ಕಲಬುರ್ಗಿ ಭಾಗದಲ್ಲಿರುವ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೂ ಕೇಂದ್ರ ಆದ್ಯತೆ ನೀಡಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಈ ಭಾಗದಲ್ಲಿರುವ ಪ್ರವಾಸೋದ್ಯಮ ಅಭಿವೃದ್ಧಿಗೆ ₹ 88.67 ಕೋಟಿ ನೆರವು ಕೋರಿ 2017ರಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ವಿವರಣೆ ಕೋರಲಾಗಿದೆ. ವಿವರಣೆ ಲಭಿಸಿದ ಕೂಡಲೇ ಪ್ರಾಥಮಿಕ ಆದ್ಯತೆಯ ಮೇರೆಗೆ ಅನುದಾನ ಒದಗಿಸಲು ಕೇಂದ್ರ ಬದ್ಧವಾಗಿದೆ ಎಂದು ಅವರು ಹೇಳಿದರು.

‘ಉತ್ತರ ಕರ್ನಾಟಕದ ಪ್ರವಾಸೋದ್ಯಮ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಕಲಬುರ್ಗಿ ಪಾರಂಪರಿಕ ತಾಣದ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಬೇಕು. ತೆಲಂಗಾಣ ಗಡಿಯಲ್ಲಿನ ಕೊಂಚಾವರಂ ಬಳಿ ಇರುವ ಯತ್ತಿಪೋತ ಜಲಪಾತದ ಅಭಿವೃದ್ಧಿಗೆ ಅನುದಾನ ಒದಗಿಸಬೇಕು’ ಎಂದು ಕಲಬುರ್ಗಿಯ ಬಿಜೆಪಿ ಸದಸ್ಯ ಡಾ.ಉಮೇಶ ಜಾಧವ್ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT