ಮಂಗಳವಾರ, ಮಾರ್ಚ್ 21, 2023
28 °C

ಕೇರಳ: ಮಗುವಿಗೆ ಜನ್ಮ ನೀಡಿದ ಲಿಂಗತ್ವ ಅಲ್ಪಸಂಖ್ಯಾತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಯಿಕ್ಕೋಡ್: ಕೇರಳದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಬುಧವಾರ ಮಗುವಿಗೆ ಜನ್ಮ ನೀಡಿದ್ದು, ಇದು ದೇಶದ ಮೊದಲ ಪ್ರಕರಣ ಎನ್ನಲಾಗಿದೆ.

‘ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ 9.30ರ ವೇಳೆಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಜಹಾದ್ ಮಗುವಿಗೆ ಜನ್ಮ ನೀಡಿದ್ದಾರೆ’ ಎಂದು ಜಹಾದ್ ಅವರ ಸಂಗಾತಿ ಜಿಯಾ ಪಾವಲ್ ತಿಳಿಸಿದ್ದಾರೆ. 

‘ಮಗು ಮತ್ತು ಜಹಾದ್ ಇಬ್ಬರೂ ಆರೋಗ್ಯವಾಗಿದ್ದಾರೆ’ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಯಾ, ನವಜಾತ ಶಿಶುವಿನ ಲಿಂಗವನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ಅದನ್ನು ಇದೀಗ ಸಾರ್ವಜನಿಕಗೊಳಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. 

ಇತ್ತೀಚೆಗಷ್ಟೇ ಜಿಯಾ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಜಹಾದ್ ಅವರೀಗ ಎಂಟು ತಿಂಗಳ ಗರ್ಭಿಣಿ ಎಂದು ಘೋಷಿಸಿದ್ದರು. ‘ನಾನು ತಾಯಿಯಾಗುವ ಮತ್ತು ಅವನು ತಂದೆಯಾಗುವ ಕನಸನ್ನು ನನಸಾಗಿಸಿಕೊಳ್ಳಲಿದ್ದೇವೆ. ಎಂಟು ತಿಂಗಳ ಭ್ರೂಣವು ಈಗ ಜಹಾದ್ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ನಮಗೆ ತಿಳಿದುಬಂದ ಮಾಹಿತಿ ಪ್ರಕಾರ, ಭಾರತದಲ್ಲಿ ಲಿಂಗಪರಿವರ್ತಿತ ಪುರುಷ (ಟ್ರಾನ್ಸ್‌ಮ್ಯಾನ್‌) ಗರ್ಭಧಾರಣೆ ಮಾಡಿರುವುದು ಇದೇ ಮೊದಲು’ ಎಂದೂ ಜಿಯಾ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದರು.‌

‘ನಾನು ಗರ್ಭಿಣಿಯಾಗುವ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ. ಒಂದು ವೇಳೆ ಹಾಗೆ ಮೊದಲೇ ಯೋಚಿಸಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕ ನನ್ನ ಸ್ತನಗಳನ್ನು ತೆಗೆಸಿಕೊಳ್ಳುತ್ತಿರಲಿಲ್ಲ’ ಎಂದೂ ಜಹಾದ್ ತಿಳಿಸಿದ್ದರು. ಜಹಾದ್ ಅವರ ಸಮಸ್ಯೆ ಅರಿತಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಗು ಆಸ್ಪತ್ರೆಯಲ್ಲಿರುವ ತನಕ ಹಾಲಿನ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. 

ಹುಟ್ಟಿನಿಂದ ಹೆಣ್ಣಾಗಿದ್ದ ಜಹಾದ್, ಲಿಂಗಪರಿವರ್ತಿತ ಪುರುಷನಾಗಿದ್ದು, ಹಾರ್ಮೋನ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮಗು ಹೊಂದಬೇಕೆಂಬ ಆಸೆಯಿಂದ ಹಾರ್ಮೋನ್ ಚಿಕಿತ್ಸೆಯನ್ನು ನಿಲ್ಲಿಸಿದ್ದರು. ಜಹಾದ್ ಅವರ ಸಂಗಾತಿ ಜಿಯಾ ಪಾವಲ್ ಹುಟ್ಟಿನಿಂದ ಗಂಡಾಗಿದ್ದು, ಲಿಂಗಪರಿವರ್ತನೆಯ ಮೂಲಕ ಹೆಣ್ಣಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು