ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಯಿಂಗ್: ಪೊಲೀಸರ ತಪ್ಪಿಲ್ಲ; ಸದಾನಂದ ಗೌಡ

‘ವಾಹನ ನಿಲುಗಡೆ ವ್ಯವಸ್ಥೆ ಸುಧಾರಣೆಗೆ ಕ್ರಮ ಅಗತ್ಯ’
Last Updated 2 ಫೆಬ್ರುವರಿ 2022, 18:20 IST
ಅಕ್ಷರ ಗಾತ್ರ

ನವದೆಹಲಿ: ಭಾರಿ ವಿವಾದಕ್ಕೆ ಕಾರಣವಾಗಿರುವ ಬೆಂಗಳೂರಿನವಾಹನಗಳ ಟೋಯಿಂಗ್ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಎಂದು ಸಂಸದ ಡಿ.ವಿ. ಸದಾನಂದಗೌಡ ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಈ ವಿಷಯ ತಿಳಿಸಿದ ಅವರು, ಅಸಮರ್ಪಕ ನಿರ್ವಹಣೆಯಿಂದಾಗಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಹೆಬ್ಬಾಳ ಫ್ಲೈ ಓವರ್‌ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು 20 ನಿಮಿಷದ ಬದಲಿಗೆ, 1 ಗಂಟೆಗೂ ಅಧಿಕ ಸಮಯ ವ್ಯಯವಾಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ಜನರು ಮನಬಂದ ಕಡೆ ತಮ್ಮ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ದಟ್ಟಣೆ ಹೆಚ್ಚುತ್ತಿದೆ ಎಂದು ಅವರು ದೂರಿದರು.

ಭ್ರಷ್ಟಾಚಾರ ನಿಯಂತ್ರಣಕ್ಕೆಂದೇ ರಾಜ್ಯ ಸರ್ಕಾರ ಆರಂಭಿಸಿರುವ ‘ಸಕಾಲ’ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಅಗತ್ಯವಿದೆ. ಈ ಮೂಲಕ ಜನರ ಮನೆಬಾಗಿಲಿಗೇ ಸೌಲಭ್ಯ ತಲುಪಿಸಿದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಬಹುದು ಎಂದೂ ಅವರು ಹೇಳಿದರು.

‘ಸಕಾಲ ಯೋಜನೆಯ ಸಮರ್ಪಕ ಜಾರಿ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ. ಈ ಕುರಿತು ಕ್ರಮ ಕೈಗೊಳ್ಳುವ ಭರವಸೆ ದೊರೆತಿದ್ದರೂ ಇದುವರೆಗೆ ಈಡೇರಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲು ಟೋಯಿಂಗ್ ಮಾಡಲಾಗುತ್ತದೆ. ಇದರಲ್ಲಿ ಖಂಡಿತ ಪೊಲೀಸರ ತಪ್ಪಿಲ್ಲ’ ಎಂದು ಅವರು ಪೊಲೀಸರ ಕ್ರಮವನ್ನು ಬೆಂಬಲಿಸಿದರು.

ಸಾರ್ವಜನಿಕರು ತಮ್ಮ ಮನೆಗಳ ಮುಂದಿರುವ ರಸ್ತೆ ಮೇಲೆ ವಾಹನ ನಿಲುಗಡೆ ಮಾಡುವುದರಿಂದಲೂ ಅವ್ಯವಸ್ಥೆ ಉಂಟಾಗುತ್ತಿದೆ. ಮನೆಗಳ ನಿರ್ಮಾಣಕ್ಕೆ ಪರವಾನಗಿ ನೀಡುವಾಗಲೇ ವಾಹನಗಳ ವೈಯಕ್ತಿಕ ಪಾರ್ಕಿಂಗ್ ಸೌಲಭ್ಯ ಹೊಂದುವಂತೆ ಸೂಚಿಸಬೇಕು ಎಂದು ಅವರು ಸಲಹೆ ನೀಡಿದರು.

ಪ್ರತಿಯೊಬ್ಬರೂ ಒಂದಕ್ಕಿಂತ ಹೆಚ್ಚು ವಾಹನ ಹೊಂದಿರುವುದರಿಂದ ನಿಲುಗಡೆಗೆ ಜಾಗವಿಲ್ಲದೆ, ರಸ್ತೆ ಮೇಲೆ ನಿಲುಗಡೆ ಮಾಡುವುದರಿಂದ ಸಮಸ್ಯೆ ತಲೆದೋರಿದೆ. ಮನಸೋ ಇಚ್ಛೆ ವಾಹನ ನಿಲ್ಲಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರು ಸೂಚಿಸಬೇಕು ಎಂದು ಅವರು ಕೋರಿದರು.

ಅಲ್ಲಲ್ಲಿ ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶ ಇದ್ದರೂ ಜನ, ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಾರೆ. ಇದನ್ನು ತಡೆಯಲು ಪೊಲೀಸರು ನಿಯಮಾನುಸಾರ ಟೋಯಿಂಗ್‌ ಮಾಡುತ್ತಾರೆ. ಸರ್ಕಾರವೂ ಜನರನ್ನು ಓಲೈಸಲು ಮುಂದಾಗದೇ ಕ್ರಮಕ್ಕ ಮುಂದಾಗಬೇಕಿದೆ ಎಂದು ಅವರು ಸೂಚಿಸಿದರು.

ಪೊಲೀಸರು ಸುವ್ಯವಸ್ಥೆಗೆ ಶ್ರಮಿಸುತ್ತಾರೆ. ಆದರೆ, ಅವರನ್ನೇ ದೂಷಿಸಿ ಕೆಲಸದಿಂದ ಅಮಾನತು ಮಾಡುವಂತೆ ಆಗ್ರಹಿಸುವುದು ಸರಿಯಲ್ಲ ಎಂದು ಅವರು ಹೇಳಿದರು.

ಕಸ ವಿಲೇವಾರಿ ಸಮಸ್ಯೆಯ ಕುರಿತೂ ಸರ್ಕಾರ ಗಮನ ಹರಿಸಬೇಕು. ಕಸ ವಿಲೇವಾರಿಯನ್ನು ಆಯಾ ವಾರ್ಡ್ ಮಟ್ಟದಲ್ಲೇ ಆಗುವಂತೆ ಹಾಗೂ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಣೆ ಮಾಡುವ ವ್ಯವಸ್ಥೆಯೂ ಮೂಲದಲ್ಲೇ ಆಗುವಂತೆ ಕ್ರಮ ಕೈಗೊಳಬೇಕಿದೆ ಎಂದು ಸದಾನಂದಗೌಡ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT